ಬೆಳಗಾವಿಯಲ್ಲಿ ಇನ್ನೂ ಆರದ ನಾಡದ್ರೋಹಿ ಘೋಷಣೆ ಕಿಚ್ಚು, ಮಹಾರಾಷ್ಟ್ರ ಸಚಿವನಿಂದ ಗುಪ್ತ್ ಗುಪ್ತ್ ಸಭೆ

ಬೆಳಗಾವಿಯಲ್ಲಿ ಇನ್ನೂ ಆರದ ನಾಡದ್ರೋಹಿ ಘೋಷಣೆ ಕಿಚ್ಚು, ಮಹಾರಾಷ್ಟ್ರ ಸಚಿವನಿಂದ ಗುಪ್ತ್ ಗುಪ್ತ್ ಸಭೆ

ಬೆಳಗಾವಿ: ಕುಂದಾನಗರಿ ಬೆಳಗಾವಿ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾವಾಗ ಏನು ಬೇಕಾದರೂ ಆಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಹೀಗಿರುವಾಗಲೇ ನಮ್ಮ ನೆಲಕ್ಕೆ ಬಂದೂ ನಾಡದ್ರೋಹಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಪುಂಡರಿಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ.

ಕುಂದಾನಗರಿ ಈಗ ಕೊತ ಕೊತ ಅಂತಿದೆ. ಎಂಇಎಸ್ ಪುಂಡರ ಹಾವಳಿಯಿಂದ ಹೊತ್ತಿ ಉರಿಯುತ್ತಿದೆ. ಎಲ್ಲೆಲ್ಲೂ ಆಕ್ರೋಶ ಭುಗಿಲೆದ್ದಿದೆ.. ಕಿಚ್ಚು ಜ್ವಾಲೆಯಂತೆ ಸ್ಫೋಟಗೊಂಡಿದೆ. ಇಂಥಾ ಹೊತ್ತಲ್ಲೇ ನಾಡದ್ರೋಹಿ ಘೋಷಣೆ ಕೂಗಿದ್ದ ಮಹಾರಾಷ್ಟ್ರ ಸಚಿವನೊಬ್ಬ ಬೆಳಗಾವಿಯಲ್ಲಿದ್ದೇ ನರಿಬುದ್ಧಿ ತೋರಿಸಿದ್ದಾನೆ.

ನಾಡದ್ರೋಹಿ ಘೋಷಣೆ ಕೂಗಿದ್ದ ಸಚಿವನ ಕಳ್ಳಾಟ..!
ಗಡಿವಿವಾದ ಭುಗಿಲೆದ್ದಿರುವಾಗಲೇ ಮಹಾರಾಷ್ಟ್ರ ಸಚಿವ ಹಸನ್ ಮುಶ್ರಿಪ್ ಬೆಳಗಾವಿಗೆ ಕಾಲಿಟ್ಟಿದ್ದಾರೆ. ಇದೇ ಹಸನ್ ಮುಶ್ರಿಪ್ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವಾಗ ನಾಡದ್ರೋಹಿ ಘೋಷಣೆ ಕೂಗಿದ್ರು. ಜೈ ಸೀಮಾಭಾಗ್ ಸಂಯುಕ್ತ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ರು.

ಆದ್ರೀಗ ಇದೇ ಮುಶ್ರಿಪ್, ಬೆಳಗಾವಿಯಲ್ಲಿ ಗುಪ್ತಸಭೆ ನಡೆಸಿದ್ದಾರೆ. ಕೊಲ್ಹಾಪುರ ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಜಿ.ಪಂ.ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ಇದಕ್ಕೂ ಮೊದಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದ ಮುಶ್ರಿಪ್​ಗೆ ಶಿವಸೇನೆ ಮುಖಂಡರು ಅದ್ಧೂರಿ ಸ್ವಾಗತ ಕೋರಿದ್ರು. ಇದು ಕೂಡ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ನಾಡದ್ರೋಹಿಗಳಿಗೆ ಬೆಳಗಾವಿ ಪ್ರವೇಶಿಸದಂತೆ ನಿಷೇಧ ಹೇರಲು ಒತ್ತಾಯಿಸಿದ್ದಾರೆ.

ಶರದ್ ಪವಾರ್ ಕರೆತರಲು ಎಂಇಎಸ್ ತಯಾರಿ:
ಇನ್ನು, ಬೆಳಗ್ಗೆ ಎಂಇಎಸ್ ಮುಖಂಡರ ಜತೆಗೆ ಹಸನ್ ಮಾತುಕತೆ ಮಾಡಲಿದ್ದಾರೆ. ಬಳಿಕ ಎಲ್ಲ ಜಿ.ಪಂ ಸದಸ್ಯರನ್ನ ಕರೆದುಕೊಂಡು ಕೊಲ್ಹಾಪುರಕ್ಕೆ ತೆರಳಲಿದ್ದಾರೆ ಎನ್ನಲಾಗ್ತಿದೆ. ಮತ್ತೊಂದ್ಕಡೆ, ಜನವರಿ 22 ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್​ರನ್ನ ಬೆಳಗಾವಿಗೆ ಕರೆದುಕೊಂಡು ಬರಲು ಎಂಇಎಸ್ ಪ್ಲ್ಯಾನ್ ಮಾಡಿದೆ. ಎಂಇಎಸ್ ಮುಖಂಡರು, ಈ ಕುರಿತು ಕೂಡ ಚರ್ಚೆ ನಡೆಸಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಸಿ ಭೇಟಿಯಾಗಿ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಈ ವೇಳೆ, ಶರದ್​ರನ್ನು ಕರೆದುಕೊಂಡು ಸಭೆ ಮಾಡುತ್ತಿದ್ದೇವೆ. ಅನುಮತಿ ನೀಡಿ ಅಂತಾ ಮನವಿ ಸಲ್ಲಿಸಲಿದ್ದಾರೆ..

ಇನ್ನು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಂಡು ನಾಡದ್ರೋಹಿಗಳಿಗೆ ನಿರ್ಬಂಧ ಹೇರಬೇಕು ಅಂತಾ ಕನ್ನಡಿಗರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮತ್ತೆ ಕುಂದಾನಗರಿಯಲ್ಲಿ ಎಂಇಎಸ್ ಕ್ಯಾತೆ ತೆಗೆದು ಕನ್ನಡಿಗರ ನೆಮ್ಮದಿ ಹಾಳು ಮಾಡುವ ಯತ್ನ ಮಾಡುತ್ತೆ. ಇತ್ತ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಅಂತಾ ಆಗ್ರಹಿಸಿದ್ದಾರೆ.

Click on your DTH Provider to Add TV9 Kannada