AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡರೇ ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇಬ್ಬರೂ ನಾಯಕರು ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಬರೀ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ. ಅದರಲ್ಲೂ ದೇವೇಗೌಡರೇ ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದೇವೇಗೌಡರೇ ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಸಿದ್ದರಾಮಯ್ಯ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2024 | 3:07 PM

Share

ಕೋಲಾರ, ಏಪ್ರಿಲ್​ 21: ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿರುವುದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ. ದೇವೇಗೌಡರೇ (DeveGowda) ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ ಎಂದು ಸಿಎಂ ಸಿದ್ದರಾಮ್ಯಯ (Siddaramaiah) ಪ್ರಶ್ನೆ ಮಾಡಿದ್ದಾರೆ. ಜಿಲ್ಲೆಯ ಬಂಗಾರಪೇಟೆಯಲ್ಲಿ ಮಾತನಾಡಿದ ಅವರು, ಹಾಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಇಬ್ಬರೂ ನಾಯಕರು ಬರೀ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ರೈತರ ಸಾಲ ಮನ್ನಾ ಮಾಡಿದ್ದೆ: ಸಿದ್ದರಾಮಯ್ಯ 

ದೇವೇಗೌಡರು ಹೇಳುತ್ತಾರೆ ಮೋದಿ ಅಕ್ಷಯ ಪಾತ್ರೆ ನೀಡಿದ್ದಾರೆ ಅಂತಾ. ಮೋದಿ ಪ್ರಧಾನಿ ಆದ ಬಳಿಕ 124 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಮೋದಿ ಸರ್ಕಾರ 1 ರೂ. ಕೂಡ ರೈತರ ಸಾಲಮನ್ನಾ ಮಾಡಿಲ್ಲ. 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ‌ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾನು ರೈತರ ಸಾಲ ಮನ್ನಾ ಮಾಡಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ: ಯಡಿಯೂರಪ್ಪ

ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದಾಗ ನಾವು ಏನಾದರೂ ನೋಟು ಪ್ರಿಂಟ್ ಮಾಡ್ತೀವಾ ಎಂದಿದ್ದರು. ಲೋಕಸಭಾ ಚುನಾವಣೆಯಲ್ಲಿ 5 ಗ್ಯಾರಂಟಿ ನೀಡಿದ್ದೇವೆ. ರೈತರ ಬೆಳೆಗಳಿಗಾಗಿ ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ. ಬಂಡವಾಳಶಾಹಿಗಳ ಸಾಲಮನ್ನಾ ಮಾಡಿದ್ದೇ ಮೋದಿ ಸಾಧನೆ. ಮೋದಿ ಬಡವರ ಪರ ಇಲ್ಲ, ಬಂಡವಾಳಶಾಹಿಗಳ ಪರವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲು

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಈವರೆಗೂ ಹಣ ನೀಡಿಲ್ಲ. ರಾಜ್ಯದಲ್ಲಿ ಬರಗಾಲ ಇದೆ ಈವರೆಗೂ ಬರಪರಿಹಾರ ನೀಡಿಲ್ಲ. ಖುದ್ದು ನಾನೇ ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಮಾಡಿದ್ದೇನೆ. ಕೇಂದ್ರ ಸಚಿವ ಅಮಿತ್ ಶಾರನ್ನೂ ಭೇಟಿಯಾಗಿ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಇದೆ ಎಂದು ಕೇಂದ್ರ ಹೇಳುತ್ತಿದೆ ಎಂದಿದ್ದಾರೆ.

ಅನ್ನಭಾಗ್ಯ ಯೋಜನೆಗೆ ರಾಜ್ಯಕ್ಕೆ ಮೋದಿ ಅಕ್ಕಿ ಕೊಡಲಿಲ್ಲ: ಸಿಎಂ ಆರೋಪ

ಅನ್ನಭಾಗ್ಯ ಯೋಜನೆಗೆ ನರೇಂದ್ರ ಮೋದಿ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ. ಹಣ ಕೊಡ್ತೀವಿ ಅಂತಾ ಹೇಳಿದ್ರು, ಈವರೆಗೂ ಕೇಂದ್ರ ಕೊಡಲಿಲ್ಲ. ರಾಜ್ಯಸಭೆ ಸದಸ್ಯರಾಗಿರುವ ದೇವೇಗೌಡರು ಸಹ ಅಕ್ಕಿ ಕೊಡಿಸಲಿಲ್ಲ ಎಂದು ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.