
ಹುಬ್ಬಳ್ಳಿ, ಜುಲೈ 19: ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನಡುವಿನ ವೈಮನಸ್ಸು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಟ್ರಸ್ಟ್ ಮುಂದಾಗಿದೆ. ಆ ಮೂಲಕ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುವ ಸುಳಿವು ನೀಡಿದೆ. ಇನ್ನೊಂದಡೆ, ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠದ ಸದ್ಯ ಪೀಠಾಧಿಪತಿಯಾಗಿರುವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನಡುವಿನ ಭಿನ್ನಾಭಿಪ್ರಾಯ ಇದೀಗ ತಾರಕಕ್ಕೇರಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಗ್ಗಟ್ಟಾಗಿ 2ಎ ಮೀಸಲಾತಿಗಾಗಿ ಹೋರಾಡಿದ್ದವರು, ಇದೀಗ ಪರಸ್ಪರ ವಿರುದ್ಧವಾಗಿದ್ದಾರೆ. ಅದರಲ್ಲೂ ಸ್ವಾಮೀಜಿ ಮತ್ತು ಟ್ರಸ್ಟ್ನ ಈಗಿನ ಅಧ್ಯಕ್ಷರೂ ಆಗಿರೋ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿವೆ. ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದ ಟ್ರಸ್ಟನ ಧರ್ಮದರ್ಶಿಗಳು, ಸ್ವಾಮೀಜಿಯವರ ವರ್ತನೆ ಬದಲಾವಣೆಗೆ ಗಡುವು ನೀಡಿದ್ದರು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಮತ್ತೊಂದಡೆ ಸ್ವಾಮೀಜಿಯ ಕಡು ವಿರೋಧಿಯಾಗಿರುವ ವಿಜಯಾನಂದ ಕಾಶಪ್ಪನವರಿಗೆ, ಟ್ರಸ್ಟ್ ಅಧ್ಯಕ್ಷರನ್ನಾಗಿ ಧರ್ಮದರ್ಶಿಗಳು ನೇಮಕ ಮಾಡಿ, ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಅವರ ವಿವಿಚನೆಗೆ ಬಿಟ್ಟಿದ್ದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಳೆದ ವಾರ ಕೂಡಲ ಸಂಗಮ ಪೀಠದಲ್ಲಿ ಮಠಕ್ಕೆ ವಿಜಯಾನಂದ ಕಾಶಪ್ಪನವರ ಬೀಗ ಹಾಕಿಸಿದ್ದರು. ಸ್ವಾಮೀಜಿ ಬೆಂಬಲಿಗರು ಬೀಗ ಒಡೆದಿದ್ದು ವಿಜಯಾನಂದ ಕಾಶಪ್ಪನವರ ಆಕ್ರೋಶಕ್ಕೆ ಕಾರಣವಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳು ಕೂಡಾ ನಡೆದಿದ್ದವು. ಶುಕ್ರವಾರ ಹುಬ್ಬಳ್ಳಿಯಲ್ಲಿ ಧರ್ಮದರ್ಶಿಗಳ ಜೊತೆ ಸಭೆ ನಡೆಸಿರುವ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಠಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ವಿಜಯಾನಂದ ಕಾಶಪ್ಪನವರ, ಸ್ವಾಮೀಜಿ ಮಠದಲ್ಲಿ ಇರುತ್ತಿಲ್ಲ. ಮಠಕ್ಕೆ ಬಂದವರಿಗೆ ದರ್ಶನ, ಪ್ರವಚನ ಸೇರಿದಂತೆ ಕೆಲ ಧಾರ್ಮಿಕ ಕಾರ್ಯಗಳನ್ನು ಮಾಡಲು ಪೀಠದಲ್ಲಿ ಖಾಯಂ ಆಗಿ ಇರಲು ಸ್ವಾಮೀಜಿ ಬೇಕಾಗಿದ್ದಾರೆ. ಹೀಗಾಗಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದೇವೆ. ಆದಷ್ಟು ಬೇಗನೆ ಪರ್ಯಾಯ ವ್ಯವಸ್ಥೆ ಆಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ, ಪರೋಕ್ಷವಾಗಿ ಮಠಕ್ಕೆ ಬೇರೆ ಸ್ವಾಮೀಜಿಯನ್ನು ನೇಮಕ ಮಾಡುವ ಸುಳಿವು ನೀಡಿದ್ದಾರೆ.
ಇದರೊಂದಿಗೆ, ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಿ ಬೇರೆ ಸ್ವಾಮೀಜಿಯನ್ನು ಪೀಠದಲ್ಲಿ ಕೂರಿಸುವ ಕೆಲಸ ಇದೀಗ ಆರಂಭವಾದಂತಾಗಿದೆ. ಇದೇ ಕಾರಣಕ್ಕೆ, ‘ಮಠದಿಂದ ಟ್ರಸ್ಟ್ ಅಲ್ಲ, ಬದಲಾಗಿ ಟ್ರಸ್ಟ್ನಿಂದ ಸ್ವಾಮೀಜಿ ನೇಮಕ ಮಾಡಲಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಟ್ರಸ್ಟ್ಗೆ ಇದೆ’ ಎಂದು ಜಯಮೃತ್ಯುಂಜಯ ಸ್ವಾಮೀಜಿಗೆ ಕಾಶಪ್ಪನವರ ಸಂದೇಶ ರವಾನೆ ಮಾಡಿದ್ದಾರೆ.
ಸ್ವಾಮೀಜಿ ವಿರುದ್ದ ಟ್ರಸ್ಟ್ನ ಅನೇಕರು ಹತ್ತಾರು ಆರೋಪ ಮಾಡಿದ್ದಾರೆ. ಸ್ವಾಮೀಜಿ ಮಠಕ್ಕೆ ಬರುತ್ತಿಲ್ಲ. ಅವರು ಬೇರೆ ಬೇರಡೆ ಮನೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ. ಒಂದು ರಾಜಕೀಯ ಪಕ್ಷ ಮತ್ತು ಓರ್ವ ವ್ಯಕ್ತಿ ಪರವಾಗಿದ್ದಾರೆ. ಸಮಾಜದ ಹಿತ ಕಾಪಾಡುವ ಕೆಲಸ ಮಾಡುತ್ತಿಲ್ಲ. ಜೊತೆಗೆ ಸ್ವಾಮೀಜಿಯಾದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಸ್ವಾಮೀಜಿ ಮತ್ತು ಓರ್ವ ಅಗ್ರಗಣ್ಯ ನಾಯಕರು, ಬೇರಡೆ ಪೀಠ ಮಾಡ್ತೇವೆ, ಆಸ್ತಿ ಖರೀದಿ ಮಾಡಿದ್ದೇವೆ ಎಂದಿದ್ದಾರೆ. ಹೀಗಾಗಿ ಅವರು ಸ್ವತಂತ್ರರು. ಬೇರೆ ಪೀಠವಾದರೆ ನಮಗೇನೂ ಅಭ್ಯಂತರವಿಲ್ಲಾ ಎಂದು ಹೇಳುವ ಮೂಲಕ, ಪರೋಕ್ಷವಾಗಿ ಸ್ವಾಮೀಜಿ ಪೀಠ ಬಿಡುವಂತೆ ಸೂಚನೆ ನೀಡಿದ್ದಾರೆ.
ನಾವು ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುತ್ತಿಲ್ಲ, ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎನ್ನುವ ಮೂಲಕ ಜಾಣತನ ಪ್ರದರ್ಶಿಸುತ್ತಿರುವ ಟ್ರಸ್ಟ್ ಅಧ್ಯಕ್ಷರು ಮತ್ತು ಧರ್ಮದರ್ಶಿಗಳು, ಸ್ವಾಮೀಜಿಗೆ ಪೀಠ ತೊರೆಯುವಂತೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಇತ್ತ ಹುಬ್ಬಳ್ಳಿಯಲ್ಲಿ ಟ್ರಸ್ಟ್ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು ಸುದ್ದಿಗೋಷ್ಠಿ ನಡೆಸುತ್ತಿದ್ದರೆ, ಅತ್ತ ಮಠದಲ್ಲಿದ್ದ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ: ಕಾಶಪ್ಪನವರ್ ಸೂಚನೆ ಮೇರೆಗೆ ಕ್ರಮ! ಈವರೆಗೆ ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ
ಒಟ್ಟಿನಲ್ಲಿ ಕೂಡಲಸಂಗಮ ಪೀಠಕ್ಕೆ ಟ್ರಸ್ಟ್ ಪರ್ಯಾಯ ವ್ಯವಸ್ಥೆ ಹೆಸರಿನಲ್ಲಿ ಮತ್ತೊಬ್ಬ ಸ್ವಾಮೀಜಿಯನ್ನು ಕೂರಿಸಲು ಬೇಕಾದ ಸಿದ್ಧತೆ ಆರಂಭಿಸಿದೆ. ಇದರ ನಡುವೆ ಜಯಮೃತ್ಯುಂಜಯ ಸ್ವಾಮೀಜಿ ಆಸ್ಪತ್ರೆ ಸೇರಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
Published On - 4:26 pm, Sat, 19 July 25