ಪುನೀತ್ ರಾಜ್ಕುಮಾರ್ ಸಹಾಯ ಧನದಿಂದ ಸರ್ಕಾರಿ ಶಾಲೆ ಆಯ್ತು ಸ್ಮಾರ್ಟ್ ಕ್ಲಾಸ್! ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದ ವಿದ್ಯಾರ್ಥಿಗಳು
ಅಪ್ಪು ಅವರು ನೀಡಿದ ಹಣದ ನೆರವಿನಿಂದ ಇಂದು ಸುಸಜ್ಜಿತವಾಗಿ ಎರಡು ಸ್ಮಾರ್ಟ್ ಕ್ಲಾಸ್ ಗಳಾಗಿವೆ. ಆಡಿಯೋ, ವಿಡಿಯೋಗಳ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಲಿಯುತ್ತಿದ್ದಾರೆ.
ಕೊಪ್ಪಳ: ಕೊಪ್ಪಳದ ಗಂಗಾವತಿಯ ಆನೆಗೊಂದಿಯ ಮಲ್ಲಪೂರ ಗ್ರಾಮದ ಶಾಲೆ ಇದೀಗ ಸ್ಮಾರ್ಟ್ ಕ್ಲಾಸ್ ಶಾಲೆ. ಅದಕ್ಕೆ ಕಾರಣ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ದೇವರಾಗಿರುವ ದಿವಂಗತ ಪುನೀತ್ ರಾಜ್ ಕುಮಾರ್(Puneeth Rajkumar). ವ್ಯಕ್ತಿ ಕಣ್ಣಿಂದ ದೂರವಾದರೂ ಅವರು ನಮ್ಮ ಸುತ್ತ ಮಾಡಿ ಹೋಗಿರುವ ಕೆಲಸಗಳು ಅವರನ್ನು ಜೀವಂತವಾಗಿಸುತ್ತವೆ ಎಂಬ ಮಾತು ಸತ್ಯ. ನಟ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆಯಲ್ಲಿ ಕೊಂಚವೂ ವ್ಯತ್ಯಾಸವಾಗಿಲ್ಲ. ಅವರ ಕೆಲಸ, ವ್ಯಕ್ತಿತ್ವದಿಂದಾಗಿ ಅವರ ಅಗಲಿಕೆಯ ನಂತರವೂ ಅವರ ಅಭಿಮಾನಿಗಳ ಪಟ್ಟಿ ಬೆಳೆಸುತ್ತಲೇ ಇದೆ. ಅವರ ಅಭಿಮಾನಿಗಳು ಸಹ ಅಪ್ಪುರಂತೆ ಜನ ಸೇವೆಗೆ ನಿಂತು ಪುನೀತರಾಗುತ್ತಿದ್ದಾರೆ.
ಅಪ್ಪು ಗೆ ಉತ್ತರ ಕರ್ನಾಟಕ ಜನರು ಅಂದ್ರೆ ಎಲ್ಲಿಲ್ಲದ ಪ್ರೀತಿ ಅದರಲ್ಲೂ ಕಲ್ಯಾಣ ಕರ್ನಾಟಕದ ಕೊಪ್ಪಳದ ಗಂಗಾವತಿಯ ಆನೆಗೊಂದಿ ಭಾಗ, ಇಲ್ಲಿನ ನಿಸರ್ಗ, ತುಂಗಾಭದ್ರ ನದಿ, ಅಂಜನಾದ್ರಿ ಬೆಟ್ಟ ಈ ಭಾಗದ ಜನರು ಅಂದ್ರೆ ಪಂಚಪ್ರಾಣ. ಹಾಗಾಗಿ ಆನೆಗೊಂದಿ ಭಾಗವನ್ನು ಅಪ್ಪು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇನ್ನು ವಿಶೇಷ ಅಂದ್ರೆ ಅಪ್ಪು 2020 ರಲ್ಲಿ ಜೇಮ್ಸ್ ಚಿತ್ರೀಕರಣ ವೇಳೆ ಆನೆಗೊಂದಿಯ ಮಲ್ಲಪೂರ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಮುಖಂಡರು, ಮಲ್ಲಪೂರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಪುನೀತ್ ಅವರ ಬಳಿ ತೆರಳಿ ಶಾಲೆಯ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕಲಿಕೆಗೆ ಅನುಕೂಲವಾಗಲು ಸಹಾಯ ಮಾಡುವಂತೆ ಕೇಳಿದ್ದರು. ಅಂದು ಪುನೀತ್ ತಡಮಾಡದೆ ಅವರ ತಂದೆ ಡಾ.ರಾಜಕುಮಾರ್ ಟ್ರಸ್ಟ್ ನಿಂದ 1ಲಕ್ಷ ದೇಣಿಗೆ ನೀಡಿದ್ದರು. ಅಪ್ಪು ಅವರು ನೀಡಿದ ಹಣದ ನೆರವಿನಿಂದ ಇಂದು ಸುಸಜ್ಜಿತವಾಗಿ ಎರಡು ಸ್ಮಾರ್ಟ್ ಕ್ಲಾಸ್ ಗಳಾಗಿವೆ. ಆಡಿಯೋ, ವಿಡಿಯೋಗಳ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಲಿಯುತ್ತಿದ್ದಾರೆ.
ಇನ್ನು ಸ್ಮಾರ್ಟ್ ಕ್ಲಾಸ್ ನ ಸ್ಕ್ರೀನ್ ಓಪನ್ ಮಾಡುತ್ತಲೇ ಅಪ್ಪು ಭಾವಚಿತ್ರ ಬರುತ್ತದೆ. ನಿತ್ಯ ಅಪ್ಪು ಅವರನ್ನು ಸ್ಮರಿಸಿ ಸ್ಮಾರ್ಟ್ ಕ್ಲಾಸ್ ನ್ನು ಶಿಕ್ಷಕರು ತರಗತಿಗಳನ್ನು ಆರಂಭಿಸುತ್ತಾರೆ. ಒಟ್ಟಾರೆ ಮಲ್ಲಪೂರ ಪ್ರೌಢಶಾಲೆಯಲ್ಲಿ ಅಪ್ಪು ಅವರ ಸಹಾಯವನ್ನು ಸದಾ ನೆನೆಯುತ್ತಾರೆ ತರಗತಿಗಳ ಕೊಠಡಿಗಳಲ್ಲಿ ಅಪ್ಪು ಅವರ ಭಾವಚಿತ್ರಗಳನ್ನು ಹಾಕಿದ್ದು, ಶಾಲೆಯ ಮುಖ್ಯೋಪಾಧ್ಯಾಯರಾದ ಹುಸೇನಪ್ಪ ಅವರು ತಮ್ಮ ಟೇಬಲ್ ಗ್ಲಾಸ್ ನಲ್ಲಿಯೂ ಅಪ್ಪು ಫೋಟೊ ಹಾಕಿದ್ದಾರೆ. ಇದೀಗ ಮಲ್ಲಪೂರ ಪ್ರೌಢಶಾಲೆಯನ್ನು ಅಪ್ಪು ಸ್ಮಾರ್ಟ್ ಕ್ಲಾಸ್ ಶಾಲೆಯಂತಲೂ ಕರೆಯಲಾಗುತ್ತಿದೆ. ಮಲ್ಲಪೂರ ಗ್ರಾಮದ ಮುಖಂಡರ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿ ಅಪ್ಪು ಅಚ್ಚಳಿಯದೆ ಉಳಿದಿದ್ದಾರೆ.
Published On - 3:05 pm, Sat, 29 October 22