ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಿ: ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕರ್ತೆಯರ ಪ್ರತಿಭಟನೆ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸದಾಶಿವನಗರದಲ್ಲಿರುವ ರಮೇಶ್ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೇಪಿಸ್ಟ್ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಮಧ್ಯಪ್ರವೇಶ ಮಾಡಬೇಕು. ಈ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲ. ಸಿಡಿಯಲ್ಲಿದ್ದ ಯುವತಿಯ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಯುವತಿಯ ಪೋಷಕರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ. ಯುವತಿಗೆ ನ್ಯಾಯ ಕೊಡಿಸಲು ಹೋರಾಟ ಮಾಡಬೇಕು. ಅತ್ಯಾಚಾರಿ ರಮೇಶ್ ಪರವಾಗಿ ಪೋಷಕರು ನಿಲ್ಲಬಾರದು ಎಂದು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಪ್ರತಿಭಟನೆಯು ಜೋರಾಗಿದ್ದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು, ಬೆಳಗಾವಿ ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಕಬ್ಬನ್ಪಾರ್ಕ್ ಠಾಣೆ ಮುಂದೆ ಧರಣಿಗೆ ಸಿದ್ಧತೆ ನಡೆಸಿದ್ದಾರೆ. ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಎಫ್ಐಆರ್ ಆಗಿದ್ದರು ರಮೇಶ್ ಜಾರಕಿಹೊಳಿ ಬಂಧಿಸಿಲ್ಲ. ರಮೇಶ್ರನ್ನು ಬಂಧಿಸಿ ಎಂದು ಧರಣಿಗೆ ಮುಂದಾಗಿದ್ದಾರೆ.
ಡಿ.ಕೆ. ಶಿವಕುಮಾರ್ ವಾಹನದ ಮೇಲೆ ಚಪ್ಪಲಿ ಎಸೆತ ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಬೆಂಗಾವಲು ವಾಹನದ ಮೇಲೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಚಪ್ಪಲಿ ಎಸೆದಿದ್ದಾರೆ. ಡಿ.ಕೆ. ಶಿವಕುಮಾರ್ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಿಂದ ಹೋಟೆಲ್ಗೆ ತೆರಳುವ ವೇಳೆ ಘಟನೆ ನಡೆದಿದೆ. ಏರ್ಪೋರ್ಟ್ ರಸ್ತೆಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಧರಣಿ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಬೆಳಗಾವಿ ಜಿಲ್ಲಾ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಳಗಾವಿ ನಗರ ಪ್ರವೇಶ ವೇಳೆ ರಮೇಶ್ ಬೆಂಬಲಿಗರಿಂದ ಡಿ.ಕೆ. ಶಿವಕುಮಾರ್ ವಾಹನಕ್ಕೆ ತಡೆಯೊಡ್ಡಿದ್ದಾರೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಕುಳಿತಿದ್ದ ಕಾರಿಗೆ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಈ ವೇಳೆ ಶಿವಕುಮಾರ್ ಕಾರಿನ ಗಾಜು ಪುಡಿಪುಡಿಯಾಗಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್, ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ
Published On - 5:14 pm, Sun, 28 March 21