ಶಿವಮೊಗ್ಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಪೋಷಕರು, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ
ಶಿವಮೊಗ್ಗ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಾಲೇಜು ಮೆಟ್ಟಿಲಿಂದ ಜಾರಿ ಬಿದ್ದಿದ್ದಾರೆಂದು ಪ್ರಿನ್ಸಿಪಾಲ್ ಹೇಳುತ್ತಿದ್ದರೆ, ಮತ್ತೊಂದಡೆ ವಿದ್ಯಾರ್ಥಿನಿಯು ಟಾರ್ಚರ್ ಹಿನ್ನಲೆಯಲ್ಲಿ ಮೃತಪಟ್ಟಿದ್ದಾಳೆಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗ, ಡಿ.05: ಇಂದು ಬೆಳಗ್ಗೆ ಶಿವಮೊಗ್ಗ(Shivamogga) ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ(Student)ಮೇಘಶ್ರೀ(17) ಎಂಬುವವರು ಅನುಮಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ದ್ವಿತೀಯ ಪಿಯುಸಿ ವಿಜ್ಷಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮೇಘಶ್ರೀಗೆ ಇಂದು ವಾರದ ಪರೀಕ್ಷೆಗಳಿದ್ದವು. ಅದರಂತೆ ಇಂದು ಬಯಾಲಾಜಿ ವಿಷಯದ ಪರೀಕ್ಷೆಯಿತ್ತು. ಈ ನಡುವೆ ವಾಶ್ ರೂಂಗೆಂದು ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿಯು ತಲೆಗೆ ಬಲವಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾಳೆ. ಈ ಘಟನೆಯಿಂದ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವಿದ್ಯಾರ್ಥಿನಿಯ ಸಾವಿನ ಹಿಂದೆ ನೂರೆಂಟು ಅನುಮಾನ
ವಿದ್ಯಾರ್ಥಿನಿಯ ಸಾವಿನ ಹಿಂದೆ ನೂರೆಂಟು ಅನುಮಾನಗಳಿದ್ದವು. ಈ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಮತ್ತು ಎಫ್ ಎಸ್ ಎಲ್ ತಂಡವು ಎಂಟ್ರಿಕೊಟ್ಟು ಪರಿಶೀಲನೆ ನಡೆಸಿತು. ಈ ನಡುವೆ ಕಾಲೇಜಿನಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಏನಾಯಿತು ಎನ್ನುವುದೇ ಗೊತ್ತಾಗಿಲ್ಲ. ಎಲ್ಲರ ಬಾಯಿಯಲ್ಲಿ ಮೇಘಶ್ರೀ ಮೃತಪಟ್ಟಿದ್ದಾಳೆ ಎನ್ನುವ ಚರ್ಚೆ ನಡೆಯುತ್ತಿತ್ತು. ಈ ನಡುವೆ ಮೇಘಶ್ರೀ ಮೃತಪಟ್ಟಿದ್ದು ಹೇಗೆ, ಯಾಕೇ ಎನ್ನುವ ಪ್ರಶ್ನೆಗೆ ಕಾಲೇಜಿನ ಪ್ರಾಂಶುಪಾಲ ಗುರುರಾಜ್ ಚುಟುಕಾಗಿ ಸ್ಪಷ್ಟೀಕರಣ ನೀಡಿದ್ದು, ‘ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಗಾಯವಾಗಿತ್ತು. ಬಳಿಕ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಗೆ ದಾಖಲಿಸುವ ಮೊದಲೇ ವಿದ್ಯಾರ್ಥಿನಿಯು ಮೃತಪಟ್ಟಿದ್ದಳು. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ವಿದ್ಯಾರ್ಥಿನಿಯು ಸಾವು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿದ್ದರು.
ಇದನ್ನೂ ಓದಿ:ಶಾಲೆಗಳಲ್ಲಿ ಸಿಪಿಆರ್ ತರಬೇತಿಯ ತುರ್ತು ಅಗತ್ಯ: 6 ತಿಂಗಳ ಅವಧಿಯಲ್ಲಿ ಗುಜರಾತಿನಲ್ಲಿ 80% ಹೃದಯಾಘಾತ ಸಾವು
ಪೋಷಕರು, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ
ಕಾಲೇಜಿನಲ್ಲಿ ಈ ಘಟನೆ ಬಳಿಕ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಮೃತ ವಿದ್ಯಾರ್ಥಿನಿ ಪೋಷಕರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ‘ಕಾಲೇಜಿನ ಫ್ಲೆಕ್ಸ್ ಹರಿದು ಮೃತ ವಿದ್ಯಾರ್ಥಿನಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿ ಪೋಷಕರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ಮತ್ತು ಮೀಸಲು ಪೊಲೀಸ್ ಪಡೆಯ ವಾಹನ ಹಾಗೂ ದೊಡ್ಡ ಪೇಟೆ ಪೊಲೀಸರು ಎಂಟ್ರಿಕೊಟ್ಟಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚೆನ್ನಾಪುರದ ಮೇಘಶ್ರೀ ಮೃತಪಟ್ಟಿರುವ ಸುದ್ದಿ ಕೇಳಿ, ತಂದೆ ಮತ್ತು ತಾಯಿ ಆಘಾತಕ್ಕೊಳಗಾಗಿದ್ದರು. ತಂದೆ ಓಂಕಾರ್ ಕಣ್ಣೀರು ಹಾಕುತ್ತಾ ಮೃತ ಮಗಳ ಮುಖ ನೋಡಲು ಓಡೋಡಿ ಬಂದರು. ಈ ನಡುವೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸಿಬ್ಬಂದಿ ಯಾರು ಕೂಡ ಸರಿಯಾದ ಮಾಹಿತಿ ಪೋಷಕರಿಗೆ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಆಕ್ರೋಶಗೊಂಡ ಮೃತನ ತಂದೆ ಮತ್ತು ಸಂಬಂಧಿಕರು ಕಾಲೇಜ್ಗೆ ಎಂಟ್ರಿಕೊಟ್ಟರು. ಕಾಲೇಜ್ ಗೇಟ್ ಹಾಕಿದ್ದು ತೆರೆಯಲಿಲ್ಲ. ಇದರಿಂದ ಪೋಷಕರು ಮತ್ತು ಸಂಬಂಧಿಕರು ಕಾಲೇಜಿನ ವಿರುದ್ದ ಘೋಷಣೆ ಹಾಕಿದರು. ಬಳಿಕ ಬಲವಂತದಿಂದ ಕಾಲೇಜ್ ಗೇಟ್ ಓಪನ್ ಮಾಡಿಸಿದರು. ಸಿಡಿದೆದ್ದ ಪೋಷಕರು ಮತ್ತು ಕುಟುಂಬಸ್ಥರು ಪ್ರಿನ್ಸಿಪಾಲ್ ಚೇಂಬರ್ ದೌಡಾಯಿಸಿದರು. ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ ಹಾಕಿದರು.
ಇದನ್ನೂ ಓದಿ:ಬೆಂಗಳೂರು: ಎರಡು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದ ಸಾವು
ಕಾಲೇಜು ನಿರ್ಲಕ್ಷ್ಯಕ್ಕೆ ಮಗಳು ಬಲಿ ಆರೋಪ
ಕಾಲೇಜಿನ ನಿರ್ಲಕ್ಷ್ಯಕ್ಕೆ ಮಗಳು ಬಲಿಯಾಗಿದ್ದಾಳೆಂದು ತಂದೆ ನೋವು ಹೊರಹಾಕಿದರು. ಸೂಕ್ತ ತನಿಖೆಯಾಗಬೇಕು. ಬಡವರು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜ್ ನಲ್ಲಿ ದಾಖಲು ಮಾಡುತ್ತಾರೆ. ಇಲ್ಲಿ ಮೃತ ಮೇಘಶ್ರೀ ಹಾಸ್ಟೇಲ್ ನಲ್ಲಿದ್ದಳು. ಹಾಸ್ಟೇಲ್ ವಾರ್ಡನ್ ಮತ್ತು ಕೆಲ ಉಪನ್ಯಾಸಕರು ಮೇಘಶ್ರೀ ಗೆ ನಿರಂತರವಾಗಿ ಟಾರ್ಚರ್ ಕೊಟ್ಟಿದ್ದಾರೆ. ಈ ಟಾರ್ಚರ್ ನಿಂದಲೇ ಮಗಳ ಸಾವು ಆಗಿದೆ. ಈ ಕುರಿತು ಪೊಲೀಸರು ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕಾಲೇಜ್ ನಲ್ಲಿ ಪೋಷಕರು ಮತ್ತು ಸಂಬಂಧಿಕರು ಧರಣಿ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಲಕ್ಷ ಲಕ್ಷ ಡೊನೇಶನ್ ಹಾಗೂ ಫೀಜ್ ಪಡೆಯುವ ಕಾಲೇಜಿನವರು ವಿದ್ಯಾರ್ಥಿ ಗಳನ್ನು ಶೋಷಣೆ ಮಾಡುತ್ತಿದ್ದಾರೆ. ಸ್ವಲ್ಪ ತಡವಾಗಿ ಬಂದ್ರೂ ಅವಾಚ್ಯವಾಗಿ ಬೈಯುವುದು, ತರಗತಿಯಿಂದ ಹೊರಗೆ ಕಳಿಸುವ ಜೊತೆಗೆ ಹಾಸ್ಟೆಲ್ ನಲ್ಲಿ ಊಟ ಕೊಡುವುದಿಲ್ಲ. ಈ ಬಗ್ಗೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮೇಘಶ್ರೀ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ. ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯು ಮೃತಪಟ್ಟಿದ್ದು ಹೇಗೆ..? ಸದ್ಯ ಮೇಘಶ್ರೀ ಸಾವು ಕುರಿತು ಪೊಲೀಸರು ತನಿಖೆ ಚುರುಕುಗೊಳಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸರ ಸಮಗ್ರ ತನಿಖೆಯಿಂದ ಮೇಘಶ್ರೀ ಸಾವಿನ ರಹಸ್ಯ ಬಯಲು ಆಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ