ಸಿಎಂ ಪಾಳೆಯದ ಸಚಿವರಿಗೆ ಹೈಕಮಾಂಡ್ ಮಟ್ಟದಲ್ಲಿ ಟಕ್ಕರ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್!
ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸುವವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೈಕಮಾಂಡ್ ಬಳಿಯೇ ಟಕ್ಕರ್ ಕೊಟ್ಟಿದ್ದಾರಂತೆ. ಹೀಗೆಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ, ಸಿಎಂ ಹಾಗೂ ಡಿಸಿಎಂ ಬಗ್ಗೆ ಹೈಕಮಾಂಡ್ ಬಳಿ ಹೆಬ್ಬಾಳ್ಕರ್ ಹೇಳಿದ್ದೇನು? ಕಾಂಗ್ರೆಸ್ ಆಂತರಿಕ ಸಂಘರ್ಷದ ಬಗ್ಗೆ ಅವರಾಡಿದ ಮಾತುಗಳೇನು? ತಿಳಿಯಲು ಮುಂದೆ ಓದಿ.
ಬೆಂಗಳೂರು, ಜುಲೈ 5: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಕೂಗು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಒತ್ತಡ ಇತ್ಯಾದಿ ವಿಚಾರಗಳಿಂದ ಕಾಂಗ್ರೆಸ್ ಒಳಬೇಗುದಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಂತರಿಕ ಸಂಘರ್ಷಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಹ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಬೆಂಬಲಿಗರಿಗೆ ಸೂಚನೆ ನೀಡಿದ್ದರು. ನೋಟಿಸ್ ನೀಡುವ ಎಚ್ಚರಿಕೆನ್ನೂ ನೀಡಲಾಗಿತ್ತು. ಆದಾಗ್ಯೂ, ಕೆಲವು ನಾಯಕರು ಕಿಮ್ಮತ್ತೇ ನೀಡಿಲ್ಲ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಪಾಳೆಯದ ಸಚಿವರಿಗೆ ಹೈಕಮಾಂಡ್ ಮಟ್ಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟಕ್ಕರ್ ಕೊಟ್ಟಿರುವುದು ತಿಳಿದುಬಂದಿದೆ.
ಹೆಚ್ಚುವರಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೆಬ್ಬಾಳ್ಕರ್ ಟಕ್ಕರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಎಲ್ಲಾ ಶಾಸಕರೂ ಸೇರಿ ಸಿದ್ದರಾಮಯ್ಯ ಅವರನ್ನ ಆಯ್ಕೆ ಮಾಡಿದ್ದಾರೆ ಎನ್ನುವ ವಾದಗಳಿಗೆ ಕೌಂಟರ್ ಎಂಬಂತೆ ಲಕ್ಷ್ಮೀ ಹೆಬ್ಬಾಳಕರ್ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ರನ್ನು ಲಕ್ಷ್ಮೀ ಹೆಬ್ಬಾಳಕರ್ ಭೇಟಿ ಮಾಡಿ ಬಂದಿದ್ದಾರೆ.
ಹೈಕಮಾಂಡ್ ಬಳಿ ಹೆಬ್ಬಾಳ್ಕರ್ ಹೇಳಿದ್ದೇನು?
ಸರ್ಕಾರದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರ ಮೇಲೆ ಗಮನಹರಿಸಿ ಎಂದು ಹೈಕಮಾಂಡ್ ಅನ್ನು ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ನಮಗೆ ಮುಖ್ಯ. ಆದರೆ ಸರ್ಕಾರದಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಕಾಂಗ್ರೆಸ್‌ನ ಪ್ರಭಾವಿ ನಾಯಕರು. ಒಬ್ಬರು ಮಾಸ್ ಲೀಡರ್ ಆದರೆ ಮತ್ತೊಬ್ಬರು ಸಂಘಟನಾ ಚತುರ. ಇಬ್ಬರೂ ಕೂಡ ಸರ್ಕಾರದಲ್ಲಿ ಸಮರ್ಥ ನಾಯಕರು ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಬಟ್ಟೆ ಮಾತ್ರ ಪರಿಶುದ್ದವಾಗಿದ್ದರೆ ಸಾಲದು, ಆಡಳಿತವೂ ಶುದ್ಧವಾಗಿರಬೇಕು: ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಕೆಲವರು ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಗೊಂದಲಗಳು ಆಗದಂತೆ ಕಡಿವಾಣ ಹಾಕಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ. ಈ ಮೂಲಕ ಸಿಎಂ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಮಗೆ ಸಿಎಂ ಹಾಗೂ ಡಿಸಿಎಂ ಇಬ್ಬರೂ ಮುಖ್ಯ ಎನ್ನುವ ಮೂಲಕ ಇಬ್ಬರೂ ಸಮಾನರು ಎಂಬ ಅಭಿಪ್ರಾಯವನ್ನು ಲಕ್ಷ್ಮೀ ಹೆಬ್ಬಾಳಕರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ