ನಿರ್ಮಾಣ ಹಂತದ ಮನೆ ತೆರವು ಕಾರ್ಯಾಚರಣೆಗೆ ಆಕ್ರೋಶ, ಅಣ್ಣನ ವಿರುದ್ಧವೇ ಪ್ರತಿಭಟನಾ ರ್ಯಾಲಿ ನಡೆಸಿದ ಮಧು ಬಂಗಾರಪ್ಪ

ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಸಹೋದರರ ನಡುವೆ ಫೈಟ್ ಶುರುವಾಗಿದೆ. ನಿರ್ಮಾಣ ಹಂತದ ಮನೆಯೊಂದನ್ನು ತೆರವುಗೊಳಿಸೋ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಬೀದಿಕಾಳಗ ಶುರುವಾಗಿದೆ. ಅಣ್ಣನ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಮಾಜಿ ಶಾಸಕ ಮಧು ಬಂಗಾರಪ್ಪ, ತೀವ್ರ ವಾಗ್ದಾಳಿ ನಡೆಸಿದ್ರು.

ನಿರ್ಮಾಣ ಹಂತದ ಮನೆ ತೆರವು ಕಾರ್ಯಾಚರಣೆಗೆ ಆಕ್ರೋಶ, ಅಣ್ಣನ ವಿರುದ್ಧವೇ ಪ್ರತಿಭಟನಾ ರ್ಯಾಲಿ ನಡೆಸಿದ ಮಧು ಬಂಗಾರಪ್ಪ
ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರರ ನಡುವೆ ಜಟಾಪಟಿ
Follow us
TV9 Web
| Updated By: ಆಯೇಷಾ ಬಾನು

Updated on:Jul 20, 2021 | 11:07 AM

ಶಿವಮೊಗ್ಗ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರರ ನಡುವೆ ಮತ್ತೆ ಜಗಳ ಶುರುವಾಗಿದೆ. ಕುಮಾರ್ ಬಂಗಾರಪ್ಪ ವೈಖರಿ ವಿರುದ್ಧ ಮಧು ಬಂಗಾರಪ್ಪ ಸಿಡಿಮಿಡಿಗೊಂಡಿದ್ದಾರೆ. ಸಹೋದರನ ವಿರುದ್ಧವೇ ಮಧು ಬಂಗಾರಪ್ಪ ವಾಗ್ದಾಳಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಿರ್ಮಾಣ ಹಂತದ ಮನೆಯೊಂದು ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪರ ನಡುವಿನ ಫೈಟ್ಗೆ ಹೊಸ ವೇದಿಕೆಯಾಗಿದೆ.

ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆ ದಲಿತ ಆಕಾಶ್ ನಾಯ್ಕ್ ಎಂಬವರಿಗೆ ಸೇರಿದ್ದು. ಮೂರು ನಾಲ್ಕು ದಿನಗಳ ಹಿಂದೆ ಮನೆ ತೆರವು ಕಾರ್ಯಾಚರಣೆ ನಡೆದಿತ್ತು. ಶಾಸಕ ಕುಮಾರ್ ಬಂಗಾರಪ್ಪ ವೈಯಕ್ತಿಕ ದ್ವೇಷದಿಂದ ಈ ಮನೆಯನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ತೆರವು ಗೊಳಿಸಿದ್ದಾರೆಂದು ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ. ಸೊರಬ ಪುರಸಭೆ ಹಾಗೂ ತಾಲೂಕು ಆಡಳಿತ ಶಾಸಕರ ಸೂಚನೆಯಂತೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆ ಧ್ವಂಸ ಮಾಡ್ತಿದ್ದಾರೆ. ಇದ್ರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಂತಾ ಮನೆ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಇನ್ನು ಇದೇ ಏರಿಯಾದಲ್ಲಿ ಹಲವರು ಅಕ್ರಮ ಸಕ್ರಮ ಯೋಜನೆಯಡಿ ಮನೆಗಳನ್ನು ಕಟ್ಟಿಸಿದ್ದಾರೆ. ಆದ್ರೆ ಅದನ್ನೆಲ್ಲಾ ಬಿಟ್ಟು ಈ ಮನೆಯನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಅಂತಾ ಕುಟುಂಬಸ್ಥರು ಪ್ರಶ್ನಿಸ್ತಿದ್ದಾರೆ.

ಆದ್ರೆ ಕಟ್ಟಡ ಅನಧಿಕೃತವಾಗಿರೋದ್ರಿಂದ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದೇವೆ ಅನ್ನೋದು ತಹಶೀಲ್ದಾರ್ ಶಿವಾನಂದ್ ಮಾತು.

ಇನ್ನು ಈ ಮನೆ ತೆರವು ಕಾರ್ಯಾಚರಣೆ ಹಿಂದೆ ಅಣ್ಣ ಕುಮಾರ್ ಬಂಗಾರಪ್ಪ ಕೈವಾಡವಿದೆ ಅಂತಾ ಮಧು ಬಂಗಾರಪ್ಪ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಧೋರಣೆ ಖಂಡಿಸಿ ಖುದ್ದು ಮಧು ಬಂಗಾರಪ್ಪ ಸೊರಬ ಪಟ್ಟಣದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ರು.

ಸೊರಬ ಶಾಸಕ ಕುಮಾರ್ ಬಂಗಾರಪ್ಪ ಖುದ್ದು ಅಕ್ರಮ ಸಕ್ರಮ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಶಾಸಕರಿಂದ ಆಡಳಿತ ಯಂತ್ರ ದುರ್ಬಳಕೆ ಆಗಿದೆ. ಕಟ್ಟಡ ನಿರ್ಮಿಸಿರೋ ಜಾಗದ ಬಗ್ಗೆ ಜುಲೈ 23ರಂದು ಕೋರ್ಟ್ನಲ್ಲಿ ವಿಚಾರಣೆ ಇದೆ. ಆದ್ರೆ ಕೋರ್ಟ್ ಆದೇಶ ಬರೋ ಮುನ್ನವೇ ಯಾವುದೇ ನೋಟಿಸ್ ನೀಡದೆ ಮನೆ ಒಡೆದಿರೋದು ತಪ್ಪು ಅಂದಿದ್ದಾರೆ.

ಒಟ್ನಲ್ಲಿ ಅಕ್ರಮ ಸಕ್ರಮ ಮನೆ ತೆರವು ವಿವಾದ ಅಣ್ಣ-ತಮ್ಮನ ಹೊಸ ರಾಜಕೀಯ ಫೈಟ್ಗೆ ರಿಂಗ್ ರೆಡಿ ಮಾಡಿಟ್ಟಿದೆ. ಅಣ್ಣನ ವಿರುದ್ಧವೇ ಬೀದಿಗಿಳಿದ ಮಧು ಬಂಗಾರಪ್ಪ ತಿರುಗಿಬಿದ್ದು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ತಮ್ಮ ಮಾಡಿರೋ ಆರೋಪಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಏನ್ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದೇ ಸದ್ಯದ ಕುತೂಹಲ.

ಇದನ್ನೂ ಓದಿ: ಮಧು ಬಂಗಾರಪ್ಪ ಕಾಂಗ್ರೆಸ್​ ತೆಕ್ಕೆಗೆ, ಮುಂದಿನ ಚುನಾವಣೆಯಲ್ಲಿ ಅಣ್ಣ ಕುಮಾರ್​ಗೆ ​ಸವಾಲು ನೀಡಲು ತಯಾರು

Published On - 8:40 am, Tue, 20 July 21