Belagavi session: ಕಲಾಪದಲ್ಲಿ ಬ್ರ್ಯಾಂಡ್ ಬೆಂಗಳೂರು ಕಲಹ, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದ ಬಿಜೆಪಿ ಸದಸ್ಯರು
ಪ್ರಶ್ನೋತ್ತರ ವೇಳೆಯಲ್ಲಿ ಬ್ರಾಂಡ್ ಬೆಂಗಳೂರು ಕುರಿತ ಪ್ರಶ್ನೆ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡುತ್ತಿದ್ದ ವೇಳೆಯೂ ಗದ್ದಲ ಉಂಟಾಯ್ತು.
ಬೆಳಗಾವಿ, ಡಿಸೆಂಬರ್ 5: ಬೆಳಗಾವಿಯ ಸುವರ್ಣ ಸೌಧದಲ್ಲಿ (Belagavi session) ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ (Winter Session) ಎರಡನೇ ದಿನದ ಕಲಾಪ ಗಲಾಟೆ, ಗದ್ದಲಕ್ಕೆ ಸಾಕ್ಷಿಯಾಗಿದೆ. ಬ್ರ್ಯಾಂಡ್ ಬೆಂಗಳೂರು ಗಲಾಟೆಯೊಂದಿಗೆ ಆರಂಭವಾದ ಕಲಾಪ ಕದನ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧದ ಕೇಸ್ವರೆಗೂ ತಲುಪಿತ್ತು. ಹಲವು ಬಾರಿ ಸದನದ ಬಾವಿಗಿಳಿದ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಹೋರಾಟ ಮಾಡಿದರು.
ವಿಧಾನಸಭಾ ಅಧಿವೇಶನದ ಎರಡನೇ ದಿನ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬಿಸಿಬಿಸಿ ಚರ್ಚೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಬಗ್ಗೆ ಶಾಂತಿನಗರ ಶಾಸಕ ಹ್ಯಾರಿಸ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಕಿಚಾಯಿಸಿದ್ದಾರೆ. ಈ ಹೇಳಿಕೆಯಿಂದ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಇತ್ತ ಪ್ರಶ್ನೋತ್ತರ ವೇಳೆಯಲ್ಲಿ ಬ್ರಾಂಡ್ ಬೆಂಗಳೂರು ಕುರಿತ ಪ್ರಶ್ನೆ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡುತ್ತಿದ್ದ ವೇಳೆಯೂ ಗದ್ದಲ ಉಂಟಾಯ್ತು.
ಸಚಿವರ ಗೈರು ಹಾಜರಿಗೆ ಬಿಜೆಪಿ ಆಕ್ಷೇಪ
ಇದಕ್ಕೂ ಮುನ್ನ ಸದನದಲ್ಲಿ ಸಚಿವರ ಗೈರು ಹಾಜರಿಗೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಏನೂ ಗಡಿಬಿಡಿ ಮಾಡಬೇಡಿ ಅಂದ್ರು. ಇದ್ದರಿಂದ ಮತ್ತಷ್ಟು ಸಿಟ್ಟಾದ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದ್ರು.
ಶೂನ್ಯ ವೇಳೆಯಲ್ಲಿ ಕೊಬ್ಬರಿ ವಿಚಾರ ಪ್ರಸ್ತಾಪ ಕೂಡಾ ಭಾರೀ ಗದ್ದಲಕ್ಕೆ ಕಾರಣವಾಯ್ತು. ಶಾಸಕ ಶಿವಲಿಂಗೇಗೌಡ ಕೊಬ್ಬರಿ ವಿಚಾರ ಪ್ರಸ್ತಾಪ ಮಾಡ್ತಿದ್ದಂತೆ ಮಧ್ಯಪ್ರವೇಶಿಸಿದ ಹೆಚ್ಡಿ ರೇವಣ್ಣ, ನಾನು ಪ್ರಸ್ತಾಪ ಮಾಡುತ್ತೇನೆ ಅಂತಾ ಸದನದ ಬಾವಿಗಿಳಿದ್ರು. ರೇವಣ್ಣಗೆ ಬೆಂಬಲಿಸಿ ಜೆಡಿಎಸ್ ಸದಸ್ಯರೂ ಸದನದ ಬಾವಿಗಿಳಿದರು.
ಇದ್ರಿಂದ ರೊಚ್ಚಿಗೆದ್ದ ಶಿವಲಿಂಗೇಗೌಡ, ನೀವು ವೈಯಕ್ತಿಕ ದ್ವೇಷ ಮಾಡುತ್ತಿದ್ದೀರಿ, ಮಾನ ಇದ್ಯಾ ನಿಮಗೆ ಅಂತಾ ಆಕ್ರೋಶ ಹೊರಹಾಕಿದ್ರು.
ಈ ವೇಳೆ ಬಸವರಾಜ ರಾಯರೆಡ್ಡಿ ತರಹ ಬಹಿಷ್ಕಾರ ಮಾಡಿ ಹೋಗಿ ಎಂದು ರೇವಣ್ಣಗೆ ಬಿಜೆಪಿ ನಾಯಕರು ಸಲಹೆ ಕೊಟ್ಟರು.
ಬಳಿಕ ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು. ಈ ವೇಳೆಯೂ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ರು.
ಇದಕ್ಕೂ ಮುನ್ನ ಹೊಸ ಮದ್ಯದಂಗಡಿ ಓಪನ್ಗೆ ಕೊಟ್ಟಿರೋ ಸಿಎಲ್-7 ವಿಚಾರ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿತು. ಕೋಲಾರ ಜಿಲ್ಲೆಯಲ್ಲಿ ಸಿಎಲ್-7 ಪರವಾನಗಿ ಕೊಟ್ಟಿರುವ ಬಗ್ಗೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನಿಸಿದ್ರು. ಇದಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರ ಕೊಡುವಾಗ, ಆಡಳಿತ ಪಕ್ಷದ ಶಾಸಕರಿಂದಲೇ ಆಕ್ಷೇಪ ವ್ಯಕ್ತವಾಯ್ತು. ಇದೇ ವೇಳೆ ಆಡಳಿತ ಮತ್ತು ವಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತೆ ಗದ್ದಲ ಆರಂಭಿಸಿದ್ರು. ಕಲಾಪ 45 ನಿಮಿಷ ತಡವಾಗಿ ಆರಂಭವಾಗಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ರು. ನಮ್ಮನ್ನು ಬೇಗ ಬರಲು ಹೇಳುತ್ತೀರಿ. ಇಲ್ಲಿ ಸಚಿವರೇ ಬರುವುದಿಲ್ಲ ಎಂದು ಆಕ್ಷೇಪ ಹೊರಹಾಕಿದ್ದಾರೆ. ಬಿಜೆಪಿ ಸದಸ್ಯರ ಆಕ್ಷೇಪ ಹಿನ್ನೆಲೆ ಸದನವನ್ನು ಮತ್ತೆ 10 ನಿಮಿಷಗಳ ಕಾಲ ಮುಂದೂಡಲಾಯ್ತು.
ಇದನ್ನೂ ಓದಿ: ಬಿಜೆಪಿ ಕಾಂಗ್ರೆಸ್ಗೆ ರೆಬೆಲ್ ಸ್ಟಾರ್ಗಳ ತಲೆನೋವು: ಸ್ವಪಕ್ಷದ ವಿರುದ್ಧವೇ ಈ ನಾಯಕರ ಆಕ್ರೋಶ!
ಮಧ್ಯಾಹ್ನದ ಬಳಿಕ ಸದನದಲ್ಲಿ ಅತಿದೊಡ್ಡ ವಾಗ್ವಾದ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ಮನೆ ತೆರವು ಪ್ರಕರಣ ಸದನಲ್ಲಿ ಪ್ರತಿಧ್ವನಿಸಿದೆ. ಅರಣ್ಯಾಧಿಕಾರಿಗಳಿಂದ ಮನೆ ತೆರವು ಪ್ರಕರಣ ಪ್ರಸ್ತಾಪಿಸಿದ ಪೂಂಜಾ, ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ರು. ಆದರೆ ಈ ವೇಳೆ ಸ್ಪೀಕರ್ ಯುಟಿ ಖಾದರ್ ಬರಗಾಲ ಚರ್ಚೆ ಆರಂಭಿಸಿದ್ರು. ಅವಕಾಶ ನೀಡದ್ದಕ್ಕೆ ಸಿಟ್ಟಿಗೆದ್ದ ಶಾಸಕ ಹರೀಶ್ ಪೂಂಜಾ ಸದನದ ಬಾವಿಗಿಳಿದ್ರು. ಬಿಜೆಪಿ ಜೆಡಿಎಸ್ ಶಾಸಕರೂ ಹರೀಶ್ ಪೂಂಜಾಗೆ ಸಾಥ್ ನೀಡಿದ್ರು. ಬಳಿಕ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ಅವಕಾಶ ನೀಡಿದ್ರು.
ಆದ್ರೆ ಈ ವೇಳೆ ಬಿಜೆಪಿ ಶಾಸಕರಾದ ಬಸನಗೌಡ ಯತ್ನಾಳ್ ಹಾಗೂ ಶಾಸಕ ಎಸ್ಟಿ ಸೋಮಶೇಖರ್ ಕೂತಲ್ಲಿಂದ ಎದ್ದೇಳಲೇ ಇಲ್ಲ. ಹೀಗೆ ಎರಡನೇ ದಿನದ ಕಲಾಪವೂ ಗಲಾಟೆ ಗದ್ದಲಕ್ಕೆ ಸಾಕ್ಷಿಯಾಯ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ