ಮೈಸೂರು: KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ; ಚಾಲಕ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್ ಕಟ್ ಆಗಿ ಅಪಘಾತಕ್ಕೀಡಾಯಿತು. ಚಾಲಕ ಕನಕರಾಜ್ ಅವರ ಸಮಯಪ್ರಜ್ಞೆಯಿಂದ ಬಸ್ಸನ್ನು ಗದ್ದೆಗೆ ಇಳಿಸಲಾಯಿತು, ಇದರಿಂದ ದೊಡ್ಡ ಅನಾಹುತ ತಪ್ಪಿ, ಹತ್ತಾರು ಪ್ರಯಾಣಿಕರ ಪ್ರಾಣ ಉಳಿಯಿತು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಹಾನಿ ತಪ್ಪಿದೆ. ಚಾಲಕನ ಧೈರ್ಯಕ್ಕೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೈಸೂರು, ಸೆ.10: ಚಾಲಕನ ಸಮಯಪ್ರಜ್ಞೆಯಿಂದ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿದ್ದ ಹತ್ತಾರು ಪ್ರಯಾಣಿಕರು ಭಾರಿ ಅನಾಹುತದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಆರ್.ನಗರದಿಂದ ರಾವಂದೂರು ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್ ದಿಢೀರ್ ಕಟ್ ಆಗಿ ಪಲ್ಟಿಯಾದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಬಳಿ ನಡೆದಿದೆ. ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಜೀವಹಾನಿ ತಪ್ಪಿದೆ. ಕೆ.ಆರ್.ನಗರದಿಂದ ರಾವಂದೂರಿಗೆ ಹೊರಟಿದ್ದ ಬಸ್ ಚುಂಚನಕಟ್ಟೆ ಗ್ರಾಮದ ಬಳಿ ಚಲಿಸುತ್ತಿದ್ದಾಗ ಏಕಾಏಕಿ ಸ್ಟೇರಿಂಗ್ ಕಟ್ ಆಗಿದೆ. ಈ ತಾಂತ್ರಿಕ ದೋಷವನ್ನು ತಕ್ಷಣವೇ ಗ್ರಹಿಸಿದ ಬಸ್ ಚಾಲಕ ಕನಕರಾಜ್, ಧೃತಿಗೆಡದೆ ತಕ್ಷಣವೇ ಬಸ್ ವೇಗವನ್ನು ತಗ್ಗಿಸಿ (ಸ್ಲೋ ಮಾಡಿ) ರಸ್ತೆ ಪಕ್ಕದ ಗದ್ದೆಗೆ ಇಳಿಸಿದ್ದಾರೆ. ಚಾಲಕನ ಈ ದಿಟ್ಟ ಹಾಗೂ ಸಮಯಪ್ರಜ್ಞೆಯ ನಿರ್ಧಾರದಿಂದಾಗಿ ಬಸ್ ಪಲ್ಟಿಯಾದರೂ ಸಹ ಭಾರಿ ದುರಂತ ತಪ್ಪಿದಂತಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ತಕ್ಷಣವೇ ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

