ಕೊಪ್ಪಳ, ಜು.18: ರಾಜ್ಯದ ಮಲೆನಾಡಿನಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಶಯ (Tungabhadra Dam)ಕ್ಕೆ ಹೆಚ್ಚಿನ ಒಳ ಹರಿವು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಶುಕ್ರವಾರ) ಬೆಳಗ್ಗೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ(Shivaraj Tangadagi) ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಶಿವರಾಜ್ ತಂಗಡಗಿ, ‘ಪ್ರಸಕ್ತ ಸಾಲಿನಲ್ಲಿ ಮುಂಗಾರು- ಹಂಗಾಮಿನ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಒಳ ಹರಿವು ಪ್ರಾರಂಭವಾಗಿದೆ. ಜುಲೈ 18ರ ವೇಳೆಗೆ ಜಲಾಶಯದಲ್ಲಿ 46.802 ಟಿಎಂಸಿ ನೀರು ಸಂಗ್ರಹ ಇದ್ದು, ಒಳ ಹರಿವಿನ 104060 ಕ್ಯೂಸೆಕ್ ಇದೆ. ಇದೇ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಲ್ಲಿ ವಾರದಲ್ಲಿ ಜಲಾಶಯದ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸದೇ ನಾಲೆಗಳಿಗೆ ನೀರು ಹರಿಸಲು ಸೂಚಿಸಲಾಗಿದ್ದು, ಶೀಘ್ರದಲ್ಲೇ ಐಸಿಸಿ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು. ರೈತರ ಹಿತ ದೃಷ್ಟಿಯಿಂದ ಮುಂಗಡವಾಗಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ತುಂಗಭದ್ರಾ ಜಲಾಶಯ ಖಾಲಿ ಖಾಲಿ; ಕಳೆದ 7 ತಿಂಗಳಿಂದ ಡ್ಯಾಂಗೆ ಬಾರದ ಒಳಹರಿವು
ಎಡದಂಡೆ ಮುಖ್ಯ ಕಾಲುವೆಗೆ ಜುಲೈ 19ರಿಂದ 4100 ಕ್ಯೂಸೆಕ್ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ 650 ಕ್ಯೂಸೆಕ್ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ 1300 ಕ್ಯೂಸೆಕ್ ನಂತೆ ಹಾಗೂ ಕಾರ್ಖಾನೆಗಳಿಗೆ 60 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು. ಇನ್ನು ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜೂ.1ರಿಂದ 180 ಕ್ಯೂಸೆಕ್ ನಂತೆ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಮಾಹಿತಿ ನೀಡಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ತುಂಗಭದ್ರಾ ಜಲಾಶಯ ಕ್ಕೆ ಕಳೆದ ಕೆಲ ದಿನಗಳಿಂದ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಬರಿದಾಗಿದ್ದ ಜಲಾಶಯಕ್ಕೆ ಇದೀಗ ಜೀವಕಳೆ ಬಂದಿದೆ.
ಡ್ಯಾಂ ಸಾಮರ್ಥ್ಯ- 105.788 ಟಿಎಂಸಿ
ಸದ್ಯದ ಸಂಗ್ರಹ – 46.802 ಟಿಎಂಸಿ
ಒಳ ಹರಿವು – 104060 ಕ್ಯೂಸೆಕ್ಸ್
ಹೊರ ಹರಿವು – 300 ಕ್ಯೂಸೆಕ್ಸ್
ಸಂಗ್ರಹ – 10.947 ಟಿಎಂಸಿ
ಒಳ ಹರಿವು – 11425 ಕ್ಯೂಸೆಕ್ಸ್
ಹೊರ ಹರಿವು – 262 ಕ್ಯೂಸೆಕ್ಸ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Thu, 18 July 24