ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್​ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ

ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ಗಳು ಸಂಚರಿಸುತ್ತಿರಲಿಲ್ಲ. ಸತತವಾಗಿ ನಾಲ್ಕನೇ ದಿನ ಕಾಲಿಟ್ಟ ಮುಷ್ಕರದಲ್ಲಿ ಕೆಲವು ಕಡೆ ಬಸ್​ ಸಂಚಾರ ಆರಂಭಗೊಂಡಿದೆ. ಇನ್ನು ಕೆಲವೆಡೆ ಬಸ್​ಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಬಸ್​ ಸಂಚಾರ ಆರಂಭಗೊಂಡಿದ್ದರಿಂದ ಪ್ರಯಾಣಿಕರ ಮುಖದಲ್ಲಿ ಅಲ್ಪ ಖುಷಿ ಕಾಣುತ್ತಿದೆ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್​ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ
ಮತ್ತೆ ಆರಂಭವಾದ ಬಸ್​ ಸಂಚಾರ
shruti hegde

| Edited By: sadhu srinath

Dec 14, 2020 | 10:29 AM

ಬೆಂಗಳೂರು: ಸಾರಿಗೆ ನೌಕರರು ಮುಷ್ಕರದಲ್ಲಿ ತೊಡಗಿರುವ ಹಿನ್ನೆಲೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸಂಚಾರ ನಡೆಸುತ್ತಿರಲಿಲ್ಲ. ಕಳೆದ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಸ್ ಮುಷ್ಕರ ವಾಪಸ್ ಪಡೆದಿದ್ದಾರೆ ಎಂಬುದು  ಗೊಂದಲದ ಗೂಡಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಬಸ್​ ಸಂಚಾರ ಪ್ರಾರಂಭಗೊಂಡಿದೆ. ಇನ್ನು ಕೆಲವೆಡೆ ಬಸ್ ಸಂಚಾರಗೊಳ್ಳುವ ಯಾವುದೇ ನಿರೀಕ್ಷೆಗಳು ಕಾಣಿಸುತ್ತಿಲ್ಲ. ಹಾಗಾದ್ರೆ ಎಲ್ಲೆಲ್ಲಿ ಬಸ್​ ಸಂಚಾರ ಆರಂಭಗೊಂಡಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು:  ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆವರೆಗೆ 69 ಬಿಎಂಟಿಸಿ ಬಸ್​ಗಳ ಸಂಚಾರಗೊಂಡಿದೆ. ನಿಧಾನಗತಿಯಲ್ಲಿ ಒಂದೊಂದೆ ಬಸ್​ಗಳು ಸಂಚಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಬಾಗಲಕೋಟೆ: ಬಾಗಲಕೋಟೆ ಕೆಎಸ್​ಆರ್​ಟಿಸಿ ಬಸ್​ನ ಕೆಲವು ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನುಕೆಲವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರಗೊಂಡಿದೆ. ‘ನಮಗೆ ಯಾವುದೇ ಅಧಿಕಾರಿಗಳು ಒತ್ತಡ ಹಾಕಿಲ್ಲ ಬೆದರಿಕೆ ನೀಡಿಲ್ಲ. 3 ದಿನಗಳ ಕಾಲ ನಾವು ಮುಷ್ಕರಕ್ಕೆ ಬೆಂಬಲ ನೀಡಿದ್ದೇವೆ. ಈಗ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದು ಬಾಗಲಕೋಟೆ ಬಸ್ ನೌಕರರು ಹೇಳಿದ್ದಾರೆ. ಬಾಗಲಕೋಟೆಯಿಂದ ಜಮಖಂಡಿಗೆ ಬಸ್ ಸಂಚರಿಸಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ ಒಟ್ಟು  12 ಬಸ್​ಗಳ ಸಂಚಾರ ಆರಂಭಗೊಂಡಿದೆ. ಮೂರು ದಿನಗಳಿಂದ ಕೆಎಸ್​ಆರ್​ಟಿಸಿ​ಗೆ ಕೋಟಿ ಕೋಟಿ ನಷ್ಟವಾಗಿದೆ. ವಾಯವ್ಯ ವಿಭಾಗಕ್ಕೆ 12 ಕೋಟಿ ರೂ. ನಷ್ಟವಾಗಿದೆ. ಇಂದು ನಾವು ಬಸ್​ ಸಂಚಾರ ಪ್ರಾರಂಭಿಸುತ್ತೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದ್ದಾರೆ.

ಧಾರವಾಡ: ಧಾರವಾಡದಲ್ಲಿ ಕೆಲಸಕ್ಕೆ ಹೋಗಲು ಪ್ರಯಾಣಿಕರ ಪರದಾಟ ನಡೆಸುತ್ತಿದ್ದಾರೆ. 3 ದಿನಗಳಾದರೂ ಬಸ್​ ನೌಕರರ ಮುಷ್ಕರ ಮುಗಿದಿಲ್ಲ. ಚಾಲಕರು ಖಾಸಗಿ ವಾಹನಗಳಲ್ಲಿ ಸಂಚರಿಸಬೇಕೆಂದರೆ ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಹಣ ಕೊಡಲಾಗದೇ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

ಹಾಸನ: ಹಾಸನದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಹಾಸನದಿಂದ ಬೆಂಗಳೂರಿಗೆ ಹೋಗುವ ಬಸ್​ ಹೊರಟಿದೆ. ಬಸ್​ ಬಂದ್ ಇಲ್ಲಿಗೇ ನಿಲ್ಲುವ ಹಂತದಲ್ಲಿದೆ. ನಾಲ್ಕನೆ ದಿನವಾದ ಇಂದು ಎಂದಿನಂತೆ ಬಸ್ ಸಂಚಾರ ಆರಂಭವಾಗೋ ನಿರೀಕ್ಷೆಯಿದೆ. ಹಾಸನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್​ಗಳು ಕಂಡುಬರುತ್ತಿವೆ. ಬಸ್​ ನಿಲ್ದಾಣದಲ್ಲಿ ಪ್ರಯಾಣಿಕ ದಂಡೇ ನಿಂತಿದೆ.

ದಾವಣಗೆರೆ: ನಾಲ್ಕನೇ ದಿನವೂ ದಾವಣಗೆರೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಬೆಳಿಗ್ಗೆ ನಿರಂತರವಾಗಿ ಬಸ್​ ಸಂಚಾರ ಆರಂಭಗೊಂಡಿತ್ತು. ನಂತರ ಸಮಯ ಕಳೆದಂತೆ ಬಸ್​ಗಳ ಓಡಾಟ ಕುಂಠಿತಗೊಂಡಿದೆ. ಪ್ರಯಾಣಿಕರ ಪರದಾಟ ಮುಗಿಲು ಮುಟ್ಟಿದೆ. ಬಸ್​ಗಳ ಸಂಚಾರ ಆರಂಭಗೊಳ್ಳುತ್ತದೆ ಎಂಬ ನಿರೀಕ್ಷೆಯೊಂದಿಗೆ ಪ್ರಯಾಣಿಕರು ಬಸ್​ ನಿಲ್ದಾಣಗಳಲ್ಲಿ ಕಾಯುತ್ತಾ ನಿಂತಿದ್ದಾರೆ. ಬಸ್​ ಬರುವಿಕೆಯ ಯಾವುದೇ ಸೂಚನೆಗಳು ಸಿಗದಂತಾಗಿದೆ.

ಯಾದಗಿರಿ: ಯಾದಗಿರಿಯಲ್ಲಿ 4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಿಬ್ಬಂದಿ ಮುಷ್ಕರ. ಕೊರೆಯುವ ಚಳಿಯಲ್ಲಿ ಪುಟಾಣಿ ಮಕ್ಕಳೊಂದಿಗೆ ಬೆಳಿಗ್ಗೆ 5 ಗಂಟೆಗೆ ಮುಂಬೈನಿಂದ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಬಸ್​ಗಳು ಸಿಗದಂತಾಗಿದೆ.

ಚಿಕ್ಕಬಳ್ಳಾಪುರ:  ಪೊಲೀಸ್ ಭದ್ರತೆಯೊಂದಿಗೆ ಚಿಕ್ಕಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಶಿಡ್ಲಘಟ್ಟ ಕಡೆಗೆ ಬಸ್ ಸಂಚಾರ ಪ್ರಾರಂಭಗೊಂಡಿದೆ. ಬಸ್ ನಲ್ಲಿ ಕೆಎಸ್​ಆರ್​ಟಿಸಿ ಅಧಿಕಾರಿಗಳು, ಪೊಲೀಸರು ಮತ್ತು ಪ್ರಯಾಣಿಕರು ಪ್ರಯಾಣ ಆರಂಭಿಸಿದ್ದಾರೆ.

ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ

ಮೆಜೆಸ್ಟಿಕ್‌ ನಿಲ್ದಾಣಕ್ಕೆ 8 ಬಿಎಂಟಿಸಿ ಬಸ್​ಗಳ ಆಗಮನ.. ಶಿವಾಜಿನಗರದಲ್ಲೂ ಬಸ್ ಸಂಚಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada