ಬೆಂಗಳೂರು: ಜನರ ಮಧ್ಯೆ ಹೋರಾಡುವ ನಾಯಕರ ಗುರುತಿಸಲು ತಂಡ ಕಟ್ಟುತ್ತೇವೆ. ಹೋರಾಡುವ ಸಾಮರ್ಥ್ಯವಿರುವ ಪ್ರಮುಖರನ್ನು ಗುರುತಿಸಿ ಅಂತಹವರಿಗಷ್ಟೇ ಟಿಕೆಟ್ ನೀಡುತ್ತೇವೆ. ಪಕ್ಷ ಬಿಟ್ಟು ಹೋದವರಿಗೂ ಮತ್ತೆ ಸೇರ್ಪಡೆಗೆ ಅವಕಾಶ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ಸೇರಬಯಸುವ ಇತರರಿಗೂ ಮುಕ್ತ ಆಹ್ವಾನ ನೀಡುತ್ತಿದ್ದೇನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ನಡೆದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು, ಪ್ರಮುಖರು ಮನೆಗಳಲ್ಲಿ ಪಕ್ಷದ ಸಭೆ ಮಾಡುವಂತಿಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಸಭೆಗಳನ್ನು ಮಾಡಬೇಕು. ಏನಿದ್ದರೂ ನಾವು ಜನಗಳ ಮಧ್ಯೆ ನಿಂತು ಹೋರಾಡಬೇಕು ಎಂದು ಅವರು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.
ಕೊಟ್ಟ ಮಾತನ್ನೀಗ ಉಳಿಸಿಕೊಂಡಿದ್ದಾರೆ..
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, 8 ತಿಂಗಳ ಹಿಂದೆಯೇ ರಾಜ್ಯಸಭೆ ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ಸುಳಿವು ನೀಡಿದ್ದರು. ಕೊಟ್ಟ ಮಾತನ್ನೀಗ ಉಳಿಸಿಕೊಂಡಿದ್ದಾರೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ಪದ ಗ್ರಹಣ ಸಮಾರಂಭದಲ್ಲಿ ಹೇಳಿಕೆ ನೀಡಿದರು.
ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ಧ್ರುವ ನಾರಾಯಣ ಬೆಂಗಳೂರಿನಲ್ಲಿ ಭಾನುವಾರ ಅಧಿಕಾರ ಸ್ವೀಕರಿಸಿದರು. ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹಾಗೂ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ , ರಾಹುಲ್ ಗಾಂಧಿಯವರಿಗೆ ಅಭಿನಂದನಾ ನಿರ್ಣಯವನ್ನು ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್.ಶಂಕರ್ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಕಾರ್ಯದರ್ಶಿ ಸಂದೀಪ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್. ಶಂಕರ್, ಸಹ ಅಧ್ಯಕ್ಷ ವಿ.ಆರ್. ಸುದರ್ಶನ್ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಯಾವ ನಾಯಕರೇ ಆಗಲಿ, ಸರಿಯಾದ ಸಮಯಕ್ಕೆ ಬಂದರೆ ಮಾತ್ರ ಅವಕಾಶ ನೀಡಿ. ಇಲ್ಲದಿದ್ದರೆ ಹಿಂದಿನ ಬಾಗಿಲಿನಿಂದ ಬರಲಿ ಎಂದು ಡಿ.ಕೆ.ಶಿವಕುಮಾರ್ ತಡವಾಗಿ ಬರುತ್ತಿದ್ದ ಕೆಲ ನಾಯಕರ ಮೇಲೆ ಗರಂ ಆದರು. ಬಾಗಿಲು ಬಳಿ ನಿಂತು ಗಲಾಟೆ ಮಾಡುತ್ತಿದ್ದ ಕಾರ್ಯಕರ್ತರ ಮೇಲೆಯೂ ಅವರು ಮುನಿಸಿಕೊಂಡರು.
ವ್ಯಕ್ತಿ ಪೂಜೆ ಮಾಡುವುದು ಬೇಡ, ಪಕ್ಷ ಪೂಜೆ ಮಾಡೋಣ ಎಂದ ಡಿ.ಕೆ. ಶಿವಕುಮಾರ್, ನಾನು ಇಲ್ಲಿಗೆ ಬಂದಾಗ ‘ಡಿಕೆಶಿ ಮುಂದಿನ ಸಿಎಂ’ ಎಂದು ಜಯಕಾರ ಹಾಕಿದ್ದರು. ಇದು ನನಗೆ ಅಗತ್ಯ ಇಲ್ಲ. ಏಕೆಂದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಮಾತ್ರ ನನಗೆ ಮುಖ್ಯ ಎಂದು ಅವರು ಸಿದ್ದರಾಮಯ್ಯ ಆಪ್ತರ ಬಣಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬಿಜೆಪಿ, ಜೆಡಿಎಸ್ ಮುಖಂಡರಿಗೆ ಆಹ್ವಾನ ನೀಡಿದ ಅವರು, ಷರತ್ತು ರಹಿತವಾಗಿ ಯಾರೇ ಪಕ್ಷಕ್ಕೆ ಬಂದ್ರೂ ಸ್ವಾಗತಿಸುತ್ತೇವೆ. ಅದಕ್ಕಾಗಿಯೇ ಒಂದು ಸಮಿತಿ ರಚನೆ ಮಾಡುತ್ತೇವೆ ಎಂದು ಘೋಷಿಸಿದರು.
ಇದನ್ನೂ ಓದಿ: ಮುಖ ತೋರಿಸಲಾಗದೇ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕುಹಕ
ಸುದ್ದಿ ವಿಶ್ಲೇಷಣೆ | ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರು; ಪಕ್ಷ ಬಲವರ್ಧನೆ ಸಾಧ್ಯವೇ?