ಚಿಕ್ಕಮಗಳೂರಿನಲ್ಲಿ ವಕೀಲರು, ಪೊಲೀಸರ ನಡುವೆ ಗಲಾಟೆ ಪ್ರಕರಣ; ಡಿ.6 ರಿಂದ ಸಿಐಡಿ ತನಿಖೆ ಶುರು
ಹೆಲ್ಮಟ್ ವಿಚಾರಕ್ಕೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ನ.30 ರಂದು ವಕೀಲ ಪ್ರೀತಮ್ ಎಂಬುವವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ಘಟನೆಯ ಸಂಪೂರ್ಣ ವಿವರವನ್ನು ನೀಡುವಂತೆ ಸಿಐಡಿಗೆ ವಹಿಸಿತ್ತು. ಅದರಂತೆ ನಾಳೆ(ಡಿ.06) ತನಿಖೆ ಶುರುವಾಗಲಿದ್ದು, ಇಂದು ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
ಚಿಕ್ಕಮಗಳೂರು, ಡಿ.05: ವಕೀಲರು ಹಾಗೂ ಪೊಲೀಸರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ(ಡಿ.06)ಯಿಂದ ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಘಟನೆ ಕುರಿತು ಹೈಕೋರ್ಟ್(High Court) ಡಿ.12ರಂದು ಸಂಪೂರ್ಣ ವರದಿ ಸಲ್ಲಿಸುವಂತೆ ಸಿಐಡಿ ಡಿಜಿಗೆ ಸೂಚಿಸಿತ್ತು. ಈ ಹಿನ್ನಲೆ ಚಿಕ್ಕಮಗಳೂರಿಗೆ ಸಿಐಡಿ (CID) ಅಧಿಕಾರಿಗಳ ತನಿಖಾ ತಂಡ ಆಗಮಿಸಿದೆ. ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ಠಾಣೆ ಪೊಲೀಸರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ವಕೀಲರ ವಿರುದ್ಧ ಧರಣಿ ಕುರಿತು ತನಿಖೆ ನಡೆಸಲಿದೆ.
ಘಟನೆ ವಿವರ
ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ನ.30 ರಂದು ವಕೀಲ ಪ್ರೀತಮ್ ಎಂಬುವವರ ಮೇಲೆ ಪಿಎಸ್ಐ, ಒಬ್ಬ ಎಎಸ್ಐ, ಒಬ್ಬ ಹೆಡ್ ಕಾನ್ಸ್ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪೇದೆಗಳು ಸೇರಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಠಾಣೆ ಮುಂದೆ ವಕೀಲರು ಜಮಾಯಿಸಿ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್ಪಿ ವಿಕ್ರಂ, ವಿಚಾರಣೆ ನಡೆಸಿ ಪಿಎಸ್ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಜೊತೆಗೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಐಪಿಸಿ ಸೆಕ್ಷನ್ 307, 324, 506, 504ರ ಅಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಚಿಕ್ಕಮಗಳೂರು: ಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ಒಪ್ಪಿಸಿದ ರಾಜ್ಯ ಸರ್ಕಾರ
ಇನ್ನು ಈ ಘಟನೆ ತೀವ್ರ ಸ್ವರೂಪ ಪಡೆದು, ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಎಲ್ಲ ಘಟನೆಯ ನಡುವೆಯೇ ವಕೀಲರು ಠಾಣೆಯಲ್ಲಿಯೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಖಂಡಿಸಿ ಶನಿವಾರ ಮಧ್ಯರಾತ್ರಿವರೆಗೂ ನಗರದ ಹನುಮಂತಪ್ಪ ಸರ್ಕಲ್ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆಯು ನಡೆದಿದೆ.
ವಕೀಲರು ಮೇಲೂ ಕೇಸ್ ದಾಖಲು
ಈ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್, ವಕೀಲ ಪ್ರೀತಮ್ ಸೇರಿದಂತೆ 15 ವಕೀಲರ ವಿರುದ್ಧ ಸೆಕ್ಷನ್ 503, 406, 353, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆ ಈ ಎಲ್ಲದರ ಸಂಪೂರ್ಣ ವಿವರ ನೀಡುವಂತೆ ಹೈಕೋಟ್ ಸಿಐಡಿಗೆ ಸೂಚಿಸಿತ್ತು. ಅದರಂತೆ ಇಂದು ಚಿಕ್ಕಮಗಳೂರಿಗೆ ಸಿಐಡಿ ತಂಡ ಆಗಮಿಸಿದ್ದು, ನಾಳೆಯಿಂದ ತನಿಖೆ ಶುರು ಮಾಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ