Karnataka Politics: ವಿಜಯೇಂದ್ರ ಸ್ಥಾನಮಾನ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧಾರ: ಬೊಮ್ಮಾಯಿ

TV9 Web
| Updated By: ganapathi bhat

Updated on:Aug 03, 2021 | 11:27 PM

Karnataka Bengaluru News: ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟಕ್ಕೆ ಸೇರಲು ಇಚ್ಛಿಸುವ ಶಾಸಕರು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

Karnataka Politics: ವಿಜಯೇಂದ್ರ ಸ್ಥಾನಮಾನ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧಾರ: ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ (ಆಗಸ್ಟ್ 4) ಬೆಳಗ್ಗೆ 8.50 ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ. ದೆಹಲಿಯಿಂದ ಬೆಳಗ್ಗೆ 6 ಗಂಟೆಯ ವಿಮಾನದಲ್ಲಿ ಅವರು ಪ್ರಯಾಣ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 3) 9-15ಕ್ಕೆ ಹೊರಡಬೇಕಾಗಿದ್ದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿದ್ದರು. ಪ್ರಲ್ಹಾದ್ ಜೋಷಿ ನಿವಾಸಕ್ಕೆ ತೆರಳಿದ್ದರು.

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟಕ್ಕೆ ಸೇರಲು ಇಚ್ಛಿಸುವ ಶಾಸಕರು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಯಾರು ನೂತನ ಸಚಿವರಾಗುತ್ತಾರೆ, ಯಾರು ಉಪಮುಖ್ಯಮಂತ್ರಿಗಳಾಗುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಕರ್ನಾಟಕ ರಾಜ್ಯ ರಾಜಕೀಯದ ಈ ದಿನದ ಅಪ್ಡೇಟ್​ಗಳು ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
  • 03 Aug 2021 11:26 PM (IST)

    ಸಂಪುಟದಲ್ಲಿ ಇವರಿಗೆ ಸ್ಥಾನ ಖಚಿತ?

    ಕೆ.ಎಸ್.ಈಶ್ವರಪ್ಪಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಖಚಿತ ಎಂದು ತಿಳಿದುಬಂದಿದೆ. ಸಂಪುಟ ಸೇರಲಿರುವ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಡಾ.ಸುಧಾಕರ್​, ಬಿ.ಸಿ.ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲುಗೆ ಬೊಮ್ಮಾಯಿ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ. ಮುರುಗೇಶ್ ನಿರಾಣಿಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿದ್ದಾರೆ. ನಾಳೆ ಪ್ರ‌ಮಾಣ ವಚನ ಸ್ವೀಕಾರದ ಬಗ್ಗೆ ನಿರಾಣಿಗೆ ಸಿಎಂ ಮಾಹಿತಿ ನೀಡಿದ್ದಾರೆ ಎಂದು ಟಿವಿ 9ಗೆ ನಿರಾಣಿ ತಿಳಿಸಿದ್ದಾರೆ. ಸಚಿವ ಸಂಪುಟಕ್ಕೆ ಬಿ.ವೈ.ವಿಜಯೇಂದ್ರ ಸೇರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

  • 03 Aug 2021 11:11 PM (IST)

    ಇದುವರೆಗೆ ಖಾತ್ರಿಯಾಗದ ಶ್ರೀಮಂತ ಪಾಟೀಲ್ ಸಚಿವ ಸ್ಥಾನ

    ನಾಳೆ ಸಚಿವರ ಪ್ರಮಾಣ ವಚನ ಕಾರ್ಯಕ್ರೆಮ ನಡೆಯಲಿದೆ. ಆದರೆ, ಶ್ರೀಮಂತ ಪಾಟೀಲ್ ಸಚಿವ ಸ್ಥಾನ ಇದುವರೆಗೆ ಖಾತ್ರಿಯಾಗಿಲ್ಲ. ಸಂಪುಟದಿಂದ ಕೈ ಬಿಟ್ಟಿರುವ ಬಗ್ಗೆಯೂ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಕರೆ ಬಾರದೇ ಶ್ರೀಮಂತ ಪಾಟೀಲ್ ಆತಂಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

  • 03 Aug 2021 11:10 PM (IST)

    ಬೊಮ್ಮಾಯಿ ಸಂಪುಟ ಸದಸ್ಯನಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವೆ: ಬಿ.ಸಿ.ಪಾಟೀಲ್​

    ಬೊಮ್ಮಾಯಿ ಸಂಪುಟ ಸದಸ್ಯನಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವೆ. ರಾಜಭವನದಲ್ಲಿ ನಾಳೆ ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ವಾಟ್ಸಾಪ್ ಸ್ಟೇಟಸ್ ಮೂಲಕ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್​ ಮಾಹಿತಿ ನೀಡಿದ್ದಾರೆ. ಸಚಿವ ಸ್ಥಾನ ಖಾತ್ರಿ ಬಗ್ಗೆ ಈವರೆಗೆ ಯಾವುದೇ ಕರೆ ಬಂದಿಲ್ಲ. ಆದರೆ, ಸಚಿವ ಸ್ಥಾನ ಖಚಿತವಾಗಿದೆ ಎಂದು ಬಿ.ಸಿ.ಪಾಟೀಲ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

  • 03 Aug 2021 10:54 PM (IST)

    ಹಿರಿಯರಿಗೆ ಕೊಕ್‌ ನೀಡುವ ಬಗ್ಗೆಯೂ ವರಿಷ್ಠರೇ ನಿರ್ಧರಿಸ್ತಾರೆ

    ಡಿಸಿಎಂಗಳ ಬಗ್ಗೆ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗುತ್ತೆ. ವಿಜಯೇಂದ್ರಗೆ ಸ್ಥಾನಮಾನ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತೆ. ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧರಿಸುತ್ತೆ. ಹಿರಿಯರಿಗೆ ಕೊಕ್‌ ನೀಡುವ ಬಗ್ಗೆಯೂ ವರಿಷ್ಠರೇ ನಿರ್ಧರಿಸ್ತಾರೆ. ನಾಯಕರು 2-3 ವಿಚಾರಗಳ ಬಗ್ಗೆ ನಾಳೆ ಬೆಳಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾಳೆ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗಲ್ಲ. ಪಕ್ಷದ ಹೈಕಮಾಂಡ್ ಫೋನ್ ಮೂಲಕವೇ ಮಾಹಿತಿ ನೀಡುತ್ತೆ. 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

  • 03 Aug 2021 10:25 PM (IST)

    ನಾಳೆ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣವಚನ

    ನಾಳೆ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ. ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ. ಸಂಪುಟ ರಚನೆ ಸಂಬಂಧ ಚರ್ಚೆಗೆ ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ವಿಮಾನದಲ್ಲಿ ಪ್ರಯಾಣ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 8.50ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ. ನಿನ್ನೆಯಿಂದ ವರಿಷ್ಠರ ಭೇಟಿಯಲ್ಲಿ ನಿರತರಾಗಿರುವ ಬೊಮ್ಮಾಯಿ, ಸಚಿವರ ಪಟ್ಟಿಗೆ ಗ್ರೀನ್​ಸಿಗ್ನಲ್​ ಪಡೆಯಲು ಹೈಕಮಾಂಡ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  • 03 Aug 2021 09:53 PM (IST)

    ನಾಳೆ ಬೆಳಗ್ಗೆ 8.50ಕ್ಕೆ ಬೆಂಗಳೂರಿಗೆ ತಲುಪಲಿರುವ ಸಿಎಂ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಳಗ್ಗೆ 8.50 ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ. ದೆಹಲಿಯಿಂದ ಬೆಳಗ್ಗೆ 6 ಗಂಟೆಯ ವಿಮಾನದಲ್ಲಿ ಅವರು ಪ್ರಯಾಣ ಮಾಡಲಿದ್ದಾರೆ.

  • 03 Aug 2021 09:10 PM (IST)

    ದೆಹಲಿಯಿಂದ ಹೊರಡಲು ಮನಸ್ಸು ಮಾಡದ ಮುಖ್ಯಮಂತ್ರಿ!

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಹೊರಡಲು ಮನಸ್ಸು ಮಾಡಿದಂತೆ ತೋರುತ್ತಿಲ್ಲ. ರಾತ್ರಿ 9.15ಕ್ಕೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್​ ಕ್ಯಾನ್ಸಲ್​ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ತೆರಳಲು ಏರ್​ಇಂಡಿಯಾ ವಿಮಾನದ ಟಿಕೆಟ್​ ಕಾಯ್ದಿರಿಸಿದ್ದರು. ಆದರೆ, ಇದೀಗ ಟಿಕೆಟ್ ಕ್ಯಾನ್ಸಲ್ ಮಾಡಿರುವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದ ಸಭೆಯಲ್ಲಿ ಭಾಗಿಯಾಗಿದ್ದಾರೆ. 9-15ಕ್ಕೆ ಹೊರಡಬೇಕಾಗಿದ್ದ ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ಪ್ರಲ್ಹಾದ್ ಜೋಷಿ ನಿವಾಸದಲ್ಲಿದ್ದಾರೆ.

  • 03 Aug 2021 07:53 PM (IST)

    ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ಎಸ್‌.ಆರ್ ವಿಶ್ವನಾಥ್

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. 42 ವರ್ಷದಲ್ಲಿ ನಾನು ಯಾವುದೇ ಸ್ಥಾನ ಮಾನ ಕೇಳಿಲ್ಲ. ಈ ಭಾರಿ ಸ್ಪಷ್ಟವಾಗಿ ನಾನು ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೇನೆ. ಕೊಟ್ಟಿರುವ ಜವಬ್ದಾರಿಯನ್ನ ನಿರ್ವಹಿಸುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ಯಾವ ಖಾತೆ ಕೊಟ್ರು ಕಸದಲ್ಲಿ ರಸ ತೆಗೆಯೋ ಕೆಲಸ ಮಾಡುವೆ. ಈಗಾಗಲೆ ನನಗೆ ಬಿಡಿಎನಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಕೊಟ್ಟಿದ್ದಾರೆ. ವಿಶೇಷವಾಗಿ ಬೆಂಗಳೂರು ನಗರದ ಬಗ್ಗೆ ಕಾಳಜಿ ಇದೆ ಎಂದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಶಾಸಕ ಎಸ್‌ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

    ಇತ್ತ ಮಾಜಿ ಸಚಿವ ಎಸ್.ಅಂಗಾರ ದೆಹಲಿಯಿಂದ ಹಿಂದಿರುಗಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಎಸ್.ಅಂಗಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

  • 03 Aug 2021 06:56 PM (IST)

    ಅಮಿತ್ ಶಾ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ

    ಸಂಸತ್‌ ಭವನದಲ್ಲಿ ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ಸಚಿವರ ಪಟ್ಟಿ ಕೈಯಲ್ಲಿ ಹಿಡಿದು ಬಂದಿರುವ ಸಿಎಂ ಬೊಮ್ಮಾಯಿ, ಪಟ್ಟಿಗೆ ಒಪ್ಪಿಗೆ ಪಡೆಯಲು ಸಿಎಂರಿಂದ ಅಮಿತ್ ಶಾ ಭೇಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ರಾತ್ರಿ 9.15ಕ್ಕೆ ಕೆಐಎಬಿಗೆ ಸಿಎಂ ಬೊಮ್ಮಾಯಿ ಸಚಿವರ ಅಂತಿಮ ಪಟ್ಟಿ ಸಮೇತ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

  • 03 Aug 2021 06:52 PM (IST)

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶರಣು ಸಲಗರ್

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಕೆಐಎಬಿಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ್ ಹೇಳಿಕೆ ನೀಡಿದ್ದಾರೆ. ಈ‌ ಬಾರಿ ಸಂಪುಟದಲ್ಲಿ ಯುವಕರಿಗೆ ‌ಮಣೆ ಹಾಕುವ ಮಾಹಿತಿ ಬಗ್ಗೆ ಬಸವ ಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಪ್ರತಿಕ್ರಿಯಿಸಿದ್ದಾರೆ.

  • 03 Aug 2021 06:11 PM (IST)

    ನಾಳೆ ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣವಚನ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದೆ. ನಾಳೆ ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಹೈಕಮಾಂಡ್​ನಿಂದ ಪಟ್ಟಿ ರವಾನೆಯಾಗಿದ್ದು, 24 ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

  • 03 Aug 2021 06:04 PM (IST)

    ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಕಡಿತ ಮಾಡುತ್ತಿದ್ದಾರೆ: ಬಸವರಾಜ ಹೊರಟ್ಟಿ

    ರಾಜ್ಯ ಸರ್ಕಾರ ಬೇರೆ ಬೇರೆ ಕಡೆ ಅನುದಾನ ಕೊಡುತ್ತಿದೆ. ಆದರೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಕಡಿತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಕ್ರಮಕ್ಕೆ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಶಾಸಕರು, ಎಂಎಲ್​ಸಿಗಳಿಗೆ ಭೇದಭಾವ ಮಾಡಲಾಗುತ್ತಿದೆ ಎಂಬ ಭಾವನೆಯಿದೆ. ಬಾಕಿ ಹಣ ರಿಲೀಸ್​ಗೆ ಮತ್ತೆ ಸಭೆ ಕರೆಯಲು ನಿರ್ಧರಿಸಿದ್ದೇವೆ. ಆ.14ರೊಳಗೆ ಸಮಸ್ಯೆ ಬಗೆಹರಿಸಲು ಸಿಎಂ ಜತೆ ಚರ್ಚಿಸುವೆ ಎಂದು ಅವರು ಹೇಳಿದ್ದಾರೆ.

    ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆಯಲ್ಲಿ ಲೋಪದೋಷ ಕಂಡುಬಂದಿದೆ. ಡಿಸಿಗಳ ಮಟ್ಟದಲ್ಲಿ ಪರಿಷತ್ ಸದಸ್ಯರಿಗೆ ಸಹಕಾರ ಸಿಗುತ್ತಿಲ್ಲ.ಸರ್ಕಾರದ ಮುಖ್ಯಕಾರ್ಯದರ್ಶಿಗೂ ಪತ್ರ ಬರೆಯುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

  • 03 Aug 2021 04:42 PM (IST)

    ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು

    ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದಾಗಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾಗಿದ್ದ ರೇಣುಕಾಚಾರ್ಯ, ಡಿ.ಎನ್. ಜೀವರಾಜ್, ಎನ್.ಆರ್‌.‌ಸಂತೋಷ್ ಹುದ್ದೆ ರದ್ದುಗೊಳಿಸಲಾಗಿದೆ. ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿಕಾಯಿ, ಯಡಿಯೂರಪ್ಪ ಮಾಧ್ಯಮ ಸಲಹೆಗಾರ ಎನ್. ಭೃಂಗೀಶ್, ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಸಿಎಂ ನೀತಿ ನಿರೂಪಣೆ, ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಹುದ್ದೆಗಳನ್ನು ರದ್ದುಗೊಳಿಸಿ ಡಿಪಿಎಆರ್‌ನಿಂದ ಅಧಿಸೂಚನೆ ಹೊರಡಿಸಲಾಗಿದೆ.

  • 03 Aug 2021 04:39 PM (IST)

    ಗೋವಿಂದ ಕಾರಜೋಳ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ

    ಗೋವಿಂದ ಕಾರಜೋಳ ವಿಚಾರದಲ್ಲಿ ಪಕ್ಷದಲ್ಲಿ ಅಪಸ್ವರ ಕೇಳಿಬಂದಿದೆ. ಮಾಜಿ ಡಿಸಿಎಂ ಕಾರಜೋಳ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ ಕಂಡುಬಂದಿದೆ. ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲು ಉಂಟಾಗಿದೆ. ಸೋಲಿನ ವಿಚಾರದ ಬಗ್ಗೆ ಪಕ್ಷದಲ್ಲಿ ಗಂಭೀರ ಚರ್ಚೆಯಾಗಿತ್ತು. ಹೀಗಾಗಿ ಸಂಪುಟದಿಂದ ಕಾರಜೋಳರನ್ನು ಕೈಬಿಡುವ​ ಸಾಧ್ಯತೆ ಕೇಳಿಬಂದಿದೆ.

  • 03 Aug 2021 04:38 PM (IST)

    ಬಿಸಿ ಪಾಟೀಲ್ ಬದಲು ಹಾಲಪ್ಪ ಆಚಾರ್​ಗೆ ಸಂಪುಟದಲ್ಲಿ ಸ್ಥಾನ?

    ಬೊಮ್ಮಾಯಿ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ವಿಚಾರವಾಗಿ ಬಿ.ಸಿ.ಪಾಟೀಲ್​ ಬಗ್ಗೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಸಂಪುಟದಿಂದ ಬಿ.ಸಿ.ಪಾಟೀಲ್ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಸಿ.ಪಾಟೀಲ್​​ ವಿರುದ್ಧ ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡರ ದೂರು ಕೇಳಿಬಂದಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದೆ ಮುಖಂಡರು ದೂರು ಹೇಳಿಕೊಂಡಿದ್ದಾರೆ. ಹೀಗಾಗಿ ಬಿ.ಸಿ.ಪಾಟೀಲ್ ಬದಲು ಹಾಲಪ್ಪ ಆಚಾರ್​ಗೆ ಸ್ಥಾನ ನೀಡುವ ಸಾಧ್ಯತೆ ಇದೆಯಾ ಎಂಬ ಸಾಧ್ಯತೆ ವ್ಯಕ್ತವಾಗಿದೆ. ಹಾಲಪ್ಪ ಆಚಾರ್, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕರಾಗಿದ್ದಾರೆ. ಹಾಲಪ್ಪ ಆಚಾರ್​ಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • 03 Aug 2021 04:37 PM (IST)

    ಸಂಪುಟದಲ್ಲಿ ಗಂಗಟ್ಕರ್ ಒಕ್ಕಲಿಗ ಪಂಗಡಕ್ಕೆ ಆದ್ಯತೆ ನೀಡಬೇಕೆಂದು ಚರ್ಚೆ

    ಬೊಮ್ಮಾಯಿ ಸಂಪುಟದಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ವಿಚಾರವಾಗಿ, ಗಂಗಟ್ಕರ್ ಒಕ್ಕಲಿಗ ಪಂಗಡಕ್ಕೆ ಆದ್ಯತೆ ನೀಡಬೇಕೆಂದು ಚರ್ಚೆ ಕೇಳಿಬಂದಿದೆ. ಗಂಗಟ್ಕರ್ ಒಕ್ಕಲಿಗ ಸಮುದಾಯದಿಂದ ಮೂವರು ರೇಸ್​ನಲ್ಲಿ ಇದ್ದಾರೆ. ರಾಜ್ಯ ಬಿಜೆಪಿ ಪಾಳಯದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಿದೆ. ಈ ಪಂಗಡದ ಡಾ.ಅಶ್ವತ್ಥ್​ ನಾರಾಯಣ, ಎಲ್.ನಾಗೇಂದ್ರ, ಸಿ.ಪಿ.ಯೋಗೇಶ್ವರ್​​ ಹೆಸರು ಮುನ್ನೆಲೆಯಲ್ಲಿದೆ.

  • 03 Aug 2021 04:13 PM (IST)

    ತುಮಕೂರು ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲೇಬೇಕು

    ತುಮಕೂರು ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲೇಬೇಕು ಎಂದು ತುಮಕೂರಿನಲ್ಲಿ ಮಾಜಿ ಎಂಎಲ್​ಸಿ ಹುಲಿನಾಯ್ಕರ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಮಾಧುಸ್ವಾಮಿ, ಬಿ.ಸಿ.ನಾಗೇಶ್‌ಗೆ ಸಚಿವ ಸ್ಥಾನ ನೀಡಬೇಕು. ಜೆ.ಸಿ.ಮಾಧುಸ್ವಾಮಿ ದಕ್ಷ ಸಂಸದೀಯ ಪಟುವಾಗಿದ್ದಾರೆ. ಅಧಿವೇಶನಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಜಿ.ಸಿ.ಮಾಧುಸ್ವಾಮಿ ಉತ್ತಮ ಆಡಳಿತಗಾರರಾಗಿದ್ದಾರೆ. ಹೀಗಾಗಿ ಜೆ.ಸಿ.ಮಾಧುಸ್ವಾಮಿಗೆ ಸಚಿವ ಸ್ಥಾನ ನೀಡಬೇಕು. ತಿಪಟೂರು ಶಾಸಕ ಬಿ.ಸಿ.ನಾಗೇಶ್ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿರುವುದನ್ನು ಗುರುತಿಸಿ ಸ್ಥಾನ ನೀಡಿ ಎಂದು ಹುಲಿನಾಯ್ಕರ್ ಆಗ್ರಹಿಸಿದ್ಧಾರೆ.

  • 03 Aug 2021 04:11 PM (IST)

    ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ನೀರಿನ ಟ್ಯಾಂಕ್ ಮೇಲೆ ಏರಿ ಒತ್ತಾಯ

    ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿಬಂದಿದೆ. ನೀರಿನ ಟ್ಯಾಂಕ್ ಮೇಲೆ ಏರಿ ಬೆಂಬಲಿಗರಿಂದ ಒತ್ತಾಯ ಜೋರಾಗಿದೆ. ಸಚಿವ ಸ್ಥಾನ ನೀಡೋವರೆಗೂ ಟ್ಯಾಂಕ್ ಮೇಲಿಂದ ಇಳಿಯಲ್ಲ ಎಂದು ಹಾವೇರಿಯಲ್ಲಿ ನೆಹರು ಓಲೇಕಾರ್ ಬೆಂಬಲಿಗರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಹಾವೇರಿ ತಹಶೀಲ್ದಾರ್, ಟೌನ್ ಪೊಲೀಸರು ಭೇಟಿ ನೀಡಿದ್ದಾರೆ. ಶಾಸಕರ ಬೆಂಬಲಿಗರ ಮನವೊಲಿಸಿ ಅವರನ್ನು ಕೆಳಗಿಳಿಸಲಾಗಿದೆ.

  • 03 Aug 2021 04:09 PM (IST)

    ಯಡಿಯೂರಪ್ಪ ಭೇಟಿಯಾಗಿ ತೆರಳಿದ ರೇಣುಕಾಚಾರ್ಯ, ರಾಜುಗೌಡ

    ರೇಣುಕಾಚಾರ್ಯ ಹಾಗೂ ರಾಜುಗೌಡ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ತೆರಳಿದ್ದಾರೆ. ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಭೇಟಿಯಾಗಿ ವಾಪಸಾಗಿದ್ದಾರೆ. ರಾತ್ರಿ ದೆಹಲಿಯಿಂದ ಹಿಂದಿರುಗಿರುವ ಶಾಸಕ ರಾಜುಗೌಡ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ರಾಜುಗೌಡ, ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಶಾಸಕ ಆಗಿದ್ದಾರೆ.

  • 03 Aug 2021 04:08 PM (IST)

    ನೂತನ ಸಚಿವರ ಪಟ್ಟಿ ಹಿಡಿದು‌ ಬರಲಿರುವ ಬೊಮ್ಮಾಯಿ

    ಬೆಂಗಳೂರಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ವಾಪಸಾಗಲಿದ್ದಾರೆ. ನೂತನ ಸಚಿವರ ಪಟ್ಟಿ ಹಿಡಿದು‌ ಬೊಮ್ಮಾಯಿ ರಾಜ್ಯಕ್ಕೆ ಬರಲಿರುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅವರು ಸಂಜೆ 7.50ಕ್ಕೆ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ರಾತ್ರಿ 10.30ರ ಸಮಾರಿಗೆ ಬೆಂಗಳೂರು ತಲುಪಲಿದ್ದಾರೆ.

  • 03 Aug 2021 04:06 PM (IST)

    ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಕೆ.ಎಸ್.ಈಶ್ವರಪ್ಪ ಭೇಟಿ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು, ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ದೇವಾಲಯಕ್ಕೆ ಈಶ್ವರಪ್ಪ ಭೇಟಿ ಕೊಟ್ಟಿದ್ದಾರೆ.

  • 03 Aug 2021 02:46 PM (IST)

    ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

    ಸಂಪುಟ ರಚನೆಗೆ ದೆಹಲಿಯಲ್ಲಿ ಕಸರತ್ತು ಮುಂದುವರಿದೆ. ಜೊತೆಗೆ ರಾಜ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಕುಟುಂಬ ಸಮೇತರಾಗಿ ಈಶ್ವರಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ  ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ್ದಾರೆ.

  • 03 Aug 2021 02:12 PM (IST)

    ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ; ಹರತಾಳ್ ಹಾಲಪ್ಪ

    ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಹರತಾಳ್ ಹಾಲಪ್ಪ, ನಾನು ಸಚಿವ ಸ್ಥಾನದ ಆಕಾಂಕ್ಷಿ. ನಾನು ಕೂಡಾ ಸಾಕಷ್ಟು ಹಿರಿಯ ಇದ್ದೇನೆ. ಪಕ್ಷ ಅಳೆದು ತೂಗಿ ಕ್ಯಾಬಿನೆಟ್ ರಚನೆ ಮಾಡ್ತಿದೆ. ನನಗೂ ಕೂಡಾ ಈ ಬಾರಿ ಚಾನ್ಸ್ ಸಿಗೋ ವಿಶ್ವಾಸ ಇದೆ. ಹೈಕಮಾಂಡ್ ನನ್ನನ್ನ ಗುರುತಿಸುತ್ತೆ ಅಂತ ನಂಬಿಕೆ ಇದೆ. ಆದ್ರೆ ನಾನು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿ ಲಾಬಿ ಮಾಡೊಲ್ಲ. ನಾನು ಕೂಡಾ ಸಚಿವ ಸ್ಥಾನ ಕೊಡಿ ಅಂತಾ ಕೇಳಿದ್ದೀನಿ. ಆದರೆ ಲಾಬಿ ಮಾಡಲು ಹೋಗೊಲ್ಲ ತಿಳಿಸಿದರು.

  • 03 Aug 2021 01:49 PM (IST)

    ಯಡಿಯೂರಪ್ಪ ಭೇಟಿಗೆ ರೇಣುಕಾಚಾರ್ಯ ಆಗಮನ

    ಇಂದು ಸಿಎಂ ದೆಹಲಿಯಿಂದ ವಾಪಸ್ ಆಗೋ ಹಿನ್ನೆಲೆ ಶಾಸಕ ರೇಣುಕಾಚಾರ್ಯ ಬೆಂಗಳೂರಿಗೆ ಆಗಮಿಸಿದ್ದಾರೆ. ಇದೀಗ ಯಡಿಯೂರಪ್ಪರನ್ನು ಭೇಟಿ ಮಾಡಲು ರೇಣುಕಾಚಾರ್ಯ ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ.

  • 03 Aug 2021 01:42 PM (IST)

    ಸಂಜೆ 7.50ಕ್ಕೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲಿರುವ ಸಿಎಂ ಬೊಮ್ಮಾಯಿ

    ನೂತನ ಸಚಿವರ ಪಟ್ಟಿ ಹಿಡಿದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ 7.30ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಬರಲಿದ್ದಾರೆ. ಸಿಎಂ ರಾತ್ರಿ 10.30ರ ಸುಮಾರಿಗೆ ಬೆಂಗಳೂರು ತಲುಪಬಹುದು.

  • 03 Aug 2021 01:40 PM (IST)

    ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಎಂಎಲ್​ಸಿ ಯೋಗೇಶ್ವರ್​

    ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಎಂಎಲ್​ಸಿ ಯೋಗೇಶ್ವರ್​, ದೆಹಲಿಯಲ್ಲಿ ಉಳಿದುಕೊಂಡು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಎಸ್​ವೈ ವಿರೋಧ ಬಣದ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರೊ ಯೋಗೇಶ್ವರ್, ಡಿಸಿಎಂ ಸ್ಥಾನ ಸಿಕ್ಕರೇ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

  • 03 Aug 2021 01:25 PM (IST)

    ಕೂಡಲೇ ಪಟ್ಟಿ ತಂದು ಸಚಿವ ಸಂಪುಟ ರಚನೆ ಮಾಡಬೇಕು -ಸಿದ್ದರಾಮಯ್ಯ

    ಕೂಡಲೇ ಮಂತ್ರಿ ಮಂಡಲ ಮಾಡಬೇಕು. ಪ್ರವಾಹದಿಂದ ಜನ ಕಷ್ಟ ಪಡುತ್ತಿದ್ದಾರೆ. ಮೂರನೇ ಅಲೆ ಬರ್ತಾ ಇದೆ. ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಪಟ್ಟಿ ತಂದು ಮಂತ್ರಿ ಮಂಡಲ ಮಾಡಬೇಕು. ಸಮಸ್ಯೆಗಳಿಗೆ ಪರಿಹಾರ ಸರ್ಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

  • 03 Aug 2021 01:10 PM (IST)

    ಹಿರಿಯರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಸಿಎಂ ಒಲವು, ಆದ್ರೆ ಹಿರಿಯರನ್ನು ಕೈಬಿಡುವಂತೆ ಹೈಕಮಾಂಡ್​ ಸಲಹೆ

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿನ್ನೆ ಮಹತ್ವದ ಮಾತುಕತೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮತ್ತು ಸಿಎಂ ಬೊಮ್ಮಾಯಿ ಚರ್ಚೆ ನಡೆಸಿ್ದು ಸಿಎಂ ಹೊತ್ತೊಯ್ದಿದ್ದ ಲಿಸ್ಟ್‌ನಲ್ಲಿ ಹಲವು ಹಿರಿಯರಿಗೆ ಸ್ಥಾನ ನೀಡಲಾಗಿದೆ.ಆದರೆ ಹಿರಿಯನ್ನು ಕೈಬಿಡುವಂತೆ ಹೈಕಮಾಂಡ್‌ನಿಂದ ಸಲಹೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಹೈಕಮಾಂಡ್‌ ಮನವೊಲಿಸಲು ಸಿಎಂ ಬೊಮ್ಮಾಯಿ ಯತ್ನಿಸುತ್ತಿದ್ದು ಸುಮಾರು ಒಂದು ಗಂಟೆ ಕಾಲ ಈ ಬಗ್ಗೆ ಚರ್ಚಿಸಿದ್ದಾರೆ. ಹಿರಿಯರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಸಿಎಂ ಒಲವು ತೋರಿಸಿದ್ದಾರೆ. ಹಿರಿಯರನ್ನ ಕೈಬಿಟ್ಟರೆ ಸಮಸ್ಯೆ ಎಂಬುದು ಸಿಎಂಗೆ ಸಧ್ಯ ಕಾಡುತ್ತಿರುವ ಆತಂಕ.

  • 03 Aug 2021 12:48 PM (IST)

    ಶಾಸಕ ಶಿವರಾಜ ಪಾಟೀಲ್​ಗೆ ಸಚಿವ ಸ್ಥಾನ ನೀಡಲು ಆಗ್ರಹ

    ಶಾಸಕ ಶಿವರಾಜ ಪಾಟೀಲ್​ಗೆ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ರಾಯಚೂರ ನಗರದಲ್ಲಿರುವ ವೈಕುಂಠವೀರ ಹನುಮಾನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

  • 03 Aug 2021 12:21 PM (IST)

    ಇಂದು ಸಂಜೆ ಬೆಂಗಳೂರಿಗೆ ವಾಪಸ್​ ಆಗಲಿರುವ ಸಿಎಂ ಬೊಮ್ಮಾಯಿ

    ಸಿಎಂ ಬೊಮ್ಮಾಯಿ ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್​ ಆಗುತ್ತಾರೆ. ನೂತನ ಸಚಿವರ ಪಟ್ಟಿ ಹಿಡಿದು‌ ಮುಖ್ಯಮಂತ್ರಿ ಸಂಜೆ 4.50 ರ ವಿಸ್ತಾರ ವಿಮಾನದಲ್ಲಿ ಬರುತ್ತಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಸಿಎಂ ಆಗಮಿಸಲಿದ್ದಾರೆ.

  • 03 Aug 2021 12:04 PM (IST)

    ಕೊನೆಯ ಕ್ಷಣದಲ್ಲಿ ಸಚಿವರಾಗಿ ಎಂಟ್ರಿ ಕೊಡ್ತಾರಾ ಬಿ.ವೈ.ವಿಜಯೇಂದ್ರ?

    ಬಿ.ವೈ.ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಸಚಿವರಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ವಿಜಯೇಂದ್ರ ಪರ ಸ್ವಾಮೀಜಿಗಳೂ ಬ್ಯಾಟಿಂಗ್ ಬೀಸಿದ್ದಾರೆ. ವರಿಷ್ಠರು ಒಪ್ಪಿದರೆ ವಿಜಯೇಂದ್ರ ಸಚಿವಗಿರಿ ಪಡೆಯುತ್ತಾರೆ. ವಿಜಯೇಂದ್ರ ಸೇರ್ಪಡೆ ಬಗ್ಗೆ ಸಿಎಂ ಬೊಮ್ಮಾಯಿ‌ ಇನ್ನೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ.

  • 03 Aug 2021 12:01 PM (IST)

    ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ದೀರ್ಘ ದಂಡ ನಮಸ್ಕಾರ

    ಹುಬ್ಬಳ್ಳಿಯಲ್ಲಿ‌ ಸಚಿವ ಸ್ಥಾನಕ್ಕೆ ಲಾಬಿ ಹೆಚ್ಚಾಗಿದೆ. ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಅರವಿಂದ ಬೆಲ್ಲದ ಅಭಿಮಾನಿಗಳು ದೀರ್ಘ ದಂಡ ನಮಸ್ಕಾರ ಹಾಕಿದರು. ಸಚಿವ ಸ್ಥಾನ ನೀಡಬೇಕು ಎಂದು ಬೆಲ್ಲದ ಅವರ ಪರ ಘೋಷಣೆ ಕೂಗಿ  ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಅಭಿಮಾನಿಗಳು ಒತ್ತಾಯಿಸಿದ್ದಾರೆ.

  • 03 Aug 2021 11:54 AM (IST)

    ಅರುಣ್ ಸಿಂಗ್ ಭೇಟಿಯಾದ ಸಿಎಂ ಬೊಮ್ಮಾಯಿ

    ದೆಹಲಿಯ ಸಂಸತ್ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.

  • 03 Aug 2021 11:43 AM (IST)

    ಎಂ.ವೆಂಕಯ್ಯನಾಯ್ಡು ಭೇಟಿಯಾದ ಸಿಎಂ‌

    ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡುರನ್ನು ಸಿಎಂ‌ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ಸಂಸತ್ ಭವನದಲ್ಲಿ  ಸಿಎಂ‌ ಉಪರಾಷ್ಟ್ರಪತಿಯನ್ನು ಭೇಟಿಯಾದರು.

  • 03 Aug 2021 11:34 AM (IST)

    ಬಿಎಸ್‌ವೈ ನಿವಾಸಕ್ಕೆ ಆಗಮಿಸುತ್ತಿರುವ ಶಾಸಕರ ದಂಡು

    ಬಿಎಸ್‌ವೈ ಕಾವೇರಿ ನಿವಾಸಕ್ಕೆ ಶಾಸಕರ ದಂಡು ಆಗಮಿಸುತ್ತಿದೆ. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕಾಪು ಶಾಸಕ ಲಾಲ್‌ಜೀ ಮೆಂಡನ್ ಬೊಮ್ಮಾಯಿ ಸಂಪುಟ ಸೇರಲು  ಅಂತಿಮ ಕಸರತ್ತು ನಡೆಸುತ್ತಿದ್ದಾರೆ.

  • 03 Aug 2021 11:26 AM (IST)

    ಕಾಲಕಾಲಕ್ಕೆ ತಕ್ಕಂತೆ ಮಸೂದೆಗಳು ಬದಲಾಗಬೇಕು: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿಕೆ

    ಕಾಲಕಾಲಕ್ಕೆ ತಕ್ಕಂತೆ ಮಸೂದೆಗಳು ಬದಲಾಗಬೇಕು ಅಂತ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಯಾವುದೇ ಮಸೂದೆ ಸರ್ಕಾರದ ಅನುಕೂಲತೆಗಲ್ಲ. ಮಸೂದೆಗಳನ್ನು ಮಂಡಿಸುವುದು ಜನರ ಅನುಕೂಲಕ್ಕೆ. ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಸ್ಥಿರತೆ ಇಲ್ಲ. ಇಂದು ಒಂದು ಮಾತಾಡ್ತಾರೆ ನಾಳೆ ಮತ್ತೊಂದು ಹೇಳ್ತಾರೆ ಅಂತ ಪ್ರಹ್ಲಾದ್​ ಜೋಶಿ ಅಭಿಪ್ರಾಯಪಟ್ಟರು.

  • 03 Aug 2021 11:20 AM (IST)

    ಓಲೇಕಾರ್​ಗೆ ಸಚಿವ ಸ್ಥಾನ ಕೊಡದೆ ಇದ್ರೆ ಹಾವೇರಿಯಲ್ಲಿ ಉಗ್ರ ಹೋರಾಟ!

    ಓಲೇಕಾರ್​ಗೆ ಸಚಿವ ಸ್ಥಾನ ಕೊಡದೆ ಇದ್ರೆ ಹಾವೇರಿಯಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಅವರ ಬೆಂಬಲಿಗರು ಕಾವೇರಿ ನಿವಾಸದ ಬಳಿ ಘೋಷಣೆ ಕೂಗಿದ್ದಾರೆ. ನೆಹರೂ ಓಲೆಕಾರ್​ರಿಗೆ ಸಚಿವ ಸ್ಥಾನ ಕೊಡದಿದ್ರೆ ಸಿಎಂ ವಿರುದ್ಧವೂ ಪ್ರತಿಭಟನೆ ಮಾಡುತ್ತೇವೆ ಎಂದು ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

  • 03 Aug 2021 11:16 AM (IST)

    ಅರವಿಂದ್ ಬೆಲ್ಲದ್​ಗೆ ಸಚಿವ ಸ್ಥಾನ ಸಿಗಬೇಕೆಂದು ದೇವರ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

    ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ಗೆ ಸಚಿವ ಸ್ಥಾನ ಸಿಗಲಿ ಅಂತಾ ಬಿಜೆಪಿ ಕಾರ್ಯಕರ್ತರು ಧಾರವಾಡದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

  • 03 Aug 2021 11:13 AM (IST)

    ಬಿ ಶ್ರೀರಾಮುಲು ಡಿಸಿಎಂ ಆಗಲಿ ಎಂದು ಯುವಕರಿಂದ 126 ಕಿ.ಮೀ. ಪಾದಯಾತ್ರೆ

    ಮಾಜಿ ಸಚಿವ ಶ್ರೀರಾಮುಲು ಡಿಸಿಎಂ ಆಗಲಿ ಅಂತ ಯುವಕರು ಪಾದಯಾತ್ರೆ ಮಾಡಿದ್ದಾರೆ. ಹರಕೆ ಕಟ್ಟಿಕೊಂಡು ಯುವಕರು ಸುಮಾರು 126 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಮೂವರು ಯುವಕರು ಮಸ್ಕಿಯಿಂದ ಬಳ್ಳಾರಿಗೆ  ಕಾಲ್ನಡಿಗೆಯಲ್ಲಿ ಬಂದಿದ್ದಾರೆ. 126 ಕಿ.ಮೀ ನಡೆದುಕೊಂಡು ಬಂದು ಬಳ್ಳಾರಿಯ ಕನಕ ದುರ್ಗಾದೇವಿಗೆ ಹರಕೆ ತೀರಿಸಿದ್ದಾರೆ. ಮಸ್ಕಿಯ ವಾಲ್ಮೀಕಿ ನಗರದ ಮೂವರು ಯುವಕರು ಮೂರು ದಿನಗಳ ಪಾದಯಾತ್ರೆ ಮಾಡಿದ್ದಾರೆ. ಮೌನೇಶ್, ಕಳಸಪ್ಪ, ಹನುಮ ರೆಡ್ಡಿ ಪಾದಯಾತ್ರೆ ಮಾಡಿದ ಯುವಕರು.

     

  • 03 Aug 2021 10:58 AM (IST)

    ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನಮ್ಮ ಪಾತ್ರ ಬಹಳವಿದೆ: ಬಿ.ಸಿ.ಪಾಟೀಲ್

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನಮ್ಮ ಪಾತ್ರ ಬಹಳವಿದೆ ಎಂದು ಬಿಜೆಪಿ ಶಾಸಕ ಬಿ.ಸಿ.ಪಾಟೀಲ್​ ಹೇಳಿದರು. ಕಾಂಗ್ರೆಸ್, ಜೆಡಿಎಸ್​ನಿಂದ ಗೆದ್ದ ಶಾಸಕರು ನಮ್ಮ ನಮ್ಮ ಕ್ಷೇತ್ರಕ್ಕೆ ಅನ್ಯಾಯ ಆಗಬಾರದು ಅಂತಾ ಸಿಡಿದೆದ್ದು ಬಿಜೆಪಿ ಆಡಳಿತಕ್ಕೆ ತಂದಿದ್ದೇವೆ. ಆ ನಿಟ್ಟಿನಲ್ಲಿ ಬಿಜೆಪಿ ಮಾತು ಕೊಟ್ಟಂತೆ ನಡೆದುಕೊಂಡಿದೆ. ಈಗಲೂ ಕೂಡ ಅದರಂತೆ ಅವರು ಸ್ಟಿಕ್ ಆನ್ ಹಾಕ್ತಾರೆ ಅನ್ನೋ ಭಾವನೆ ಇದೆ. ಮುಂದಿನ 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋ ಸಂಕಲ್ಪವನ್ನ ರಾಜ್ಯ ಸರಕಾರ, ರಾಜ್ಯ ಬಿಜೆಪಿ ಪಕ್ಷ, ಕೇಂದ್ರ ವರಿಷ್ಠರು, ಕೇಂದ್ರ ಬಿಜೆಪಿ ಪಕ್ಷ ಈಗಾಗಲೆ ತೀರ್ಮಾನ ಮಾಡಿದೆ. ಆ ನಿಟ್ಟಿನಲ್ಲಿ ಹೊಸ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರೋ ಬಸವರಾಜ ಬೊಮ್ಮಾಯಿಯವರ ಜೊತೆಗೆ ನಿನ್ನೆ ಪಕ್ಷದ ವರಿಷ್ಠರು ಸಭೆ ಮಾಡಿದ್ದಾರೆ. ಇವತ್ತು ಸಂಜೆಯೊಳಗೆ ಪಟ್ಟಿ ಸಿದ್ದವಾಗುತ್ತದೆ ಅಂತಾ ಸಿಎಂ ಹೇಳಿದ್ದಾರೆ. ಜಾತಿವಾರು, ಪ್ರಾಂತ್ಯವಾರು ಎಲ್ಲರಿಗೂ ಸಮಾನವಾದ ಅವಕಾಶ ಬಿಜೆಪಿ ಪಕ್ಷ ಮಾಡಿಕೊಡುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಂಸ್ಕೃತಿ ಬೇರೆ. ಬಿಜೆಪಿ ಸಂಸ್ಕೃತಿಯನ್ನ ಸಿದ್ದರಾಮಯ್ಯ ಹೊಗಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಸಂಸ್ಕೃತಿ ಹೊಗಳುತ್ತಾರೆ. ಅವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

  • 03 Aug 2021 10:32 AM (IST)

    ಜಿ.ಎಂ.ಸಿದ್ದೇಶ್ವರ ಮನೆಯಿಂದ ಹೊರಟ ಸಿಎಂ

    ನಿನ್ನೆ ರಾತ್ರಿ ಸಿದ್ದೇಶ್ವರ ಮನೆಯಲ್ಲಿದ್ದ ಸಿಎಂ ಬೊಮ್ಮಾಯಿ, ಅಲ್ಲಿಂದ ಹೊರಟ್ಟಿದ್ದಾರೆ. ದಾವಣಗರೆ ಸಂಸದ ಜಿ.ಎಂ.ಸಿದ್ದೇಶ್ವರ ನಿವಾಸ ದೆಹಲಿಯ ಜಿ ಆರ್​ ಜಿ ನಗರದಲ್ಲಿದೆ. ಅಲ್ಲಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸತ ಭವನದ ಕಡೆ ಹೊರಟಿದ್ದಾರೆ.

  • 03 Aug 2021 10:27 AM (IST)

    ಇಂದು ಕೂಡ ಬಿಎಸ್​ವೈ ಭೇಟಿ ಮಾಡುತ್ತಿರುವ ಶಾಸಕರು

    ಇಂದು ಸಂಜೆ ಹೊತ್ತಿಗೆ ಸಚಿವರ ಪಟ್ಟಿ ಸಿಗುವ ಸಾಧ್ಯತೆಯಿದೆ. ಈಗಾಗಲೇ ಹಲವು ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರನ್ನು ಶಾಸಕರು ಭೇಟಿ ಮಾಡುತ್ತಿದ್ದಾರೆ. ಇಂದು ಶಾಸಕ ಬೆಳ್ಳಿ ಪ್ರಕಾಶ್, ಶಾಸಕ ಪರಣ್ಣ ಮುನವಳ್ಳಿ ಬಿಎಸ್​ವೈನ ಭೇಟಿ ಮಾಡಿದ್ದಾರೆ.

  • 03 Aug 2021 10:05 AM (IST)

    ಶಾಸಕ‌ ಪ್ರೀತಂಗೌಡಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳಿಂದ ಪೂಜೆ

    ಶಾಸಕ‌ ಪ್ರೀತಂಗೌಡಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಹಾಸನದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿ, ಮುಂದಿನ ಮಂತ್ರಿ ಪ್ರೀತಂಗೌಡ ಎಂದು ಘೋಷಣೆ ಕೂಗಿದರು.

  • 03 Aug 2021 09:54 AM (IST)

    ದೆಹಲಿಯ ಕರ್ನಾಟಕ ಭವನಕ್ಕೂ ಬಾರದೆ ಚರ್ಚೆಯಲ್ಲಿ ಸಿಎಂ ಮಗ್ನ

    ದೆಹಲಿಯ ಕರ್ನಾಟಕ ಭವನಕ್ಕೂ ಬಾರದೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆಯಲ್ಲಿ ಮಗ್ನರಾಗಿದ್ದಾರೆ. ನಿನ್ನೆ ರಾತ್ರಿಯಿಂದ ಇದುವರೆಗೂ ಸಿಎಂ ಭವನಕ್ಕೆ ಬಂದಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಗೊಂದಲದಲ್ಲಿರುವ ಬೊಮ್ಮಾಯಿ ಸದ್ಯ ಅಜ್ಞಾತ ಸ್ಥಳದಲ್ಲಿದ್ದಾರೆ.

  • 03 Aug 2021 09:30 AM (IST)

    ಸತತ ಒಂದು ಗಂಟೆಗಳ ಕಾಲ ಬಿಎಸ್​​ವೈ ಜೊತೆ ಚರ್ಚೆ ನಡೆಸಿದ ವಿಜಯೇಂದ್ರ

    ಶಕ್ತಿ ಕೇಂದ್ರ ಕಾವೇರಿಯಲ್ಲಿ ಬಿಎಸ್​ವೈ ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ, ಸತತ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆ ಬಗ್ಗೆ ಯಡಿಯೂರಪ್ಪ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಲು ವಿಜಯೇಂದ್ರ ಯಡಿಯೂರಪ್ಪರ ಬಳಿ ಮಾತುಕತೆ ನೆಡೆಸಿರಬಹುದಾ? ಎಂಬ ಪ್ರಶ್ನೆ ಮುಡಿದೆ. ಸುಮಾರು ಒಂದು ಘಂಟೆಗಳ ಕಾಲ ಚರ್ಚೆ ನಡೆಸಿದ ವಿಜಯೇಂದ್ರ, ಕಾವೇರಿ‌ ನಿವಾಸದಿಂದ ಹೊರಟು ಹೋದರು.

  • 03 Aug 2021 09:26 AM (IST)

    ಸಿಎಂ ಬೊಮ್ಮಾಯಿ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಆಧ್ಯತೆ‌ ಸಿಗತ್ತಾ?

    ವಿಜಯಪುರ ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದು‌, ಯಾರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಕಾದು ನೋಡಬೇಕಿದೆ. ಶಾಸಕ‌ ಯತ್ನಾಳ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಬಿಎಸ್​ವೈ ನಾಯಕತ್ವ ಬದಲಾವಣೆ ಕುರಿತು ಯತ್ನಾಳ್ ಬಹಿರಂಗವಾಗಿ ಸಿಡಿದೆದ್ದಿದ್ದರು. ಬಿಎಸ್​ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಕುರಿತೂ ಬಸನಗೌಡ ಗುಡುಗಿದ್ದರು. ಸಿಎಂ ಹಾಗೂ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದರು. ಯತ್ನಾಳ್ ಹಾಗೂ ನಡಹಳ್ಳಿಗೆ ಅವಕಾಶ ತಪ್ಪಿದರೆ ಸೋಮನಗೌಡ ಪಾಟೀಲ್ ಸಾಸನೂರ ಸಚಿವರಾಗುವ ಅವಕಾಶ ಸಿಗಬಹುದು.

  • 03 Aug 2021 09:21 AM (IST)

    ರಮೇಶ್ ಜಾರಕಿಹೊಳಿ‌ ಬದಲಿಗೆ ಸಹೋದರ ಬಾಲಚಂದ್ರಗೆ ಒಲಿದು ಬರುತ್ತಾ ಮಂತ್ರಿಗಿರಿ?

    ಹಿರಿಯ ಶಾಸಕ ಉಮೇಶ್ ಕತ್ತಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಇಬ್ಬರು ನಾಯಕರು ಬೆಂಗಳೂರು ಸೇರಿದಂತೆ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ‌ ಸಿಡಿ ಕೇಸ್ ಇತ್ಯರ್ಥವಾಗದ ಹಿನ್ನೆಲೆ, ರಮೇಶ್ ಬದಲಿಗೆ ಸಹೋದರ ಬಾಲಚಂದ್ರಗೆ ಒಲಿದು ಬರುವ ಸಾಧ್ಯತೆಯಿದೆ.

  • 03 Aug 2021 09:17 AM (IST)

    ಮೈಸೂರಿನ ಮೂವರು ಶಾಸಕರಿಂದ ಮಂತ್ರಿಪಟ್ಟಕ್ಕೆ ಕೊನೆ ಕ್ಷಣದ ಕಸರತ್ತು

    ಮಂತ್ರಿಪಟ್ಟಕ್ಕೆ ಮೈಸೂರಿನ ಮೂವರು ಶಾಸಕರಿಂದ ಕೊನೆ ಕ್ಷಣದ ಕಸರತ್ತು ನಡೆಯುತ್ತಿದೆ. ಅಭಿಮಾನಿಗಳಿಂದ ಒತ್ತಡ ತಂತ್ರ ಇಂದು ಮುಂದುವರಿಯಲಿದೆ. ಅಭಿಮಾನಿಗಳು ಪ್ರತಿಭಟನೆ ಪೂಜೆ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕೆ ಅರ್ ಕ್ಷೇತ್ರದ ಶಾಸಕ ಎಸ್.ಎಸ್​.ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ನಂಜನಗೂಡು ಶಾಸಕ ಬಿ.ಹರ್ಷವರ್ಧನ್​ನಲ್ಲಿ ಇದುವರೆಗೂ ಯಾರಿಗೂ ಕರೆ ಬಂದಿಲ್ಲ. ಯಡಿಯೂರಪ್ಪ ಅವಧಿಯಲ್ಲೂ ಮೈಸೂರು ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನನ ನಿರೀಕ್ಷಯಿದೆ.

  • 03 Aug 2021 09:13 AM (IST)

    ಸಂಪುಟ ಸೇರಲು ಲಾಬಿ ನಡೆಸುತ್ತುರುವ ಅರವಿಂದ್ ಬೆಲ್ಲದ್, ಶಂಕರ್ ಪಾಟೀಲ್

    ಬೊಮ್ಮಾಯಿ ಸಂಪುಟ ಸೇರಲು ಇಬ್ಬರು ಶಾಸಕರ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಅರವಿಂದ್ ಬೆಲ್ಲದ್, ಶಂಕರ್ ಪಾಟೀಲ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಶಾಸಕರು ತಮ್ಮ ತಮ್ಮ ನಾಯಕ‌ ಮೂಲಕ ಲಾಬಿ ನಡೆಸುತ್ತಿದ್ದಾರೆ. ಮಂತ್ರಿಗಿರಿಗಾಗಿ ಅರವಿಂದ್ ಬೆಲ್ಲದ್ ದೆಹಲಿಯಲ್ಲೆ ಬೀಡುಬಿಟ್ಟಿದ್ದಾರೆ.

  • 03 Aug 2021 09:10 AM (IST)

    ಕೊಡಗು ಬಿಜೆಪಿ ಪಾಳಯದಲ್ಲಿ ಹೆಚ್ಚಿದ ನಿರೀಕ್ಷೆ

    ಕೊಡಗಿನಲ್ಲಿ ಇಬ್ಬರು ಹಿರಿಯ ಬಿಜೆಪಿ ಶಾಸಕರಿದ್ದು, ನಿರೀಕ್ಷೆ ಹೆಚ್ಚಾಗಿದೆ. ಅಪ್ಪಚ್ಚು ರಂಜನ್ ಐದು ಬಾರಿ, ಕೆ.ಜಿ.ಬೋಪಯ್ಯ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಈ ಬಾರಿಯಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಶಾಸಕರಿದ್ದಾರೆ. ಈ ಹಿಂದೆ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಕಾರ್ಯನಿರ್ವಹಿಸಿದ್ದರು.

  • 03 Aug 2021 09:07 AM (IST)

    ಕಲಬುರಗಿಗೆ ಈ ಬಾರಿ‌ ಸಂಪುಟದಲ್ಲಿ 1 ಸ್ಥಾನ ಸಿಗುವ ಸಾಧ್ಯತೆ

    ಕಲಬುರಗಿ ಜಿಲ್ಲೆಗೆ ಈ ಬಾರಿ‌ ಸಂಪುಟದಲ್ಲಿ 1 ಸ್ಥಾನ ಸಿಗುವ ಸಾಧ್ಯತೆಯಿದೆ. ಪ್ರಾದೇಶಿಕ ಸಮತೋಲನ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆಯಿದೆ. ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಸುಭಾಷ್ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ರೇವೂರ್​ರಿಂದ ಮಂತ್ರಿ ಸ್ಥಾನಕ್ಕೆ ಕಸರತ್ತು ನಡೆಯುತ್ತಿದೆ. ಬೆಂಗಳೂರು, ದೆಹಲಿಯಲ್ಲಿ ಬಿಜೆಪಿ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಬಿಎಸ್‌ವೈ ಸರ್ಕಾರದಲ್ಲಿ ಕಲಬುರಗಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರು ಮಂತ್ರಿ ಸ್ಥಾನ‌ ಸಿಕ್ಕಿರಲಿಲ್ಲ.

  • 03 Aug 2021 09:05 AM (IST)

    ಸಚಿವ‌ ಸ್ಥಾನಕ್ಕಾಗಿ ಕೋಟೆನಾಡಿನ ಬಿಜೆಪಿ ಶಾಸಕರ ಕಸರತ್ತು

    ಸಚಿವ‌ ಸ್ಥಾನಕ್ಕಾಗಿ ಕೋಟೆನಾಡಿನ ಬಿಜೆಪಿ ಶಾಸಕರಿಂದ ಕಸರತ್ತು ನಡೆಯುತ್ತಿದೆ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹಿಂದುಳಿದ ಸಮುದಾಯ, ಹಿರಿತನದ ಮೇಲೆ ಮಂತ್ರಿಗಿರಿಗೆ ಪಟ್ಟು ಬಿದ್ದಿದ್ದಾರೆ. ಮಹಿಳಾ, ಹಿಂದುಳಿದ ಗೊಲ್ಲ ಸಮುದಾಯದ ಏಕೈಕ‌ ಶಾಸಕಿ ಪೂರ್ಣಿಮಾ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

  • 03 Aug 2021 09:02 AM (IST)

    ಟಿವಿ9ಗೆ ಮೊದಲ ಹಂತದ ಸಚಿವರ ಪಟ್ಟಿ ಲಭ್ಯ

    ಟಿವಿ9ಗೆ ಮೊದಲ ಹಂತದ ಸಚಿವರ ಪಟ್ಟಿ ಲಭ್ಯವಾಗಿದೆ. ಐವರು ಶಾಸಕರಿಗೆ ಬಹುತೇಕ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಸೇಡಂ ಕ್ಷೇತ್ರದ ಶಾಸಕ ರಾಜ್‌ಕುಮಾರ್ ಪಾಟೀಲ್, ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್, ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ತಿಪಟೂರು ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

  • 03 Aug 2021 09:00 AM (IST)

    ಸಚಿವ ಸ್ಥಾನಕ್ಕಾಗಿ ಶಾಸಕ ರಾಜುಗೌಡ‌ರಿಂದ ಬಾರಿ ಕಸರತ್ತು

    ಸಚಿವ ಸ್ಥಾನಕ್ಕಾಗಿ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ‌ ಅವರಿಂದ‌ ಬಾರಿ ಕಸರತ್ತು ನಡೆಯುತ್ತಿದೆ. ಮೊನ್ನೆ ರಾತ್ರೋರಾತ್ರಿ ಬೆಂಗಳೂರಿಗೆ‌ ಪ್ರಯಾಣ ಬೆಳೆಸಿದ್ದ ಶಾಸಕ, ದೆಹಲಿಯಲ್ಲಿ ಬಸವರಾಜ್ ಬೊಮ್ಮಾಯಿ ಜೊತೆ ಇದ್ದಾರೆ. ಮಾಜಿ ಸಿಎಂ ಬಿಎಸ್‌ವೈ ಬೆಂಬಲ ಪಡೆದು ಸಚಿವರಾಗಲು ಪ್ರಯತ್ನ ನಡೆಸುತ್ತಿದ್ದಾರೆ.ಬಿಎಸ್‌ವೈ ಸರ್ಕಾರದಲ್ಲೇ ಸಚಿವರಾಗಲು ಪ್ರಯತ್ನಿಸಿದ್ದರು. ಈ ಬಾರಿಯಾದ್ರು ಸಚಿವ ಸ್ಥಾನ ಪಡೆಯಲೆಬೇಕು ಎಂದು ಕಸರತ್ತು ನಡೆಸುತ್ತಿದ್ಧಾರೆ.

  • 03 Aug 2021 08:57 AM (IST)

    ದಿಡೀರ್ ಬೆಂಗಳೂರಿಗೆ ಆಗಮಿಸಿದ ಶಾಸಕ ರೇಣುಕಾಚಾರ್ಯ

    ಶಾಸಕ ರೇಣುಕಾಚಾರ್ಯ ದಿಡೀರ್​ ಆಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ಬರುವ ಮುನ್ನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿದ್ದಾರೆ.

  • 03 Aug 2021 08:56 AM (IST)

    ಸಚಿವ ಸ್ಥಾನಕ್ಕಾಗಿ ಶಾಸಕ ನಾರಾಯಣಗೌಡ ತೆರೆ ಮರೆಯ ಕಸರತ್ತು!

    ಮಂಡ್ಯ ಜಿಲ್ಲೆ ಕೆಆರ್ ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸಚಿವ ಸ್ಥಾನಕ್ಕಾಗಿ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವಾರದಿಂದ ಕ್ಷೇತ್ರಕ್ಕೆ ಬಾರದೆ ಬೆಂಗಳೂರಲ್ಲೇ ಶಾಸಕ ಉಳಿದುಕೊಂಡಿದ್ದಾರೆ. ಶಾಸಕ ನಾರಾಯಣಗೌಡ ಜೆಡಿಎಸ್​ನಿಂದ ಬಿಜೆಪಿಗೆ ಸೇರಿದ್ದರು.

  • 03 Aug 2021 08:51 AM (IST)

    ಸಚಿವ ಸ್ಥಾನಕ್ಕಾಗಿ ಶಾಸಕ ಶಿವನಗೌಡ ನಾಯಕ್ ಲಾಬಿ

    ಸಚಿವ ಸ್ಥಾನಕ್ಕಾಗಿ ಶಾಸಕ ಶಿವನಗೌಡ ನಾಯಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಹೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಆಪರೇಷನ್ ಕಮಲದ‌ ಅಡಿಯೊ ಕೇಸ್ ಶಿವನಗೌಡ ನಾಯಕಗೆ ಮುಳುವಾಗುವ ಸಾಧ್ಯತೆಯಿದೆ. ಮಾಜಿ ಸಿಎಂ ಬಿಎಸ್​ವೈ ಘನತೆಗೆ ಧಕ್ಕೆ ತಂದಿದ್ದ ಅಡಿಯೊ ಕೇಸ್ ಎಫೆಕ್ಟ್ ಸಾಧ್ಯತೆಯಿದೆ. ಮಸ್ಕಿ ಉಪಚುನಾವಣೆ ವೇಳೆಯಲ್ಲೂ ಪ್ರಚಾರದಿಂದ ಶಾಸಕ ಶಿವನಗೌಡ ನಾಯಕ್ ದೂರ ಉಳಿದಿದ್ದರು. ಉಪಚುನಾವಣೆ ವೇಳೆಯಲ್ಲಿ ವಿಜಯೇಂದ್ರಗೆ ಸಾಥ್ ನೀಡದೆ ಇರೊದು ಎಫೆಕ್ಟ್​ ಆಗುವ ಸಾಧ್ಯತೆಯಿದೆ.

  • 03 Aug 2021 08:48 AM (IST)

    ಬೆಳ್ಳಂಬೆಳಗ್ಗೆ ಬಿಎಸ್‌ವೈ ಭೇಟಿಗೆ ಆಗಮಿಸಿದ ವಿಜಯೇಂದ್ರ

    ಇಂದು ಬೆಳ್ಳಂಬೆಳಗ್ಗೆ ಬಿ.ಎಸ್​.ಯಡಿಯೂರಪ್ಪರನ್ನು ಭೇಟಿ ಮಾಡಲು ಬಿ.ವೈ.ವಿಜಯೇಂದ್ರ ಆಗಮಿಸಿದ್ದಾರೆ. ‘ಕಾವೇರಿ’ ನಿವಾಸಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಗಮಿಸಿದ್ದಾರೆ.

  • 03 Aug 2021 08:47 AM (IST)

    ಶ್ರೀರಾಮುಲುಗೆ ಡಿಸಿಎಂ ಪಟ್ಟಕ್ಕಾಗಿ ಮುಂದುವರಿದ ಕಸರತ್ತು

    ಡಿಸಿಎಂ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕ ಶ್ರೀರಾಮುಲು, ಅಮಿತ್ ಶಾ ಭೇಟಿ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ನೂತನ ಸಿಎಂ ಆಯ್ಕೆ ಮುನ್ನ ಮಾಜಿ ಸಚಿವ ಶ್ರೀರಾಮುಲು ಅಮಿತ್ ಶಾರನ್ನು ಭೇಟಿಯಾಗಿದ್ದರು. ಡಿಸಿಎಂ ಸ್ಥಾನಕ್ಕಾಗಿ ಹಲವರಿಂದ ಪೈಪೋಟಿ ನಡೆಯುತ್ತಿದೆ. ಆಕಾಂಕ್ಷಿಗಳು ಬಿಎಸ್‌ವೈ ಹಾಗೂ ದೆಹಲಿ ವರಿಷ್ಠರನ್ನ ಭೇಟಿಯಾಗುತ್ತಿದ್ದಾರೆ. ಬಳ್ಳಾರಿಯಲ್ಲಿದ್ದ ಶ್ರೀರಾಮುಲು ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಿಗೆ ಬಂದರು  ಯಾರನ್ನು ಭೇಟಿಯಾಗಿಲ್ಲ.

  • 03 Aug 2021 08:43 AM (IST)

    ಶಾಸಕ ನೆಹರು ಓಲೇಕಾರಗೆ ಈ ಭಾರಿ ಸಿಗುತ್ತಾ ಸಚಿವ ಸ್ಥಾನ?

    ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ನೆಹರು ಓಲೇಕಾರಗೆ ಸಚಿವ ಸ್ಥಾನ ಕೊಡಿಸೋದಾಗಿ ಮಾಜಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಕಳೆದ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪ ಮಾತು ಕೊಟ್ಟಿದ್ದರು.  ಮಾಜಿ ಸಿಎಂ ಕೊಟ್ಟ ಮಾತು ಈಡೇರಿಸ್ತಾರೆ ಅನ್ನೋ ನಿರೀಕ್ಷೆಯಲ್ಲಿ ಶಾಸಕರಿದ್ದಾರೆ. ಸಚಿವ ಸ್ಥಾನಕ್ಕಾಗಿ ಓಲೇಕಾರ ಬೆಂಬಲಿಗರು ಜುಲೈ 31 ರಂದು ಹಾವೇರಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ನಿನ್ನೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಬೆಂಗಳೂರಿನಲ್ಲೇ ಶಾಸಕ ಕಾದು ಕುಳಿತಿದ್ದಾರೆ.

  • 03 Aug 2021 08:40 AM (IST)

    ಶಾಸಕ ಶ್ರೀಮಂತ್ ಪಾಟೀಲ್ ಸಚಿವ ಸ್ಥಾನಕ್ಕಾಗಿ ಕೊನೆಯ ಕಸರತ್ತು

    ಮರಾಠಾ ಸಮುದಾಯ ಕೋಟಾದಡಿ ಶಾಸಕ ಶ್ರೀಮಂತ್ ಪಾಟೀಲ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಬೆಳಗಾವಿ, ಚಿಕ್ಕೋಡಿ ಕ್ಷೇತ್ರದಲ್ಲಿ‌ ಮರಾಠಾ ಸಮುದಾಯದ ಮತಗಳು‌‌ ಹೆಚ್ಚಿವೆ. ಮರಾಠಾ ಸಮುದಾಯ ಕಡೆಗಣಿಸಿದರೆ ವೋಟ್ ಕಳೆದುಕೊಳ್ಳುವ ಆತಂಕವಿದೆ. ಹೀಗಾಗಿ ಮರಾಠಾ ಸಮುದಾಯದ ಶ್ರೀಮಂತ ಪಾಟೀಲ್‌‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

  • 03 Aug 2021 08:38 AM (IST)

    ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳಗೆ ಸಚಿವ ಸ್ಥಾನ ಸಾಧ್ಯತೆ

    ಬಾಗಲಕೋಟೆ ಜಿಲ್ಲೆಯ ಇಬ್ಬರು ಶಾಸಕರಾದ ಮುರುಗೇಶ್ ನಿರಾಣಿ ಮತ್ತು ಗೋವಿಂದ ಕಾರಜೋಳಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಬೊಮ್ಮಾಯಿ ಸಂಪುಟದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಾಧ್ಯತೆ ಸಿಗುವ ಸಾಧ್ಯತೆಯಿದೆ. ನಿನ್ನೆ ಮಧ್ಯಾಹ್ನ ಮುರುಗೇಶ್ ನಿರಾಣಿ ಬೆಂಗಳೂರಿಗೆ ತೆರಳಿದ್ದಾರೆ. ಗೋವಿಂದ ಕಾರಜೋಳಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು, ಈ ಬಗ್ಗೆ ಗೋವಿಂದ ಕಾರಜೋಳ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    no leakage in KRS Dam all mining activities around the dam stopped says mining minister murugesh nirani

    ಮುರುಗೇಶ್ ನಿರಾಣಿ

    GOVINDA KARAJOLA

    ಗೋವಿಂದ ಕಾರಜೋಳ

  • 03 Aug 2021 08:33 AM (IST)

    ಇಂದು ಬೆಂಗಳೂರಿಗೆ ವಾಪಸ್ ಆಗಲಿರುವ ಸಿಎಂ ಬೊಮ್ಮಾಯಿ

    ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮಧ್ಯಾಹ್ನ 2 ಗಂಟೆ ಬಳಿಕ ಬೆಂಗಳೂರಿಗೆ ಸಿಎಂ ಹೊರಡುತ್ತಾರೆ.

  • 03 Aug 2021 08:31 AM (IST)

    ವಲಸಿಗರು ಯಾರು ಇಲ್ಲ ಎಲ್ಲಾರು ನಮ್ಮವರೇ; ಬಸವರಾಜ ಬೊಮ್ಮಾಯಿ

    ಹೈಕಮಾಂಡ್ ಜೊತೆ ಸಂಪುಟ ರಚನೆ ಬಗ್ಗೆ ಚರ್ಚೆಯಾಗಿದೆ. ಇಂದು ಸಂಸತ್ ಭವನದಲ್ಲಿ ಮತ್ತೋಮ್ಮೆ ಚರ್ಚೆ ಮಾಡಲಾಗುತ್ತೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆ ಮಾತುಕತೆ ಮಾಡಲಾಗಿದೆ. ನಾವು ಹಲವಾರು ವಿಚಾರಗಳನ್ನ ನಡ್ಡಾಗೆ ತಿಳಿಸಲಾಗಿದೆ. ಒಂದು ಒಳ್ಳೆ ತೀರ್ಮಾನ ಮಾಡಲಾಗುತ್ತೆ ಅಂತ ನಮಗೆ ವಿಶ್ವಾಸ ಇದೆ. ಒಂದು ಪಟ್ಟಿ ಬಗ್ಗೆ ನಮ್ಮ ಮತ್ತು ನಡ್ಡಾ ನಡುವೆ ಚರ್ಚೆಯಾಗಿದೆ. ಎರಡು ಮೂರು ಪಟ್ಟಿಗಳನ್ನ ಕೊಟ್ಟಿದ್ದೇವೆ. ವಲಸಿಗರು ಯಾರು ಇಲ್ಲ ಎಲ್ಲಾರು ನಮ್ಮವರೇ. ಅವರು ಈಗ ಇಲ್ಲೇ ನೆಲಸಿದ್ದಾರೆ ಎಂದು ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ

  • 03 Aug 2021 08:25 AM (IST)

    ಸಚಿವರ ಪಟ್ಟಿ ಪ್ರಕಟಿಸಿದ ಬಳಿಕ ರಾಜ್ಯಾಧ್ಯಕ್ಷರ ಜೊತೆ ಚರ್ಚೆ

    ಸಚಿವರ ಪಟ್ಟಿ ಪ್ರಕಟಿಸಿದ ಬಳಿಕ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸುತ್ತೇವೆ. ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಪ್ರಮಾಣವಚನ ದಿನಾಂಕ ಮತ್ತು ಸಮಯ ಪ್ರಕಟಿಸುತ್ತೇವೆ. ಎಲ್ಲದಕ್ಕೂ ಸಂಜೆ ಬಳಿಕ ಉತ್ತರ ಸಿಗುತ್ತೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

  • 03 Aug 2021 08:21 AM (IST)

    ಇಂದು ಸಂಜೆ ನೂತನ ಸಚಿವರ ಪಟ್ಟಿ ಪ್ರಕಟ ಸಾಧ್ಯತೆ

    ಇಂದು ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ವರಿಷ್ಠರು ಇಂದು ಪಟ್ಟಿ ಸಚಿವರ ಪಟ್ಟಿಯನ್ನು ಪ್ರಕಟಿಸುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಯಾರು, ಎಷ್ಟು ಜನ ಸಚಿವರಾಗ್ತಾರೆಂದು ಇಂದು ತಿಳಿಯುತ್ತೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ಇಂದೇ ಅಂತಿಮ ಸಾಧ್ಯತೆಯಿದೆ. 2-3 ಪಟ್ಟಿ ಕೊಟ್ಟಿದ್ದೇವೆ. ವರಿಷ್ಠರಿಂದ ಅಂತಿಮ ತೀರ್ಮಾನ ಹೊರ ಬೀಳಲಿದೆ. ಇಂದು ಸಂಸತ್ ಕಲಾಪದ ನಂತರ ಸಭೆ ಸೇರಿ ನಿರ್ಧಾರ ಮಾಡಲಾಗುವುದು. ವರಿಷ್ಠರು ನೂತನ ಸಚಿವರ ಪಟ್ಟಿಯನ್ನು ಫೈನಲ್ ಮಾಡ್ತಾರೆ. ಬಳಿಕ ಸಂಜೆ ಸಚಿವರ ಪಟ್ಟಿ ಪ್ರಕಟಿಸ್ತಾರೆ ಎಂದು ಸಿಎಂ ತಿಳಿಸಿದ್ದಾರೆ.

  • Published On - Aug 03,2021 8:16 AM

    Follow us