ಮೈಸೂರು, ನವೆಂಬರ್ 15: ಮುಡಾದಲ್ಲಿ (muda) ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಪ್ರಕರಣ ಬೆಳವಣಿಗೆಗಳಿಂದ ಖಾತೆ ಕಂದಾಯ ಸೇರಿ ಎಲ್ಲಾ ಸೇವೆ ಸ್ಥಗಿತ ಮಾಡಲಾಗಿತ್ತು. ಹಾಗಾಗಿ ಯಾವುದೇ ರೀತಿಯ ಕಂದಾಯ ಖಾತೆಗಳ ಬಗ್ಗೆ ಜನರು ಸೇವೆ ಪಡೆಯಲು ಪರದಾಡುವಂತಾಗಿತ್ತು. ಜನರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆ ಇದೀಗ ಮುಡಾ ಸೇವೆಗಳು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ನಿವೇಶನ, ಬಡಾವಣೆಗಳ ಖಾತೆಗೆ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಆದೇಶಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ಸ್ಥಳೀಯ ಆಡಳಿತ ಕೇಂದ್ರಗಳಿಂದಲೇ ಸಾರ್ವಜನಿಕರ ಖಾತೆ ಕಂದಾಯ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳು ಹಸ್ತಾಂತರ ಮಾಡಲಾಗಿದೆ. ಇನ್ಮುಂದೆ ಎಲ್ಲಾ ಖಾತೆ ಕಂದಾಯ ಸ್ಥಳೀಯ ಸಂಸ್ಥೆಗಳ ಮೂಲಕವೇ ಜನರಿಗೆ ಸೇವೆ ಸಿಗಲಿದೆ.
ಇದನ್ನೂ ಓದಿ: ಮುಡಾ ಹಗರಣ: ಇಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಪಾಲಿಕೆ ನೌಕರ ವಜಾ
ಮುಡಾ ಅಕ್ರಮದ ಇಂಚಿಂಚೂ ಮಾಹಿತಿಯನ್ನ ಬಗೆದು ತೆಗೆಯುತ್ತಿರುವ ಇಡಿ ಅಧಿಕಾರಿಗಳಿಗೆ ಸ್ಫೋಟಕ ಸಂಗತಿ ಗೊತ್ತಾಗಿದೆ. ಇಡಿ ವಿಚಾರಣೆ ವೇಳೆ ಮುಡಾ ಮಾಜಿ ಅಧಿಕಾರಿಗಳು ಭಯಾನಕ ಹೇಳಿಕೆ ದಾಖಲಿಸಿದ್ದು, ಇಬ್ಬರು ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
50:50 ಅನುಪಾತದಲ್ಲಿ ಸೈಟ್ ಹಂಚಿಕೆ ವೇಳೆ ಇಬ್ಬರು ಪ್ರಮುಖ ಸಚಿವರು ಅಕ್ರಮಕ್ಕೆ ಸಹಕಾರ ನೀಡಿದ್ದಾರೆ ಅಂತಾ ವಿಚಾರಣೆ ವೇಳೆ ಹೇಳಿದ್ದಾರೆ. ಮಾಜಿ ಅಧಿಕಾರಿಗಳ ಹೇಳಿಕೆ ಬೆನ್ನತ್ತಿರುವ ಇಡಿ, ದಾಖಲೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಇಬ್ಬರು ಸಚಿವರಿಗೆ ಇಡಿ ಖೆಡ್ಡಾ ತೋಡಲಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನಿಗೆ ಸೆಡ್ಡು ಹೊಡೆದು, ಸೆಲೆಬ್ರಿಟಿಯಾದ ಸ್ನೇಹಮಯಿ ಕೃಷ್ಣ, ಸೆಲ್ಫಿಗೆ ಮುಗಿಬೀಳ್ತಿದ್ದಾರಂತೆ ಜನ
ಇನ್ನೂ ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಮತ್ತು ಆತನ ಬಾಮೈದ ಶಿವಣ್ಣ ಇಡಿ ವಿಚಾರಣೆ ಮುಗಿದಿದ್ದು, ಮಹತ್ವ ಮಾಹಿತಿಗಳನ್ನ ಇಡಿ ಸಂಗ್ರಹಿಸಿದೆ. ಇನ್ನೂ ಹಿಂದಿನ ಆಯುಕ್ತರಾದ ನಟೇಶ್, ದಿನೇಶ್‌ಗೆ ಅಕ್ರಮದಲ್ಲಿ ಸಹಾಯ ಆರೋಪದಡಿ ಗುತ್ತಿಗೆ ನೌಕರ ಬಿ.ಕೆ ಕುಮಾರ್ ಎಂಬಾತನನ್ನ ಸೇವೆಯಿಂದ ವಜಾಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:46 pm, Fri, 15 November 24