ಕೊಪ್ಪಳದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ; ಆಹಾರ ಇಲಾಖೆಯ ಅಧಿಕಾರಿಗಳಿಂದ ದಾಳಿ
ಬಡ ಜನರ ಹೊಟ್ಟೆ ತುಂಬಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳ ಮೂಲಕ ಅಕ್ಕಿ ನೀಡುತ್ತದೆ. ಆದ್ರೆ, ಕೊಪ್ಪಳ ಜಿಲ್ಲೆಯಲ್ಲಿ ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಅಕ್ರಮವಾಗಿ ಪಡಿತರ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ ಜಾಲ ಎಗ್ಗಿಲ್ಲದೇ ಕಾರ್ಯನಿರ್ವಹಿಸುತ್ತಿದೆ.
ಕೊಪ್ಪಳ, ಡಿ.08: ಸರ್ಕಾರ ಬಡವರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಂಗಡಿಗಳ ಮೂಲಕ ಬಡಜನರಿಗೆ ಉಚಿತವಾಗಿ ಅಕ್ಕಿ(Rice) ಸೇರಿದಂತೆ ಕೆಲ ಆಹಾರ ಧಾನ್ಯಗಳನ್ನು ನೀಡುತ್ತದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಪಡಿತರದಾರನಿಗೆ ಐದು ಕಿಲೋ ಅಕ್ಕಿ ನೀಡಿದ್ರೆ, ರಾಜ್ಯ ಸರ್ಕಾರ ಐದು ಕಿಲೋ ಅಕ್ಕಿ ಬದಲಾಗಿ ಇದೀಗ ಹಣವನ್ನು ನೀಡುತ್ತಿದೆ. ಆದ್ರೆ, ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು, ಬಡವರ ಹೊಟ್ಟೆ ತುಂಬಿಸದೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಕೊಪ್ಪಳ(Koppala) ಜಿಲ್ಲೆಯ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಮಲ್ಲಪ್ಪ ಮುತಗರ್ ಎನ್ನುವ ವ್ಯಕ್ತಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಮಾಹಿತಿ, ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಿಕ್ಕಿತ್ತು. ಹೀಗಾಗಿ ನಿನ್ನೆ ಸಂಜೆ ಮನೆ ಮೇಲೆ ದಾಳಿ ಮಾಡಿ, ಪಡಿತರ ಅಕ್ಕಿಯನ್ನು ಜಪ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಅಧಿಕಾರಿಗಳು ಬರ್ತಾಯಿರೋದು ಮಾಹಿತಿ ಗೊತ್ತಾಗುತ್ತಿದ್ದಂತೆ, ಮಲ್ಲಪ್ಪ, ಪಡಿತರ ಅಕ್ಕಿ ಇಡಲಾಗಿದ್ದ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಮನೆಯನ್ನೇ ಸೀಲ್ ಮಾಡಿದ ಅಧಿಕಾರಿಗಳು
ಮನೆಯ ಮಾಲೀಕ ಇಲ್ಲದೇ ಇದ್ದಿದ್ದರಿಂದ ಆಹಾರ ಇಲಾಖೆಯ ಅಧಿಕಾರಿಗಳು ಇದೀಗ ಮನೆಯನ್ನು ಸೀಲ್ ಮಾಡಿದ್ದಾರೆ. ಮಾಲೀಕನಿಗೆ ನಲವತ್ತೆಂಟು ಗಂಟೆಯಲ್ಲಿ ಬಂದು ಮನೆಯ ಬಾಗಿಲನ್ನು ತರೆಯುವಂತೆ ಮನೆಗೆ ನೋಟಿಸ್ ಅಂಟಿಸಿದ್ದಾರೆ. ಮಾಲೀಕ ಬರದೇ ಇದ್ದರೆ, ಪಂಚರ ಸಮಕ್ಷಮ ಮನೆಯ ಬೀಗ ಒಡೆದು, ದಾಸ್ತಾನನ್ನು ಜಪ್ತಿ ಮಾಡುತ್ತೇವೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಅಕ್ಕಿಯನ್ನು ಕಾಳ ಸಂತೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಜಾಲ
ಇನ್ನು ಕೊಪ್ಳಳ ಜಿಲ್ಲೆಯಲ್ಲಿ ಅಕ್ಕಿಯನ್ನು ಕಾಳ ಸಂತೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ ಜಾಲವೇ ಅನೇಕ ವರ್ಷಗಳಿಂದ ಬೀಡು ಬಿಟ್ಟಿದೆ. ಜಿಲ್ಲೆಯ ಗಂಗಾವತಿ, ಕಾರಟಗಿ, ಸೇರಿದಂತೆ ಕೆಲ ಬಾಗದ ಜನರು ಹೆಚ್ಚಿನ ಭತ್ತವನ್ನು ಬೆಳೆಯುತ್ತಾರೆ. ಹೀಗಾಗಿ ಕೆಲವರು ಪಡಿತರ ಆಹಾರ ಧಾನ್ಯಗಳನ್ನು ಬಳಸುವುದಿಲ್ಲ. ಹೀಗಾಗಿ ಅಕ್ರಮ ದಂಧೆಕೋರರು, ಜನರಿಂದ ಕಾಳ ಸಂತೆಯಲ್ಲಿ ಅಕ್ರಮವಾಗಿ ಪಡಿತರವನ್ನು ಸಂಗ್ರಹಿಸುತ್ತಾರೆ. ಕೆಲವೊಮ್ಮೆ ಪಡಿತರ ಅಂಗಡಿಗಳ ಮೂಲಕವೇ ಕಾಳ ಸಂತೆಯಲ್ಲಿ ಪಡಿತರ ಧಾನ್ಯಗಳನ್ನು ಸಂಗ್ರಹಿಸಿ, ಬೇರಡೆ ಸಾಗಾಟ ಮಾಡುತ್ತಾರೆ. ಬಡಜನರು ಹೊಟ್ಟೆ ತುಂಬ ಊಟ ಮಾಡಲಿ ಎಂದು ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಪಡಿತರ ವಿತರಿಸುತ್ತದೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಹೀಗಾಗಿ ಈ ಅಕ್ರಮದ ಹಿಂದಿರುವ ಕಿಂಗ್ ಪಿನ್ ಗಳನ್ನು ಪತ್ತೆ ಮಾಡುವ ಕೆಲಸವನ್ನು ಅಧಿಕಾರಿಗಳು ಮತ್ತು ಪೊಲೀಸರು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Fri, 8 December 23