ಕಾರವಾರ: ಇಂದು ಶಿವರಾತ್ರಿ ಅಂಗವಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇಗುಲದಲ್ಲಿ ವಿಜೃಂಭಣೆಯಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಳ್ಳಂಬೆಳಗ್ಗೆ ಜನರು ಎದ್ದು, ಸ್ನಾನ ಮುಗಿಸಿ ಮಡಿಯಲ್ಲಿ ದೇವಾಲಯಕ್ಕೆ ಆಗಮಿಸಿದ್ದಾರೆ. ಸರದಿ ಸಾಲಿನಲ್ಲಿ ಭಕ್ತರಿಗೆ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರೆಲ್ಲ ಆತ್ಮ ಲಿಂಗ ಸ್ಪರ್ಷ ಪೂಜೆ ಮಾಡಿ ಶಿವನ ಆಶೀರ್ವಾದ ಪಡೆದಿದ್ದಾರೆ. ಶಿವನಾಮ ಪಠಿಸುತ್ತಾ ಭಕ್ತಿಯಿಂದ ಶಿವನ ಆರಾಧನೆಯಲ್ಲಿ ತೊಡಗಿದ್ದಾರೆ. ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆತ್ಮಲಿಂಗ ಪೂಜೆಗೆ ಜನ ಸಾಗರವೇ ಹರಿದು ಬಂದಿದೆ.
ಚಾಮರಾಜನಗರದ ಮಲೆಮಹದೇಶ್ವರ ದೇಗುಲದಲ್ಲಿ ಶಿವರಾತ್ರಿಯ ಸಂಭ್ರಮ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾದಪ್ಪನಿಗೆ ಹಣ್ಣುಗಳಿಂದ ಶೃಂಗಾರ ಮಾಡಲಾಗಿದೆ. ಶಿವನಿಗೆ ಸೇಬು, ದ್ರಾಕ್ಷಿ ಹಣ್ಣುಗಳಿಂದ ಶೃಂಗಾರ ಮಾಡಲಾಗಿದೆ. ವಿವಿಧ ಬಗೆಯ ತರಕಾರಿಗಳಿಂದಲೂ ಮಾದಪ್ಪನಿಗೆ ಅಲಂಕಾರ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾದಪ್ಪನಿಗೆ ವಿಶೇಷ ಪೂಜೆ ಕೈಗೊಳ್ಳಲಾಗಿದೆ.
ಗೋಕರ್ಣದಲ್ಲಿ ಶಿವನಿಗೆ ವಿಶೇಷ ಪೂಜೆ
ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಭಕ್ತರಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಕೇವಲ ಮಲೆ ಮಹದೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬರುವ ಪ್ರತಿಯೊಬ್ಬರೂ ಗುರುತಿನ ಚೀಟಿ ತೋರಿಸುವುದು ಕಡ್ಡಾಯ ಮಾಡಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಉತ್ಸವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಇಂದು ಸಂಜೆ 6 ಗಂಟೆಯಿಂದ ಮಹಾ ಶಿವರಾತ್ರಿ ಉತ್ಸವ ನಡೆಯಲಿದೆ. ಇಂದು ಸಂಜೆಯಿಂದ ಪ್ರಾರಂಭಗೊಂಡ ಉತ್ಸವ ನಾಳೆ ಮುಂಜಾನೆಯವರೆಗೂ ನಡೆಯಲಿದೆ. ಪೂಜಾ ಪ್ರಯುಕ್ತ ಶ್ರೀ ಮಂಜುನಾಥಸ್ವಾಮಿಗೆ ವಿಶೇಷ ಪೂಜೆ, ಅರ್ಚನೆ ಜೊತೆಗೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಸತ್ಸಂಗ, ಶಿವ ಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಕೈಗೊಳ್ಳಲಾಗುತ್ತದೆ.
ಕಲಬುರಗಿಯಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ ನಗರದ ಹೊರವಲಯದಲ್ಲಿರುವ ರಾಮತೀರ್ಥ ದೇವಸ್ಥಾನದಲ್ಲಿ ಅಪಾರ ಭಕ್ತರು ಆಗಮಿಸುತ್ತಿದ್ದಾರೆ. ಶಿವನ ಧ್ಯಾನದಲ್ಲಿ ಭಕ್ತರು ತೊಡಗಿಕೊಂಡಿದ್ದಾರೆ.
ಶಿವಮೊಗ್ಗದ ರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ರಾಜ್ಯದೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮಾಚರಣೆ ಶಿವಮೊಗ್ಗದ ಹರಕೆರೆಯಲ್ಲಿರುವ ರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ತುಂಗಾ ನದಿ ತಟದಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಸರದಿಯಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಸಿಲಿಕಾನ್ ಸಿಟಿಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಹೂವು, ಹಣ್ಣು, ಬಿಲ್ವಪತ್ರೆ, ಪೂಜಾ ಸಾಮಾಗ್ರಿ ಖರೀದಿಗಾಗಿ ಪಟ್ಟಣದ ಮಂದಿ ಮುಗಿಬಿದ್ದಿದ್ದರು. ಕೆಆರ್ ಮಾರ್ಕೆಟ್, ಗಾಂಧಿ ಬಜಾರ್, ಮಲ್ಲೇಶ್ವರಂನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಕೆ.ಆರ್ ಮಾರ್ಕೆಟ್ನಲ್ಲಿ ಪೂಜಾ ಸಾಮಗ್ರಿಗಳು ಮಾರಾಟವಾಗುತ್ತಿದ್ದು, ಒಂದು ಮಾರು ಸೇವಂತಿಗೆ ಹೂವು 120 ರಿಂದ 150 ರೂಪಾಯಿ, ಒಂದು ಮಾರು ಮಲ್ಲಿಗೆ 120 ರೂಪಾಯಿ, ಒಂದು ಮಾರು ಕನಕಾಂಬರ 80 ರೂಪಾಯಿ ಹಾಗೂ ಬಿಡಿ ಹೂವು ಕೆಜಿಗೆ 150 ರಿಂದ 200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?
ಇದನ್ನೂ ಓದಿ: ಮಹಾಶಿವರಾತ್ರಿ ಹಿನ್ನೆಲೆ; ಸಿಲಿಕಾನ್ ಸಿಟಿಯಲ್ಲಿ ಜೋರಾದ ಖರೀದಿ ಭರಾಟೆ