
ಬೆಂಗಳೂರು, ಜೂನ್ 10: ಕೇರಳಂನ ಕೊಟ್ಟಿಯೂರು ದೇವಾಲಯಕ್ಕೆ (Kottiyoor Temple) ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ನೊಂದ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆ, ನಿರ್ವಹಣೆಯ ಕುರಿತು ಆಕ್ಷೇಪಿಸಿದ್ದಾರೆ. ಇದರ ಬೆನ್ನಲ್ಲೇ ದೇವಾಲಯದ ಸೆಕ್ಯೂರಿಟಿಯ ಕುರಿತಾದಂತೆ ಮಾಹಿತಿ ನೀಡಿರುವ ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ, ಕನ್ನಡದಲ್ಲೇ ಮಾತನಾಡಿ ಕರ್ನಾಟಕದ ಭಕ್ತರನ್ನು ಸ್ವಾಗತಿಸಿದ್ದಾರೆ.
ಕೇರಳಂ ರೇಂಜ್ ಡಿಐಜಿ ಯತೀಶ್ ಚಂದ್ರ, ಕರ್ನಾಟಕದ ಭಕ್ತರಿಗಾಗಿ ಕನ್ನಡದಲ್ಲಿಯೇ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಮಾತನಾಡಿರುವ ಅವರು, ಕೊಟ್ಟಿಯೂರು ದೇವಸ್ಥಾನದವರು ಹಾಗೂ ಪಂಚಾಯತ್ನವರು ವೈಶಾಖ ಮಹೋತ್ಸವಕ್ಕೆ ಬಹಳ ಚೆನ್ನಾಗಿ ಸಿದ್ಧತೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾಹನ ನಿಲುಗಡೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಕರ್ನಾಟಕದಿಂದ ಬಹಳಷ್ಟು ಭಕ್ತಾದಿಗಳು ಬರುತ್ತೀರಿ. ನಿಮಗಾಗಿ ದೇವಸ್ಥಾನದ ಆವರಣದಲ್ಲಿ ಕನ್ನಡದಲ್ಲೇ ನಾಮಫಲಕಗಳು (ಬೋರ್ಡ್‌ಗಳು) ಮತ್ತು ಕನ್ನಡದಲ್ಲೇ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪರಿಸರವನ್ನು ಸ್ವಚ್ಛವಾಗಿಡುವಂತೆ ಮತ್ತು ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಕನ್ನಡಿಗರಲ್ಲಿ ಅತ್ಯಂತ ಆಪ್ತವಾಗಿ ವಿನಂತಿಸಿಕೊಂಡಿದ್ದಾರೆ. ಕ್ಯೂನಲ್ಲಿ ಆರಾಮಾಗಿ ಬಂದು ದೇವರ ದರ್ಶನ ಮಾಡಿ. ನಾವು ಪೊಲೀಸರು ಭದ್ರತೆಗೆ ಎಲ್ಲಾ ತಯಾರಿ ಮಾಡಿದ್ದೇವೆ. ತಾವೆಲ್ಲರೂ ಇಲ್ಲಿಗೆ ಬಂದು ದರ್ಶನ ಮಾಡಿ, 26 ದಿನಗಳ ಈ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಕೇರಳ ಪೊಲೀಸ್ ಅಧಿಕಾರಿಯೊಬ್ಬರ ಈ ಕನ್ನಡದ ವೀಡಿಯೊ ವೈರಲ್ ಆಗುತ್ತಿದ್ದಂತೆ, ಯಾರು ಈ ಯತೀಶ್ ಚಂದ್ರ? ಎಂದು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವೆಂದರೆ, ಈ ಖಡಕ್ ಅಧಿಕಾರಿ ಮೂಲತಃ ನಮ್ಮ ಹೆಮ್ಮೆಯ ಕನ್ನಡಿಗನೇ ಆಗಿದ್ದಾರೆ. ದಾವಣಗೆರೆ ಮೂಲದವರಾದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಉನ್ನತ ಹುದ್ದೆಯಲ್ಲಿದ್ದರೂ ಸಮಾಜ ಸೇವೆ ಮಾಡುವ ಹಂಬಲದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ (IPS) ಅಧಿಕಾರಿಯಾಗಿದ್ದಾರೆ.
ಇದನ್ನೂ ಓದಿ ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಆರೋಪ: ತಾರತಮ್ಯದ ಬಗ್ಗೆಯೂ ಭಕ್ತರ ಅಸಮಾಧಾನ
ಈ ಹಿಂದೆ ಪ್ರಧಾನಮಂತ್ರಿಯವರ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಅತ್ಯುತ್ತಮ ಫಿಟ್‌ನೆಸ್ ಮೂಲಕ ಇವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಕಳೆದ 2021 ರಲ್ಲಿ ಡೆಪ್ಯುಟೇಶನ್ ಮೇಲೆ ಕರ್ನಾಟಕಕ್ಕೆ ಬಂದಿದ್ದ ಯತೀಶ್ ಚಂದ್ರ ಅವರು ಬೆಂಗಳೂರು ನಗರ ಪೊಲೀಸ್‌ನ ಡೆಪ್ಯುಟಿ ಕಮಿಷನರ್ (DCP) ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಸೇವೆ ಮುಗಿಸಿ ಮರಳಿ ಕೇರಳಕ್ಕೆ ತೆರಳಿದ ಇವರನ್ನು ಅಲ್ಲಿನ ಸರ್ಕಾರ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ICT) ವಿಭಾಗದ ಎಸ್ಪಿಯಾಗಿ ನೇಮಿಸಿತ್ತು. ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಕೊಟ್ಟಿಯೂರು ದೇವಸ್ಥಾನಕ್ಕೆ ಬರುವ ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲೇ ಸಂದೇಶ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:14 pm, Wed, 10 June 26