
ಚಿತ್ರದುರ್ಗ, ಜುಲೈ 28: ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಕಿ ಮತ್ತೆ ಧಗಧಗಿಸಲು ಶುರುವಾಗಿದೆ. ದಾವಣಗೆರೆಯಲ್ಲಿ ಇದೇ ಜುಲೈ 22ಕ್ಕೆ ನಡೆದ ವೀರಶೈವ ಲಿಂಗಾಯತ (Veerashaiva Lingayat) ಪಂಚಪೀಠಾಧ್ಯಕ್ಷರ ಶೃಂಗಸಭೆ ಬೆನ್ನಲ್ಲೇ ಭಾನುವಾರ ಲಿಂಗಾಯತ (Lingayat) ಮಠಾಧೀಶರು, ಲಿಂಗಾಯತ ಮುಖಂಡರು ಚಿತ್ರದುರ್ಗದ ಮುರುಘಾಮಠದಲ್ಲಿ ಸಭೆ ಸೇರಿದ್ದಾರೆ. ಸಭೆ ಸೇರಿದ್ದು ಮಾತ್ರವಲ್ಲ, ವೀರಶೈವ ಪಂಚಪೀಠಾಧ್ಯಕ್ಷರು ಕೈಗೊಂಡ ನಿರ್ಣಯಗಳಿಗೆ ಅಸಮಾಧಾನ ಹೊರಹಾಕಿದ್ದಾರೆ. ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಪಂಚಪೀಠಾಧ್ಯಕ್ಷರ ಶೃಂಗಸಭೆ ನಿರ್ಣಯ ಕೈಗೊಂಡಿತ್ತು. ಇದಕ್ಕೆ ಬೇಕಾದ ಒಂದು ಪ್ರತ್ಯೇಕ ಕಾಲಂ ಇರಬೇಕೆಂದು ಪ್ರಧಾನಿಗೆ ಮನವಿ ಮಾಡುವುದಕ್ಕೂ ನಿರ್ಧರಿಸಿದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಲಿಂಗಾಯತ ಮಠಾಧೀಶರ ಒಕ್ಕೂಟ ಅಭಿಯಾನಕ್ಕೆ ಮುಂದಾಗಿದೆ.
ವೀರಶೈವ ಲಿಂಗಾಯತ ಎಂದು ದಾಖಲಿಸಲು ಪಂಚಪೀಠಾಧ್ಯಕ್ಷರು ಹೇಳಿದ್ದರೆ, ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೂ, ಜಾತಿ ಕಾಲಂನಲ್ಲಿ ಉಪಪಂಗಡವನ್ನೂ ದಾಖಲಿಸುವಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಜಾಗೃತಿ ಮೂಡಿಸಲು ಮುಂದಾಗಿದೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀಗಳ ವಿರುದ್ಧ ಲಿಂಗಾಯತ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾತಿಗೆ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಸಾಣೆಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಕೂಡಾ ಪಂಚಪೀಠಾಧ್ಯಕ್ಷರ ನಿರ್ಣಯಗಳನ್ನು ವಿರೋಧಿಸಿದ್ದಾರೆ. ಅವರು ಸಂಕುಚಿತ ಮನೋಭಾವ ಬಿಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: 3 ದಶಕಗಳ ನಂತರ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ
ಒಟ್ಟಿನಲ್ಲಿ, ದಶಕಗಳ ಬಳಿಕ ಪಂಚಪೀಠಾಧೀಶರು ಒಗ್ಗೂಡಿ ನಿರ್ಣಯ ಕೈಗೊಂಡ ಬೆನ್ನಲ್ಲೇ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸ್ವತಂತ್ರ ಧರ್ಮದ ಮಾನ್ಯತೆ ಕೂಗೆಬ್ಬಿಸಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಶ್ರೀಗಳು, ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಈ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಧರ್ಮ ಯುದ್ಧ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಹೊಸ ಸಮಸ್ಯೆ ತಂದೊಡ್ಡಿರುವುದು ಸುಳ್ಳಲ್ಲ.