ಡಿನೋಟಿಫಿಕೇಷನ್ ಪ್ರಕರಣ: ಕೇಂದ್ರ ಸಚಿವ ಕುಮಾರಸ್ವಾಮಿ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್
ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾ ರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಹಾಗಾದ್ರೆ, ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ.

ನವದೆಹಲಿ. (ಫೆಬ್ರವರಿ 25): ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾ ರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಡಿನೋಟಿಷಿಕೇಷನ್ ಸಂಬಂಧ ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿದ್ದು, ಇದನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಇದೀಗ ಸುಪ್ರೀಂಕೋರ್ಟ್ ಎಚ್ಡಿಕೆ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬನಶಂಕರಿ ಬಳಿಯ ಹಲಗೆವಡೇರಹಳ್ಳಿ ಸರ್ವೆ ನಂ. 128, 137 ರಲ್ಲಿನ 2 ಎಕರೆ 24 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಕುರಿತ ದಾಖಲೆಗಳ ಸಮೇತ ಮಹದೇವಸ್ವಾಮಿ 2012ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಕುಮಾರಸ್ವಾಮಿ ಜೊತೆಗೆ ಪದ್ಮಾ, ಶ್ರೀದೇವಿ, ಚೇತನ್‌ಕುಮಾರ್, ಕೆ.ಬಿ ಶಾಂತಮ್ಮ, ಎಸ್. ರೇಖಾ ಚಂದ್ರು, ಯೋಗ ಮೂರ್ತಿ, ಬಿ.ನರಸಿಂಹುಲು ನಾಯ್ಡು, ಆರ್. ಬಾಲಕೃಷ್ಣ, ಟಿ. ಮುರುಳಿಧರ್, ಜಿ. ಮಲ್ಲಿಕಾರ್ಜುನ, ಇ.ಎ ಯೋಗೇಂದ್ರನಾಥ, ಪಿ.ಜಗದೀಶ, ಡಿ.ಎಸ್ ದೀಪಕ್, ಎಂ.ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋಧಯ ಬಿಲ್ಡರ್ಸ್, ಸನ್‌ರೈಸ್ ಬಿಲ್ಡರ್ಸ್ ಮತ್ತು ಆರತಿ ಡೆವಲಪರ್ಸ್ ಪ್ರಮುಖರು ಆರೋಪಿತರಾಗಿದ್ದಾರೆ.
ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ದೂರುದಾರ ಮಹಾದೇವಸ್ವಾಮಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಇದೀಗ ಸುಪ್ರೀಂಕೋರ್ಟ್ ಎಚ್ಡಿಕೆ ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ.
Published On - 7:06 pm, Tue, 25 February 25




