ಬೆಂಗಳೂರು, ಡಿಸೆಂಬರ್ 5: ರಾಜ್ಯದ ಬರೋಬ್ಬರಿ 60 ಕಡೆ ಮಂಗಳವಾರ ಲೋಕಾಯುಕ್ತರ ದಾಳಿ (Lokayukta Raid) ನಡೆದಿದೆ. ಸೂರ್ಯೋದಯಕ್ಕೂ ಮುನ್ನವೇ ಭ್ರಷ್ಟರ ಮನೆ ಬಾಗಿಲು ಬಡಿದ ಪೊಲೀಸರು, ಸರ್ಕಾರದ ಹಣ ನುಂಗಿದವರನ್ನು ಬಡಿದೆಬ್ಬಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಸಂಬಂಧಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಆದಾಯಕ್ಕೂ ಮೀರಿ ಆಸ್ತಿಗಳಿಸಿದ, ಭ್ರಷ್ಟಾಚಾರದಿಂದಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಮಾಡಿದ ಆರೋಪ ಕೇಳಿಬಂದ 13 ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇವತ್ತು ಲೋಕಾಯುಕ್ತ ದಾಳಿ ನಡೆದಿದೆ. 200 ಕ್ಕೂ ಹೆಚ್ಚು ಸಿಬ್ಬಂದಿ ಫೀಲ್ಡ್‌ಗೆ ಇಳಿದಿದ್ದಾರೆ. ಈ ಪೈಕಿ ಎಲ್ಲರ ಹುಬ್ಬೇರುವಂತೆ ಮಾಡಿರುವುದು ಬೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ ಚನ್ನಕೇಶವನ ಆಸ್ತಿ.
ಅಮೃತಹಳ್ಳಿಯ ಬೆಸ್ಕಾಂ ಇಇ ಚನ್ನಕೇಶವ ಮನೆಯಲ್ಲಿ 3 ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ಪತ್ತೆಯಾಗಿದೆ. ಅಲ್ಲದೆ ಮನೆಯಲ್ಲಿ 6 ಲಕ್ಷ ರೂಪಾಯಿ ನಗದು ಹಾಗೂ 1.5ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ.
ಕಣಿಮಿಣಿಕೆ ಮಿಲ್ಕ್ ಪ್ರೊಡಕ್ಷನ್ ಕೋಅಪರೇಟಿವ್ ಸೊಸೈಟಿ ಚೀಫ್ ಎಕ್ಸ್‌ಕ್ಯೂಟಿವ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿ ನಡೆಸಿದಾಗ 1.2 ಕೆಜಿ ಚಿನ್ನ, 7.5 ಕೆಜಿ ಬೆಳ್ಳಿ ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿವೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಡಿಆರ್‌ಎಫ್‌ಒ ಆಗಿರೋ ಮಾರುತಿ ಕೂಡಾ ಇವತ್ತು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಂಪ್ಲಿಯಲ್ಲಿರೋ ಇವರ ನಿವಾಸದಲ್ಲೂ ಶೋಧ ನಡೆದಿತ್ತು. ಮಾರುತಿ ಮನೆಯಲ್ಲಿ 2.50 ಲಕ್ಷ ನಗದು, 250 ಗ್ರಾಂ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, 15 ಎಕರೆ ಜಮೀನು, 6 ನಿವೇಶನದ ಪತ್ರ ಪತ್ತೆಯಾಗಿವೆ.
ಡಿಜಿಎಂ ವಿಜೆಲೆನ್ಸ್‌ನ ಇಇ ಟಿ.ಎನ್ ಸುಧಾಕರ್ ಅವರ ರಾಮನಗರದ ಸಾತನೂರು ನಿವಾಸದ ಮೇಲೂ ದಾಳಿ ಆಗಿತ್ತು. ಸಾತನೂರಿನಲ್ಲಿ ಐಷಾರಾಮಿ ಮನೆ ಹೊಂದಿರೋದು ಗೊತ್ತಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಹೆಸ್ಕಾಂನ ನಿವೃತ್ತ ಸ್ಟೋರ್ ಕೀಪರ್‌ಗೂ ದಾಳಿ ಬಿಸಿ ಮುಟ್ಟಿತ್ತು. ಮೈಸೂರಿನ ಗುರುಕುಲ ಬಡಾವಣೆ ನಿವಾಸಿ ಉಪನ್ಯಾಪಸ ಮಹದೇವಸ್ವಾಮಿ, ಚಿಕ್ಕಬಳ್ಳಾಪುರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡಗೆ ಲೋಕಾ ಶಾಕ್ ತಟ್ಟಿತ್ತು.
ಇದನ್ನೂ ಓದಿ: ಕ್ರೆಡಲ್ ಎಸ್ಇ ಐಷಾರಾಮಿ ಮನೆ ಮೇಲೆ ಲೋಕಾ ರೈಡ್: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪತ್ನಿಯ ಸಹೋದರ ಡಾಕ್ಟರ್ ಪ್ರಭುಲಿಂಗ, ಯಾದಗಿರಿ ಡಿಹೆಚ್‌ಒ ಆಗಿದ್ದು, ಅವರಿಗೂ ಲೋಕಾಯುಕ್ತ ಬಿಸಿ ತಟ್ಟಿತ್ತು. ದಾಳಿ ವೇಳೆ 300 ಗ್ರಾಂ ಚಿನ್ನಾಭರಣ, 3 ಲಕ್ಷ ಹಣ ಪತ್ತೆಯಾಗಿದೆ. ಉಳಿದಂತೆ ಬೀದರ್‌ನ ಪಶು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ HD ನಾರಾಯಣ ಸ್ವಾಮಿ ಮನೆ ಮೇಲೂ ದಾಳಿ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ