ಚಿಕ್ಕೋಡಿ, ಮಾರ್ಚ್ 25: ಬಿಎಸ್ ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಅನುದಾನ ಕೇಳಿದ್ದೆ. ನನಗೆ ವಿಷ ಕುಡಿಯಲೂ ಹಣವಿಲ್ಲ, ನಿನಗೆ ಎಲ್ಲಿಂದ ಅನುದಾನ ಕೊಡಲಿ ಎಂದಿದ್ದರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ರಾಜ್ಯದಲ್ಲಿ ಬಿಜೆಪಿ ಬಲಪಡಿಸಿದರು. ಆದರೆ, K.S.ಈಶ್ವರಪ್ಪ ಮಗನಿಗೆ ಟಿಕೆಟ್ ನೀಡಲಿಲ್ಲ. ಜಗದೀಶ್ ಶೆಟ್ಟರ್‌ಗೆ ಮೊದಲು ಬಾಲ ಕಟ್ ಮಾಡಿದರು. ಈಗೀಗ ಜಗದೀಶ್ ಶೆಟ್ಟರ್ ಬಾಲ ಮತ್ತೆ ಚಿಗುರುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಎರಡು ದಿನಗಳ ಹಿಂದೆ ಸಚಿವರು ಪೂರ್ವಭಾವಿ ಸಭೆ ಮಾಡೋಣ. ಶಿವಯೋಗಿ ನಾಡು ಅಥಣಿಯಿಂದ ಪ್ರಚಾರ ಆರಂಭಿಸೋಣ ಎಂದು ಹೇಳಿದ್ದರು. ಯಾವುದೇ ಪಕ್ಷ ಮೊದಲ ಸಭೆ ಅಥಣಿಯಿಂದ ಆರಂಭಿಸಿದರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತೆ ಎನ್ನುವುದು ನಂಬಿಕೆ. ಈಶಾನ್ಯ ದಿಕ್ಕಿನಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಚುನಾವಣೆಯ ತಂತ್ರ ಪ್ರತಿತಂತ್ರಗಳನ್ನ ರೂಪಿಸಬೇಕು. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸಗಳನ್ನ ಜನರಿಗೆ ತಲುಪಿಸಬೇಕು. ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದಾರೆ. ಪಂಚ ಗ್ಯಾರಂಟಿಗಳಿಗೆ 55 ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್; ಪ್ರಚಾರಕ್ಕೆ ಹೋಗುತ್ತೇನೆ ಎಂದ ಮಂಗಳಾ ಅಂಗಡಿ
ಅಥಣಿ ಪೂರ್ವಭಾಗದ ಜನರು ಬರಗಾಲದಿಂದ ಬಳಲುತ್ತಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ನೀರಾವರಿ ಯೋಜನೆಗೆ ಚಾಲನೆ ನೀಡಿ, ನೀರಿನ ಬರ ನೀಗಿಸಿದ್ದಾರೆ. ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನ ನೀಡಿದೆ. ಹಲವಾರು ಯೋಜನೆಗಳಿಗೆ ಕೋಟ್ಯಂತರ ಅನುದಾನ ನೀಡಿದ್ದಾರೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಪುತ್ರಿ ಪ್ರಿಯಾಂಕಾ ಪರ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Mon, 25 March 24