ಖಾಸಗಿ ಬಸ್ಗಳ ಪ್ರಾಬಲ್ಯ: ಕರಾವಳಿ ಭಾಗಕ್ಕೆ ತಟ್ಟದ ಸಾರಿಗೆ ನೌಕರರ ಬಂದ್ ಬಿಸಿ
ಖಾಸಗಿ ಬಸ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುವ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ನೌಕರರ ಮುಷ್ಕರ ದೊಡ್ಡ ತೊಂದರೆಯನ್ನು ಉಂಟುಮಾಡಿಲ್ಲ. ಸರ್ಕಾರಿ ನಗರ ಸಾರಿಗೆ ಬಸ್ಗಳೂ ಓಡಾಟ ನಡೆಸುತ್ತಿದ್ದು ಜನಜೀವನ ಸುಗಮವಾಗಿದೆ.
ದಕ್ಷಿಣ ಕನ್ನಡ: ಖಾಸಗಿ ಬಸ್‌ಗಳು ಪ್ರಾಬಲ್ಯ ಹೊಂದಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿಲ್ಲ. ಜಿಲ್ಲೆಯೊಳಗೆ ಸಂಚರಿಸುವ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸುತ್ತಿದ್ದು ಪ್ರಯಾಣಿಕರು ಯಾವುದೇ ಸಮಸ್ಯೆ ಅನುಭವಿಸಿಲ್ಲ. ದಿನನಿತ್ಯದ ಕೆಲಸಗಳಿಗೆ ತೊಡಕುಂಟಾಗಿಲ್ಲ. ಜಿಲ್ಲೆಯ ಜನರ ಜೀವನ ಎಂದಿನಂತೆ ಸಾಗುತ್ತಿದೆ.
ಖಾಸಗಿ ಸಿಟಿ ಬಸ್ ಸರ್ವೀಸ್, ಎಕ್ಸ್ಪ್ರೆಸ್ ಬಸ್ ಸರ್ವೀಸ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕರಾವಳಿಯ ಜನರೂ ಖಾಸಗಿ ಬಸ್ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ದಿನನಿತ್ಯದ ಕೆಲಸಗಳಿಗೆ, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ನೆರೆಯ ಊರುಗಳಿಗೆ ಖಾಸಗಿ ಬಸ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತವೆ. ಈ ಕಾರಣದಿಂದ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ನೌಕರರ ಮುಷ್ಕರ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿಲ್ಲ. ಜನಜೀವನ ಸುಗಮವಾಗಿದೆ.
ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುವ ಸರ್ಕಾರಿ ಬಸ್ಗಳ ಓಡಾಟದಲ್ಲಿ ವ್ಯತ್ಯಯವಾಗಿದ್ದರೂ ಸರ್ಕಾರಿ ನಗರ ಸಾರಿಗೆ ಬಸ್‌ಗಳು ಓಡಾಟ ನಡೆಸುತ್ತಿವೆ. ಉಡುಪಿಯಿಂದ ಆಗುಂಬೆ, ಶಿವಮೊಗ್ಗ, ಕುಂದಾಪುರ, ಭಟ್ಕಳ, ಕೊಟ್ಟಿಗೆಹಾರದ ಕಡೆಗೆ ಹೋಗುವ ಬಸ್‌ಗಳು ವ್ಯವಹರಿಸುತ್ತಿವೆ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದ್ದು ನಗರ ಸಾರಿಗೆಗಳು ಓಡಾಟ ನಡೆಸುತ್ತಿವೆ. ಸುಳ್ಯ, ಪುತ್ತೂರು, ಬಂಟ್ವಾಳ ಮುಂತಾದ ಕಡೆಗೆ ಸರ್ಕಾರಿ ಬಸ್ ಸಂಚಾರ ನಡೆಯುತ್ತಿದೆ. ಹಾಗಾಗಿ ಸ್ಥಳೀಯರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.
ಆದರೆ, ಉಡುಪಿ, ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವ ಬಸ್ಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಪರವೂರಿನ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಮೈಸೂರು, ಬೆಂಗಳೂರು, ಹಾಸನದ ಕಡೆಗೆ ಹೋಗುವ ಕೆಲ ಬಸ್‌ಗಳು ತಮ್ಮ ಸಂಚಾರ ಆರಂಭಿಸಿವೆಯಾದರೂ ಮುಷ್ಕರ ನಡೆಸಲು ಒತ್ತಡ ಎದುರಾದರೆ ಸಂಚಾರವನ್ನು ಅರ್ಧಕ್ಕೆ ನಿಲ್ಲಿಸುವ ಅಪಾಯವಿದೆ. ಇದರಿಂದ ಪ್ರಯಾಣಿಕರು ಅತಂತ್ರರಾಗುವ ಸಮಸ್ಯೆ ಎದುರಾಗಬಹುದು.
ಉಡುಪಿಯಿಂದ ಮೈಸೂರು, ಹುಬ್ಬಳ್ಳಿ ಭಾಗಕ್ಕೆ ಹೋಗುವ ಬಸ್‌ಗಳು ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿದ್ದು, ಸಂಚಾರ ನಡೆಸಿವೆ. ಆದರೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು ಭಾಗಕ್ಕೆ ಹೊರಟಿರುವ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗುವ ಅಪಾಯವಿದೆ.
ಉಡುಪಿಯಲ್ಲಿ ಪ್ರತಿನಿತ್ಯ ಸರಾಸರಿ 300 ಸರ್ಕಾರಿ ಬಸ್ಸ್ಗಳು ಓಡಾಟ ನಡೆಸುತ್ತವೆ. ಆದರೆ, ನಿನ್ನೆ ಮತ್ತು ಇಂದು ಸರ್ಕಾರಿ ಬಸ್ ಸಂಚಾರ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಅಂದಾಜು 100ರಷ್ಟು ಬಸ್‌ಗಳು ಸಂಚರಿಸಿದ್ದವು. ಇಂದು ಸುಮಾರು 30ರಷ್ಟು ಬಸ್‌ಗಳು ಮಾತ್ರ ಡಿಪೋದಿಂದ ಹೊರ ಹೊರಟಿವೆ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದ್ದು ಹೊರ ಊರುಗಳಿಂದ ಬಸ್‌ಗಳು ಡಿಪೋಕ್ಕೆ ಆಗಮಿಸುತ್ತಿಲ್ಲ. ಡಿಪೋಕ್ಕೆ ಬಸ್ಗಳ ಆಗಮನದ ಪ್ರಮಾಣ ಕಡಿಮೆಯಾಗಿದೆ. ದೂರದೂರಿಗೆ ಸರ್ಕಾರಿ ಬಸ್ಗಳಲ್ಲೇ ಪ್ರಯಾಣಿಸುವ ಅನಿವಾರ್ಯತೆ ಹೊಂದಿದವರು ತೊಂದರೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಪ್ರಯಾಣ ಮುಂದೂಡಿದ್ದಾರೆ. ಹಾಗಾಗಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದ್ದು, ಸರ್ಕಾರಿ ಬಸ್ ನಿಲ್ದಾಣಗಳು ಭಣಗುಡುತ್ತಿವೆ.
ಮತ್ತೊಂದೆಡೆ ಮಡಿಕೇರಿ ಬಸ್ ನಿಲ್ದಾಣದಲ್ಲಿ ನಿಂತಿರುವ ಬಸ್ಗಳಿಗೆ ಆಯಾ ಡಿಪೋಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಡಿಕೇರಿಯಲ್ಲಿ ಮಂಗಳೂರು, ಚಾಮರಾಜನಗರ, ಕುಂದಾಪುರ, ಮೈಸೂರು, ಬೆಂಗಳೂರು ಸೇರಿದಂತೆ 17 ಡಿಪೋದ ಅಂದಾಜು 60ರಷ್ಟು ಬಸ್‌ಗಳು ತಂಗಿವೆ. ಆಯಾ ಡಿಪೋಕ್ಕೆ ತೆರಳಿ, ಅಲ್ಲಿ ಬಸ್ ನಿಲ್ಲಿಸಲು ಮೈಕ್ ಮೂಲಕ ಎಲ್ಲಾ ಚಾಲಕರಿಗೆ ಸಂಚಾರ ನಿಯಂತ್ರಕರು ಸೂಚನೆ ನೀಡಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ BMTC ಬಸ್ ಸಂಚಾರ: ಮೆಜೆಸ್ಟಿಕ್‌ಗೆ ಆಗಮಿಸಿದ 2 ಬಸ್‌ಗಳು
Published On - 2:47 pm, Sat, 12 December 20