Lok Sabha Elections: ಚುನಾವಣಾ ಅಕ್ರಮಗಳ ಸರಮಾಲೆ, ಬಿಜೆಪಿ ನಿಯೋಗದಿಂದ ಆಯೋಗಕ್ಕೆ ಮೂರು ದೂರು ಸಲ್ಲಿಕೆ

| Updated By: Ganapathi Sharma

Updated on: Apr 16, 2024 | 7:03 AM

ರಾಜ್ಯದ ವಿವಿಧೆಡೆ ಚುನಾವಣಾ ಅಕ್ರಮಗಳು ವರದಿಯಾಗುತ್ತಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಿಯೋಗ ಆಯೋಗಕ್ಕೆ ಮೂರು ದೂರುಗಳನ್ನು ನೀಡಿದೆ. ಮತ್ತೊಂದೆಡೆ, ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ದೂರು ನೀಡಿದೆ. ಧಾರವಾಡ ಜಿಲ್ಲೆಯಲ್ಲಿ 2 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. ಚುನಾವಣಾ ಅಕ್ರಮ ಸಂಬಂಧ ರಾಜ್ಯದಲ್ಲಿ ಎಲ್ಲೆಲ್ಲಿ ಏನೇನಾಯ್ತು ಎಂಬ ವಿವರ ಇಲ್ಲಿದೆ.

Lok Sabha Elections: ಚುನಾವಣಾ ಅಕ್ರಮಗಳ ಸರಮಾಲೆ, ಬಿಜೆಪಿ ನಿಯೋಗದಿಂದ ಆಯೋಗಕ್ಕೆ ಮೂರು ದೂರು ಸಲ್ಲಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್ 16: ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ (Voting) ನಡೆಯಲಿದೆ. ಇತ್ತ ನಾಯಕರು ಱಲಿ, ಸಮಾವೇಶ, ರೋಡ್​ ಶೋ ಅಂತಾ ಮತಯಾಚನೆ ಮಾಡುತ್ತಿದ್ದಾರೆ. ಮಾತಿನ ಭರದಲ್ಲಿ ಕೆಲ ನಾಯಕರು ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೆ (Election Commission) ಕಾಂಗ್ರೆಸ್, ಬಿಜೆಪಿ ಮುಖಂಡರು ದೂರು ಸಲ್ಲಿಸಿದ್ದಾರೆ. ಬಿಜೆಪಿ ಕಾನೂನು ವಿಭಾಗದ ಮುಖ್ಯಸ್ಥ ವಿವೇಕ್ ರೆಡ್ಡಿ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ಸೋಮವಾರ ಮೂರು ದೂರು ಸಲ್ಲಿಸಿದೆ.

ನೀತಿ ಸಂಹಿತೆ ಉಲ್ಲಂಘಿಸಿ ಸ್ವಾಗತ

ಭಾನುವಾರ ಬಳ್ಳಾರಿಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್​ಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿತ್ತು. ಈ ವೇಳೆ ಚುನಾವಣಾ ಆಯೋಗದ ಅನುಮತಿ ಪಡೆಯದೆ ನೀತಿಸಂಹಿತೆ ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ನಿಯೋಗ ದೂರು ನೀಡಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಸುಧಾಕರ್ ಉಲ್ಲೇಖಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ

5 ಕೆಜಿ ಅಕ್ಕಿ ಕೊಡ್ತಿದ್ದೆ ಎಂದ ಸಿಎಂ

ಕಳೆದ ಬಾರಿ 5 ಕೆಜಿ ಅಕ್ಕಿ ಕೊಡ್ತಿದ್ದೆ ಎಂದು ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಬಿಜೆಪಿ ದೂರು ನೀಡಿದೆ. ಇದು ಸುಳ್ಳು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ಸಲ್ಲಿಸಿದೆ

ಡಿ ಸುಧಾಕರ್ ವಿರುದ್ಧವೂ ದೂರು

ಸಚಿವ ಡಿ.ಸುಧಾಕರ್ ವಿರುದ್ಧವೂ ಬಿಜೆಪಿ ನಿಯೋಗ ದೂರು ನೀಡಿದೆ. ಚಿತ್ರದುರ್ಗದಲ್ಲಿ 70 ಸಾವಿರ ಲೀಡ್ ಕೊಟ್ರೆ, 25 ಕೋಟಿ ಅನುದಾನ ನೀಡುತ್ತೇನೆ ಎಂದು ಡಿ.ಸುಧಾಕರ್ ಹೇಳಿದ್ದರು. ಈ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ದೂರು ಸಲ್ಲಿಸಿದೆ.

ತೇಜಸ್ವಿ ಸೂರ್ಯ ವಿರುದ್ಧ ಹಲ್ಲೆ ಆರೋಪ: ಆಯೋಗಕ್ಕೆ ದೂರು

ಸಂಸದ ತೇಜಸ್ವಿ ಸೂರ್ಯ ಹಲ್ಲೆ ಮಾಡಿ ದರ್ಪ ತೋರಿದ್ದಾರೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದಿದ್ದ ರಾಘವೇಂದ್ರ ಕೋಪರೇಟೀವ್ ಬ್ಯಾಂಕ್ ಸಂತ್ರಸ್ತರ ಸಭೆಯಲ್ಲಿ ತೇಜಸ್ವಿ ಸೂರ್ಯ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಎಂಎಲ್​ಸಿ ಯುಬಿ ವೆಂಕಟೇಶ್​ ನೇತೃತ್ವದ ನಿಯೋಗ ದೂರು ನೀಡಿದೆ.

ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅವರು ನುಡಿದಂತೆ ನಡೆದಿದ್ದೀವೆ, 5 ಗ್ಯಾರಂಟಿ ಕೊಟ್ಟಿದ್ದೇವೆ ಎಂಬ ಕರಪತ್ರ ಹಂಚಿದ್ದರು. ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಸೌಮ್ಯಾ ರೆಡ್ಡಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 2 ಕೋಟಿ ನಗದು ಜಪ್ತಿ

ಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣ ಭಾರಿ ಸದ್ದು ಮಾಡ್ತಿದೆ. ಇದಕ್ಕೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಸೋಮವಾರ ಧಾರವಾಡ ಜಿಲ್ಲೆಯ ರಾಮನಕೊಪ್ಪ ಗ್ರಾಮದ ಮನೆಯಲ್ಲಿ 2 ಕೋಟಿಗೂ ಹೆಚ್ಚು ನಗದು ಸಿಕ್ಕಿದೆ. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 2 ಕೋಟಿಯನ್ನ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಮಹಿಳೆಯರಿಗೆ ಅಪಮಾನ ಆರೋಪ: ಎಚ್​ಡಿ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ

ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್​ಪೋಸ್ಟ್‌ನಲ್ಲಿ 16 ಲಕ್ಷದ 5 ಸಾವಿರ ಹಣ ಸೀಜ್ ಮಾಡಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಕುಡಚಿಗೆ ಹೊರಟಿದ್ದ ಕಾರಿನಲ್ಲಿ ಹಣ ಸಿಕ್ಕಿದ್ದು, ಸೂಕ್ತ ದಾಖಲೆ ಇಲ್ಲದ್ದಿಕ್ಕೆ ಜಪ್ತಿ ಮಾಡಿದ್ದಾರೆ. ಬಾಗಲಕೋಟೆಯ ನಾಯನೇಗಲಿ ಚೆಕ್​​ಪೋಸ್ಟ್​​ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 10 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಲಾಗಿದೆ. ಬಾಗಲಕೋಟೆಯಲ್ಲಿ 16 ಲಕ್ಷ ಮೌಲ್ಯದ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ