ಮೊಹರಂ ಹಬ್ಬ ಆಚರಣೆ ವೇಳೆ ಕೆಂಡ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ಯುವಕ
ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ಆಚರಣೆಯಲ್ಲಿ ದೇವರು ಹೊತ್ತವರು ಅಗ್ನಿಯನ್ನು ಹಾಯುವುದು ಸಂಪ್ರದಾಯವಿದೆ. ಈ ರೀತಿ ಯುವಕನೂ ಸಹ ಬೆಂಕಿ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದಿದ್ದಾನೆ.

ಕೊಪ್ಪಳ: ಮೊಹರಂ ಹಬ್ಬದ(Muharram) ಆಚರಣೆ ವೇಳೆ ಅವಾಂತರವೊಂದು ಸಂಭವಿಸಿದೆ. ಯುವಕನೋರ್ವ ಎಡವಿ ಅಗ್ನಿಕೊಂಡಕ್ಕೆ ಬಿದ್ದ ಘಟನೆ ಕೊಪ್ಪಳ ತಾಲೂಕಿನ ಅಳವಡಿ ಗ್ರಾಮದಲ್ಲಿ ನಡೆದಿದೆ. ಅಗ್ನಿಕೊಂಡದಲ್ಲಿ ಬಿದ್ದ ಯುವಕನಿಗೆ ಸುಟ್ಟ ಗಾಯಗಳಾಗಿದ್ದು ಗಾಯಾಳು ಯುವಕನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ಆಚರಣೆಯಲ್ಲಿ ದೇವರು ಹೊತ್ತವರು ಅಗ್ನಿಯನ್ನು ಹಾಯುವುದು ಸಂಪ್ರದಾಯ. ಅಥವಾ ದೇವರಲ್ಲಿ ಬೇಡಿಕೆ ಇಟ್ಟು ಬೇಡಿಕೆ ಈಡೇರಿದಾಗ ಬೆಂಕಿ ಹಾಯುತ್ತಾರೆ. ಈ ರೀತಿ ಯುವಕನೂ ಸಹ ಬೆಂಕಿ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದಿದ್ದಾನೆ. ಬೀಳುತ್ತಿದ್ದಂತೆ ತನಗೆ ಏನೂ ಆಗಿಲ್ಲವೆಂದು ಎದ್ನೋ ಬಿದ್ನೋ ಎನ್ನುವಂತೆ ಓಡಿದ್ದಾನೆ. ಯುವಕನಿಗೆ ಸುಟ್ಟ ಗಾಯಗಳಾಗಿವೆ. ಯುವಕ ಕೊಂಡಕ್ಕೆ ಬಿದ್ದು ಓಡುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ.
ಕೆಂಡ ತುಳಿಯುವ ಸಂಪ್ರದಾಯ, ಆಚರಣೆ ಅನೇಕ ಧರ್ಮಗಳಲ್ಲಿ ಇದೆ. ಕಳೆದ ಹಲವು ವರ್ಷಗಳಿಂದ ಗ್ರಾಮದೇವತೆಯ ಹಬ್ಬ ಆಚರಣೆ ಅಥವಾ ಮೊಹರಂ ಸೇರಿದಂತೆ ಅನೇಕ ಆಚರಣೆ ವೇಳೆ ಭಕ್ತರು, ಬೆಂಕಿ ತುಳಿಯುವವರು ಅಗ್ನಿಕೊಂಡಕ್ಕೆ ಬೀಳುವ ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಆದರೆ ಜನರು ಮಾತ್ರ ಎಚ್ಚೆತ್ತುಕೊಳ್ಳುವ ಪ್ರಯತ್ನ ಪಡುವುದಿಲ್ಲ. ಅಪಾಯವಿರುವ ಕಡೆಯೇ ನಿರ್ಲಕ್ಷ್ಯ ತೋರುತ್ತಾರೆ. ಅಥವಾ ಬೆಂಕಿ ಹಾಯುವ ಆಚರಣೆ ಮಾಡುವಾಗ ಸಂಬಂಧಪಟ್ಟವರು ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಮೊಹರಂ ಹಬ್ಬ ಆಚರಣೆ ವೇಳೆ ಕೆಂಡ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ಯುವಕ
ಇದನ್ನೂ ಓದಿ: Muharram 2021: ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?