
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿರುವ ಕುಮಟಾ ಒಂದು ಸುಂದರವಾದ ಪಟ್ಟಣ ಮತ್ತು ತಾಲೂಕು ಕೇಂದ್ರ. ಕಡಲತೀರಗಳು, ಐತಿಹಾಸಿಕ ತಾಣಗಳು ಮತ್ತು ಸಾಂಸ್ಕೃತಿಕ ಪರಂಪರೆಗೆ ಈ ನಗರ ಹೆಸರುವಾಸಿ. ಜಗತ್ಪ್ರಸಿದ್ಧ ದೇಗುಲಗಳ ಜೊತೆಗೆ, ನೂರಾರು ಪ್ರವಾಸಿ ತಾಣಗಳು ಕುಮಟಾ ತಾಲೂಕಿನಲ್ಲಿವೆ.

ತಪಸ್ಸು ಮಾಡಿ ರಾವಣನು ಶಿವನಿಂದ ಪಡೆದ ಆತ್ಮಲಿಂಗ ಇರುವ ಸ್ಥಳವಾಗಿರೋ ಗೋಕರ್ಣ ಶ್ರೀ ಮಹಾಬಲೆಶ್ವರ ದೇಗುಲ, ಕಲ್ಲಿನ ಶಿಖರಗಳಿಂದಲೇ ಗಮನ ಸೆಳೆಯುವ ಯಾಣ, ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಧಾರೇಶ್ವರದ ಶಿವ ದೇಗುಲ, ಮಹಾಲಸಾ ನಾರಾಯಣಿ ದೇವಸ್ಥಾನ ಸೇರಿ ಹತ್ತು ಹಲವು ಧಾರ್ಮಿಕ ಕೇಂದ್ರಗಳು ಇಲ್ಲಿವೆ.

ಕುಮಟಾ ಪಟ್ಟಣದಿಂದ ಕೊಂಚವೇ ದೂರವಿರುವ ಮಿರ್ಜಾನ್ ಕೋಟೆ ಕೂಡ ತಾಲೂಕಿನ ಪ್ರಮುಖ ಪ್ರವಾಸಿ ಕ್ಷೇತ್ರಗಳಲ್ಲಿ ಒಂದು. ಸುಮಾರು 16ನೇ ಶತಮಾನಕ್ಕೆ ಸೇರಿದ ಭವ್ಯವಾದ ಕೋಟೆಯು ಮಳೆಗಾಲದ ವೇಳೆ ಪಾಚಿಗಳಿಂದ ಹಸಿರಿಗಾಗಿ ಕಂಗೊಳಿಸುವ ಕಾರಣ, ಆ ವೇಳೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. ರಾಷ್ಟ್ರೀಯ ಹೆದ್ದಾರಿಯ ಕೂಗಳತೆ ದೂರದಲ್ಲೇ ಈ ಕೋಟೆ ಇದೆ.

ಕುಮಟಾವು ಅನೇಕ ಸುಂದರ ಸಮುದ್ರ ತೀರಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವು ವನ್ನಳ್ಳಿ ಮತ್ತು ಕಡ್ಲೆ ಬೀಚ್. ವನ್ನಳ್ಳಿ ಕಡಲತೀರ ಶಾಂತವಾದ ಪರಿಸರಕ್ಕೆ ಹೆಸರುವಾಸಿಯಾದ್ರೆ, ಕಡ್ಲೆ ಸಮುದ್ರ ತೀರ ಸೂರ್ಯಾಸ್ತ ವೀಕ್ಷಣೆಗೆ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಜೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಸಿನಿಮಾದ ಚಿತ್ರೀಕರಣ ನಡೆದಿರುವ ರಾಮನಗಿಂಡಿ ಬೀಚ್ ಕೂಡ ಒಂದು ಉತ್ತಮ ಪ್ರವಾಸಿ ಸ್ಥಳ.

ಕುಮಟಾವು ಅರಬ್ಬರು, ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷರ ಕಾಲದಿಂದಲೂ ಒಂದು ಪ್ರಮುಖ ಸಮುದ್ರ ವ್ಯಾಪಾರ ಕೇಂದ್ರವಾಗಿತ್ತು. ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಕೂಡ 1882ರಲ್ಲಿ ಕುಮಟಾಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಅವರೇ ಉಲ್ಲೇಖಿಸಿದ್ದಾರೆ. ನಗರದ ಕುಶಲಕರ್ಮಿಗಳು ತಯಾರಿಸುವ ಶ್ರೀಗಂಧದ ಕೆತ್ತನೆಗಳು ಕೂಡ ಜಗತ್ಪ್ರಸಿದ್ಧವಾಗಿವೆ.