ಕೆಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ; ಸಂಪುಟದಿಂದ ಕೈಬಿಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಒತ್ತಾಯ
ಆರ್ಎಸ್ಎಸ್ನವರಿಗೆ ಪ್ರಚೋದನಕಾರಿ ಹೇಳಿಕೆ ನೀಡುವವರೇ ಬೇಕು. ಇಂತಹ ಸಚಿವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಆಗಲ್ಲ. ಕರ್ನಾಟಕ ರಾಜ್ಯದ ಜನರ ಹಿತಕ್ಕಿಂತ ಗೊಂದಲ ಸೃಷ್ಟಿಸುವುದೇ ಇಂಥವರ ಉದ್ದೇಶ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಮ್ಮ ತಂಟೆಗೆ ಯಾರೇ ಬಂದರೂ ನಾವು ಸುಮ್ಮನೆ ಬಿಡಲ್ಲ. ಯಾವುದರಲ್ಲಿ ಹೊಡೀತಾರೋ ಅದರಲ್ಲೇ ಹೊಡೆದು ತೆಗೀರಿ ಎಂಬ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟಿವಿ9ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡಿ ಎಂದು ಹೇಳಿದ್ದಾರೆ. ಸಚಿವ ಸಂಪುಟದಿಂದ ಈಶ್ವರಪ್ಪರನ್ನ ತೆಗೆಯುವಂತೆ ಒತ್ತಾಯ ಮಾಡಿದ್ದಾರೆ.
ಆರ್ಎಸ್ಎಸ್ನವರಿಗೆ ಪ್ರಚೋದನಕಾರಿ ಹೇಳಿಕೆ ನೀಡುವವರೇ ಬೇಕು. ಇಂತಹ ಸಚಿವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಆಗಲ್ಲ. ಕರ್ನಾಟಕ ರಾಜ್ಯದ ಜನರ ಹಿತಕ್ಕಿಂತ ಗೊಂದಲ ಸೃಷ್ಟಿಸುವುದೇ ಇಂಥವರ ಉದ್ದೇಶ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಲೀಂ ಅಹ್ಮದ್ ಒತ್ತಾಯ ಮಾಡಿದ್ದಾರೆ.
ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಈಗ ನಮ್ಮದೇ ಸರ್ಕಾರ ದೇಶಾದ್ಯಂತ ಅಧಿಕಾರದಲ್ಲಿದೆ. ಹಾಗಾಗಿ ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಯನ್ನು ಮುಟ್ಟಿ ನೋಡಲಿ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲಿ ಇಂದು ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಕೇವಲ ಅಧಿಕಾರಕ್ಕೆ ಇರುವ ಪಕ್ಷ ಅಲ್ಲ. ರಾಷ್ಟ್ರೀಯ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಹೊಂದಿರುವ ಪಕ್ಷ. ಈ ವಿಷಯವನ್ನು ಜನರಿಗೆ ಮುಟ್ಟಿಸಿ ಅವರ ಮನ ಗೆಲ್ಲಲು ಅಸಂಖ್ಯಾತ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಒಂದು ಕಾಲಕ್ಕೆ ನಮ್ಮ ಸಂಘಟನೆ ಬಹಳ ದುರ್ಬಲವಾಗಿತ್ತು. ಆಗ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ನಮ್ಮ ಹಿರಿಯರು ಬಿ ಕಾಂ, ಬಿ ಕೂಲ್ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದು ಮಾತನಾಡಿದ್ದರು.
ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಕೇರಳ ಸೇರಿದಂತೆ ಎಲ್ಲೆಡೆ ಸಂಘಟನೆ ಬಲವಾಗಿದೆ. ಇಂತಹ ಸಂದರ್ಭದಲ್ಲ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಂಘಟನೆಯ ಪ್ರಮುಖರು ಬಿ ಕಾಂ ಎಂದು ಹೇಳುವ ಬದಲು ಬಿ ಫೇಸ್ ವಿತ್ ಸೇಮ್ ಸ್ಟಿಕ್ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ನಾವು ಸಂಘಟನಾತ್ಮಕವಾಗಿ ಶಕ್ತಿಯುತವಾಗಿ ಹೊರಹೊಮ್ಮಿದ್ದೇವೆ. ಆದರೆ ಇಷ್ಟಕ್ಕೆ ಮೈ ಮರೆಯಬಾರದು. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಸದಾ ಜಾಗೃತವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ: ಸಚಿವ ಈಶ್ವರಪ್ಪ
(KPCC Secretary Saleem Ahmed on KS Eshwarappa Controversial statement)
Published On - 4:48 pm, Sun, 8 August 21