ಬೆಂಗಳೂರು, ಮಾ.30: ಕೊಪ್ಪಳ (Koppal) ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಕರಡಿ ಸಂಗಣ್ಣ (Karadi Sanganna) ಅವರ ಕನಸಿಗೆ ಬಿಜೆಪಿ ಹೈಕಮಾಂಡ್ ತನ್ನೀರೆರಚಿತ್ತು. ಇದರಿಂದಾಗಿ ತೀವ್ರ ಅಸಮಾಧಾನಗೊಂಡಿದ್ದ ಕರಡಿ ಸಂಗಣ್ಣ ಅವರನ್ನು ಮನವೊಲಿಸಲು ರಾಜ್ಯ ನಾಯಕರು ತೀವ್ರ ಕಸರತ್ತು ನಡೆಸಿದ್ದರು. ಇಂದು ಬಿಎಸ್ ಯಡಿಯೂರಪ್ಪ (BS Yediyurappa) ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಕರಡಿ ಸಂಗಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಇಂದು ಕರಡಿ ಸಂಗಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಅವರನ್ನು ಯಡಿಯೂರಪ್ಪ ನಿವಾಸಕ್ಕೆ ಕರೆದೊಯ್ದಿದ್ದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತುಕತೆ ನಡೆಸಿ ಕರಡಿ ಸಂಗಣ್ಣ ಅವರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾದರು.
ಸಂಧಾನ ಮಾತುಕತೆ ವೇಳೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಮತ್ತು ಮಾಜಿ ಶಾಸಕ ಬಸವರಾಜ ದಡೇಸೂಗೂರು ಕೂಡಾ ಉಪಸ್ಥಿತರಿದ್ದರು. ಮಾತುಕತೆ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟೂರ್ ಪರ ಪ್ರಚಾರ ನಡೆಸುವಂತೆ ಮನವಿ ಮಾಡಲಾಯಿತು. ಅದರಂತೆ, ಸೋಮವಾರ ಕುಷ್ಠಗಿಯಲ್ಲಿ ನಡೆಯುವ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಂಗಣ್ಣ ಕರಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ರೇಣುಕಾಚಾರ್ಯ ಮತ್ತು ಇತರ ಅತೃಪ್ತರೊಂದಿಗೆ ಯಡಿಯೂರಪ್ಪ ಚರ್ಚೆ, ಅಸಮಾಧಾನ ಶಮನಕ್ಕೆ ಕಸರತ್ತು!
ಟಿಕೆಟ್ ಕೈತಪ್ಪಿದ ಕೋಪಕ್ಕೆ ಬಿಜೆಪಿ ಹೈಕಮಾಂಡ್ಗೆ ಸೆಡ್ಡು ಹೊಡೆದಿದ್ದ ಕರಡಿ ಸಂಗಣ್ಣ ಅವರು ಕೊಪ್ಪಳದಲ್ಲಿ ಸ್ವಾಭಿಮಾನದ ಹೆಸರಲ್ಲಿ ಬೆಂಬಲಿಗರ ಸಮಾವೇಶ ಆಯೋಜಿಸಿದ್ದರು. ಇದನ್ನು ವಿಫಲಗೊಳಿಸಲು ಬಿಜೆಪಿ ನಾಯಕರು ತಂತ್ರಗಾರಿ ಮಾಡಿದ್ದರು. ಸಭೆಗೆ ಹೋಗದಂತೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಿಗೆ ಮೌಖಿಕ ಸಂದೇಶ ನೀಡಿದ್ದರು.
ಅಲ್ಲದೆ, ಕರಡಿ ಸಂಗಣ್ಣ ಅವರನ್ನು ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದರು. ವಿಧಾನಸಭೆಯಲ್ಲಿ ಬಿಜೆಪಿ ಮುಖ್ಯ ಸಚೇತಕರಾಗಿರುವ ಜಿಲ್ಲೆಯ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀಳ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕರಡಿ ಸಂಗಣ್ಣ ಮನೆಗೆ ಭೇಟಿ ನೀಡಿ, ಸಂಗಣ್ಣ ಜೊತೆ ಮಾತುಕತೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಕೂಡ ಪಕ್ಷ ಬಿಡುವ ನಿರ್ಧಾರ ಮಾಡಬೇಡಿ, ಸುದ್ದಿಗೋಷ್ಟಿ ಮಾಡಬೇಡಿ, ಪಕ್ಷದಲ್ಲಿಯೇ ಇರಿ, ಪಕ್ಷ ನಿಮ್ಮ ಸೇವೆಯನ್ನು ಗುರುತಿಸುತ್ತದೆ ಎಂದು ಹೇಳಿ ಮನವೊಲಿಸುವ ಯತ್ನ ನಡೆಸಿದ್ದರು.
ಜೊತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಕೂಡ ಮಾತನಾಡಿದ್ದರು. ಸದ್ಯ, ಸಂಸದ ಕರಡಿ ಸಂಗಣ್ಣ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಬಂಡಾಯದ ಭೀತಿ ಎದುರಿಸುತ್ತಿದ್ದ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟೂರ್ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Sat, 30 March 24