ಸಚಿವ ಲಕ್ಷ್ಮಣ ಸವದಿ ಸವದಿ ಸ್ಥಳಕ್ಕೆ ಬರಬೇಕು: ಧರಣಿ ನಿರತರ ಪಟ್ಟು
ಪ್ರತಿಭಟನೆ ಕೈ ಬಿಡುವುದರಿಂದ ನಾವು ಗೆದ್ದಂತಲ್ಲ ಅಥವಾ ನೀವು ಸೋತಂತಲ್ಲ. ದಯಮಾಡಿ ಮುಷ್ಕರ ವಾಪಾಸ್ ಪಡೆಯಿರಿ ಎಂದು ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಒಂದೆಡೆ ಮುಷ್ಕರ ಹಿಂಪಡೆಯುವಂತೆ ಸ್ವತಃ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಸಾರಿಗೆ ಸಿಬ್ಬಂದಿ ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಸಾರಿಗೆ ಸಚಿವರು ಸ್ಥಳಕ್ಕೆ ಆಗಮಿಸಲೇಬೇಕು ಎಂದು ಧರಣಿ ನಿರತರು ಪಟ್ಟು ಹಿಡಿದಿದ್ದಾರೆ.
ಸಚಿವರು ಲಿಖಿತ ರೂಪದ ಹೇಳಿಕೆಯನ್ನು ವೇದಿಕೆಯಲ್ಲಿ ಘೋಷಿಸಬೇಕು. ಅಲ್ಲಿಯ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ. KSRTC ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು ಭಾಷಣದ ವೇಳೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರನೇ ವೇತನ ಆಯೋಗ ಜಾರಿ ಬಗ್ಗೆ ಸ್ವತಃ ಸಚಿವರೇ ಬಂದು ಸ್ಪಷ್ಟನೆ ನೀಡಲಿ. ಸಚಿವ ಲಕ್ಷ್ಮಣ ಸವದಿ ಇಲ್ಲಿಗೆ ಬರಲೇಬೇಕು ಎಂದು ಪಟ್ಟುಹಿಡಿದು ಕೂತಿದ್ದಾರೆ.
ಸವದಿಗೆ ಕರೆ ಮಾಡಿದ ಕೋಡಿಹಳ್ಳಿ ಇತ್ತ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನಾ ಸ್ಥಳದಿಂದ ಸಚಿವ ಸವದಿಗೆ ಕರೆ ಮಾಡಿದ್ದಾರೆ. ಮೊದಲ ಬಾರಿಗೆ ಕರೆಯಲ್ಲಿ ಮಾತನಾಡಿರುವ ಸವದಿ ಇನ್ನು ಪ್ರತಿಭಟನೆ ಮುಂದುವರೆಸುವುದು ಬೇಡ. ಮುಷ್ಕರ ಕೈಬಿಡಿ, ಭರವಸೆ ಈಡೇರಿಸುವ ಹೊಣೆ ನನ್ನದು ಎಂದು ಮಾತು ಕೊಟ್ಟಿದ್ದಾರೆ. ಪ್ರತಿಭಟನೆ ಕೈ ಬಿಡುವುದರಿಂದ ನಾವು ಗೆದ್ದಂತಲ್ಲ ಅಥವಾ ನೀವು ಸೋತಂತಲ್ಲ. ದಯಮಾಡಿ ಮುಷ್ಕರ ವಾಪಾಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆರನೇ ವೇತನ ಆಯೋಗ ನಿನ್ನೆ ಚರ್ಚೆಯಾಗಿದ್ದು ನಿಜ. ಆದರೆ, ಇಂದು ಪತ್ರದಲ್ಲಿಲ್ಲ ಎಂದು ನೀವು ಗೊಂದಲಕ್ಕೆ ಒಳಗಾಗೋದು ಬೇಡ. ನಿನ್ನೆ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ಜಾರಿಗೆ ತರೋದು ನನ್ನ ಕಮಿಟ್ಮೆಂಟ್ ಎಂದು ದೂರವಾಣಿಯ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ಗೆ ಸವದಿ ಭರವಸೆ ನೀಡಿದ್ದಾರೆ.
ಲಕ್ಷ್ಮಣ ಸವದಿಯೊಂದಿಗೆ ಕರೆಯಲ್ಲಿ ಮಾತನಾಡಿದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಿಬ್ಬಂದಿ ಮನವೊಲಿಸಲು ಯತ್ನಿಸುತ್ತಿದ್ದು ಇದೀಗ ಎರಡನೇ ಬಾರಿಗೆ ಕರೆ ಮಾಡಿ ಆರನೇ ವೇತನ ಆಯೋಗದ ಬಗ್ಗೆ ಚರ್ಚೆ ಮಾಡಿದ್ದಾರೆ.
ಒಂದೊಂದು ಗಂಟೆಗೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ -ಕೋಡಿಹಳ್ಳಿ ವಿರುದ್ಧ ಸವದಿ ಗರಂ



