
ಬೆಂಗಳೂರು, ಜೂನ್ 19: ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ (HD Kumaraswamy) ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರ ರಚಿಸಿದ್ದ ಎಸ್ಐಟಿಗೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿ, ನ್ಯಾ.ಇ.ಎಸ್.ಇಂದಿರೇಶ್ರಿಂದ ಗುರುವಾರ ಆದೇಶ ಹೊರಡಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಡಿ.ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮತ್ತು ಎ.ವಿ.ನಿಶಾಂತ್ ವಾದ ಮಂಡಿಸಿದ್ದು, ಅಧಿಸೂಚನೆಯಿಲ್ಲದೇ ಎಸ್ಐಟಿ ರಚನೆ ಕಾನೂನುಬಾಹಿರ. ಎಸ್ಐಟಿಯ ಕ್ರಮಗಳನ್ನು ಅನೂರ್ಜಿತವೆಂದು ಘೋಷಿಸಲು ಮನವಿ ಮಾಡಿದರು.
ಇದನ್ನೂ ಓದಿ: ತೋಟದ ಮನೆ ಸುತ್ತ ಸರ್ಕಾರಿ ಭೂಮಿ ಒತ್ತುವರಿ ತೆರವು: ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ಹೀಗಿದೆ
ಇನ್ನು ಜನವರಿ ತಿಂಗಳಿನಲ್ಲಿ ಸರ್ಕಾರ ಒತ್ತುವರಿ ಪತ್ತೆಗೆ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿಯಲ್ಲಿ ಎಸ್ಐಟಿ ರಚನೆ ಮಾಡಲಾಗಿತ್ತು. 6 ಎಕರೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು.
ಫೆಬ್ರವರಿ 18 ರಂದು ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7,8,9,10,16,17 ಹಾಗೂ 79ರಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಿತ್ತು. ಸರ್ವೆ ಕಾರ್ಯದ ವೇಳೆ ಕುಮಾರಸ್ವಾಮಿ ಸೇರಿದಂತೆ ಇತರರು ಸೇರಿ 14 ಕ್ಕೂ ಹೆಚ್ಚು ಎಕರೆ ಒತ್ತುವರಿ ಮಾಡಿರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಭೂ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ರೋವರ್ ಯಂತ್ರದ ಮೂಲದ ಸರ್ಕಾರಿ ಒತ್ತುವರಿ ಜಾಗದ ಮಾರ್ಕಿಂಗ್ ಕಾರ್ಯ ಮಾಡಿ ರೆಡ್ ಫ್ಲ್ಯಾಗ್ ಕೂಡ ನೆಡಲಾಗಿತ್ತು.
ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಎಸ್ಐಟಿ ರಚನೆ
ಕೇತಗಾನಹಳ್ಳಿ ಸರ್ವೆ ನಂಬರ್ 7,8,9 ರಲ್ಲಿ ಕುಮಾರಸ್ವಾಮಿ ಜಮೀನು ಸೇರಿದಂತೆ 11 ಎಕರೆಯಷ್ಟು ಮಾರ್ಕಿಂಗ್ ಕಾರ್ಯ ಕೂಡ ನಡೆದಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಇತರೆ ಒತ್ತುವರಿದಾರರಿಗೆ ರಾಮನಗರ ಜಿಲ್ಲಾಡಳಿತ ನೋಟೀಸ್ ನೀಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.