ಡೀಸೆಲ್ ಖಾಲಿಯಾಗಿ KSRTC ಪ್ರಯಾಣಿಕರ ಪರದಾಟ: ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ
ಬಿಎಂಟಿಸಿ ಡಿಪೋದಲ್ಲಿ ಡೀಸೆಲ್ ಹಾಕದ ಕಾರಣ ಒಂದು ಗಂಟೆಯ ಬಳಿಕ ಚಾಲಕ ಆಟೋದಲ್ಲಿ ಹೋಗಿ ಹೊರಗಿನ ಬಂಕ್ನಿಂದ ಡೀಸೆಲ್ ತಂದರು. ಆನೇಕಲ್ ಡಿಪೋಗೆ ಹೋಗುವಂತೆ ಚಾಲಕನಿಗೆ ಮ್ಯಾನೇಜರ್ ತಿಳಿಸಿದರು.
ಬೆಂಗಳೂರು: ಕೋಲಾರ ಜಿಲ್ಲೆ ಶ್ರೀನಿವಾಸಪುರ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಡೀಸೆಲ್ ಖಾಲಿಯಾಗಿ ದೇವಸ್ಥಾನಕ್ಕೆ ಹೋಗಿದ್ದ ಪ್ರಯಾಣಿಕರು ಆನೇಕಲ್ ಸಮೀಪ ಪರದಾಡುವಂತಾಯಿತು.
ಬನ್ನೇರುಘಟ್ಟ ಸಮೀಪದ ಅಂಜನಾಪುರದಿಂದ ಮೇಲ್ ಮರವತ್ತೂರ್ಗೆ ನಿನ್ನೆ ಬೆಳಗಿನ ಜಾವ ಬಸ್ ಹೊರಟಿತ್ತು. ಕಳೆದ ರಾತ್ರಿ ಬಸ್ಸು ಮೇಲ್ ಮರುವತ್ತೂರಿನಿಂದ ವಾಪಸಾಗಿದ್ದು, ಇಂದು ಬೆಳಿಗ್ಗೆ ನಾಲ್ಕು ಗಂಟೆ ಹೊತ್ತಿಗೆ ಎಲೆಕ್ಟ್ರಾನಿಕ್ ಸಿಟಿಗೆ ಆಗಮಿಸಿತ್ತು. ಆದರೆ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್ ಬಳಿ ಡಿಸೇಲ್ ಖಾಲಿಯಾಗಿ ಪ್ರಯಾಣಿಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ.
ಡಿಪೋ ಮ್ಯಾನೇಜರ್ಗೆ ಕರೆ ಮಾಡಿದ ಚಾಲಕನಿಗೆ ಮೊದಲು ಎಲೆಕ್ಟ್ರಾನಿಕ್ ಸಿಟಿ ಬಿಎಂಟಿಸಿ ಡಿಪೋಗೆ ಹೋಗುವಂತೆ ಸೂಚನೆ ನೀಡಿದರು. ಬಿಎಂಟಿಸಿ ಡಿಪೋದಲ್ಲಿ ಡೀಸೆಲ್ ಹಾಕದ ಕಾರಣ ಒಂದು ಗಂಟೆಯ ಬಳಿಕ ಚಾಲಕ ಆಟೋದಲ್ಲಿ ಹೋಗಿ ಹೊರಗಿನ ಬಂಕ್ನಿಂದ ಡೀಸೆಲ್ ತಂದರು. ಆನೇಕಲ್ ಡಿಪೋಗೆ ಹೋಗುವಂತೆ ಚಾಲಕನಿಗೆ ಮ್ಯಾನೇಜರ್ ತಿಳಿಸಿದರು.
ಬಾಡಿಗೆಗೆ ಪಡೆದ ಬಸ್: ಒಪ್ಪಂದದ ಮೇರೆಗೆ ಕೆಎಸ್ಆರ್ಟಿಸಿ ₹ 38 ಸಾವಿರ ಹಣ ಕಟ್ಟಿಸಿಕೊಂಡು ಬಸ್ ನೀಡಿತ್ತು. ರಾತ್ರಿಯಿಡೀ ಪ್ರಯಾಣ ಮಾಡಿದ್ದ ಪ್ರಯಾಣಿಕರು ಸಕಾಲಕ್ಕೆ ಊರು ತಲುಪಲು ಸಾಧ್ಯವಾಗದ ಕಾರಣ, ಶೌಚಾಲಯಕ್ಕೆ ಹೋಗಲು ಪರದಾಡಿದರು. ಬಸ್ನ ಸ್ಥಿತಿಗತಿ ಗಮನಿಸದ ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.