ಬಳ್ಳಾರಿ, ಮೇ 07: ಮತದಾನದ (Voting) ಗೌಪ್ಯತೆ ನಿಯಮ ಉಲ್ಲಂಘನೆ ಹಿನ್ನೆಲೆ ಬಳ್ಳಾರಿ ಮಹಾನಗರ ಪಾಲಿಕೆ 10ನೇ ವಾರ್ಡ್ನ ಬಿಜೆಪಿ ಸದಸ್ಯ ಕೋನಂಕಿ ತಿಲಕ್ ವಿರುದ್ದ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದ್ದಾರೆ ಎಂದು ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್ರಿಂದ ದೂರು ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.
ಕೋನಂಕಿ ತಿಲಕ್ ಮತ ಚಲಾಯಿಸುವಾಗ ಇವಿಎಂ ಮಿಷಿನ್ ಮೇಲೆ ಕಮಲದ ಚಿನ್ನೆ ಮೇಲೆ ಬೆರಳಿಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಆ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಜೊತೆಗೆ ಬಿಜೆಪಿಯ ರಾಮುಲುಗೆ ಮತ ಹಾಕಿರುವೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಜನಪ್ರತಿನಿಧಿಯಿಂದಲೇ ನಿಯಮ ಉಲ್ಲಂಘನೆ ಮಾಡಲಾಗಿದೆ.
ವಿಜಯಪುರ: ನಗರದಲ್ಲಿ ಮತದಾನ ಮಾಡಿದ ವಿಡಿಯೋಗಳು ವೈರಲ್ ಆಗಿವೆ. ಮತದಾನ ಮಾಡುವಲ್ಲಿ ಮೊಬೈಲ್ ಒಯ್ಯದಂತೆ ಕ್ರಮ ತೆಗೆದುಕೊಂಡಿದ್ದರೂ ಘಟನೆಗಳು ನಡೆದಿವೆ. ಮತದಾನ ಮಾಡಿದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬ 69 ಸದಸ್ಯರಿಂದ ಮತದಾನ; ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ
ಗೌಪ್ಯ ಮತದಾನವನ್ನು ರಾಜಕೀಯ ಮುಖಂಡರ ಬೆಂಬಲಿಗರು ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ವೇಳೆ ಕೆಲ ಮತದಾರರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಮತದಾನ ಮಾಡಿದ ವಿಡಿಯೋವನ್ನು ವಾಟ್ಸಾಪ್ ಸ್ಟೇಟಸ್ಗೆ ಬೆಂಬಲಿಗರು ಹಾಕಿಕೊಂಡಿದ್ದಾರೆ. ಬಿಜೆಪಿಯ ಜಿಗಜಿಣಗಿಗೆ ಮತಹಾಕಿ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರಕ್ಕೆ ಅಶ್ಲೀಲವಾಗಿ ಸನ್ನೆ ಮಾಡಿದ ವಿಡಿಯೋ ಸಹ ವೈರಲ್ ಆಗಿದೆ.
ಕೊಪ್ಪಳ: ಮತಗಟ್ಟೆಯೊಳಗೆ ಮೊಬೈಲ್ ನಿಷೇಧವಿದ್ದರೂ ಕೂಡ ಮತ ಹಾಕುವುದನ್ನು ಓರ್ವ ವ್ಯಕ್ತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ತಾನು ಓಟ್ ಹಾಕಿದ್ದನ್ನು ಸ್ಟೇಟಸ್ಗೆ ಕೂಡ ಹಾಕಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಹಾಲಸಮುದ್ರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: Dharwad: ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಚುನಾವಣಾ ಸಿಬ್ಬಂದಿ: ಮತದಾರರು ಆಕ್ರೋಶ
ಬೂತ್ ನಂಬರ್ 139 ರಲ್ಲಿ ರೆಕಾರ್ಡ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.