ಮಂಡ್ಯ, ಫೆಬ್ರವರಿ 1: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಆರಂಭವಾದ ಧ್ವಜ ವಿವಾದದ (Flag Controversy) ಕಿಚ್ಚು ಇನ್ನೂ ತಣ್ಣಗಾಗಿಲ್ಲ. ಆದರೆ, ಈಗ ಆ ವಿವಾದ ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪಿಸುತ್ತಿದೆ. ಹಸಿರು ಬಾವುಟ ಇರುವ ಫೋಟೋಗಳನ್ನು ಪೋಸ್ಟ್ ಮಾಡಿ ಜನ ಹಾಗೂ ಬಿಜೆಪಿ ನಾಯಕರು ಇದನ್ನು ಯಾಕೆ ಬಿಟ್ಟಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಕೆರಗೋಡು (Keregodu) ಗ್ರಾಮದಲ್ಲಿ ಸದ್ಯ 200ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದು, ನಿಷೇಧಾಜ್ಞೆ ಮುಂದುವರೆದಿದೆ. ಅತ್ತ ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಬುಧವಾರ ಭೇಟಿ ನೀಡಿ, ಧೈರ್ಯ ಹೇಳಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರು ಕರೆದೊಯ್ದಿದ್ದ 9ನೇ ತರಗತಿ ಬಾಲಕನ ಮನೆಗೂ ಅವರು ತೆರಳಿದ್ದಾರೆ. ಈ ವೇಳೆ, ಅವರನ್ನ ತಡೆದ ಪೋಷಕರು ಯಾರೂ ಬರೋದು ಬೇಡ. ಯಾವ ಧ್ವಜವಾದ್ರೂ ಹಾರಾಡ್ಲಿ ನಮಗೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 9 ರಂದು ನಡೆದ ಘಟನೆ ಖಂಡಿಸಿ ಬಜರಂಗದಳ ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟಿದೆ. ನಾಳೆಯಿಂದ ಮನೆ ಮನೆ ಮೇಲೆ ಹನುಮ ಹಾಗೂ ಕೇಸರಿ ಧ್ವಜ ಹಾರಾಟ ಅಭಿಯಾನಕ್ಕೂ ತೀರ್ಮಾನಿಸಿದೆ. ಮತ್ತೊಂದೆಡೆ, ಈ ಘಟನೆ ಖಂಡಿಸಿ ಫೆಬ್ರವರಿ 7 ರಂದು ಸಮಾನ ಮನಸ್ಕ ವೇದಿಕೆ ಮಂಡ್ಯ ನಗರ ಬಂದ್ಗೆ ಕರೆಕೊಟ್ಟಿದೆ.
ಮಂಡ್ಯದಲ್ಲಿ ಕಿಚ್ಚು ಹಚ್ಚಿದ್ದ ಧ್ವಜ ದಂಗಲ್ ಚಿಕ್ಕಬಳ್ಳಾಪುರ ಜಿಲ್ಲೆಗೂ ಕಾಲಿಟ್ಟಿತೇ ಎಂಬ ಅನುಮಾನ ಮೂಡಿದೆ. ಏಕೆಂದರೆ, ಚಿಕ್ಕಬಳ್ಳಾಪುರ ನಗರದ ದೊಡ್ಡಭಜನೆಯಲ್ಲಿ ಮನೆ ಕಾಂಪೌಂಡ್‌ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಿಸಲಾಗಿದೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಹಸಿರು ಬಾವುಟ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಕೆರಗೋಡುವಿನ ಎಲ್ಲ ಮನೆಗಳ ಮೇಲೆ ಹನುಮ ಧ್ವಜ ಹಾರುತ್ತೆ, ಸರ್ಕಾರಕ್ಕೆ ತಾಕತ್ತಿದ್ದರೆ ತಡೆಯಲಿ: ಮಂಡ್ಯ ಬಿಜೆಪಿ ಘಟಕ ಅಧ್ಯಕ್ಷ
ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಪೊಲೀಸರು, ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಹಸಿರು ಬಾವುಟ ತೆರವುಗೊಳಿಸುವಂತೆ ಮನೆ ಮಾಲೀಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಕೆರಗೋಡಿನ ಧ್ವಜ ವಿವಾದದ ಬೆನ್ನಲ್ಲೇ ಕೋಲಾರದಲ್ಲೂ ವಿವಾದದ ಕಿಡಿ ಹೊತ್ತಿದೆ. ಕೋಲಾರದ ಕ್ಲಾಕ್ ಟವರ್ ಮೇಲೆ ಹಾಕಲಾಗಿರುವ ಅರ್ಧ ಚಂದ್ರಾಕೃತಿ ಹಾಗೂ ನಕ್ಷತ್ರ ಆಕೃತಿ ಚಿಹ್ನೆ ತೆರವಿಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿಯೂ ಧ್ವಜ ವಿವಾದ ಸದ್ದು ಮಾಡುತ್ತಿದೆ. ಹಸಿರು ಬಾವುಟ ಇರುವ ಫೋಟೋ ಟ್ವೀಟ್ ಮಾಡಿದ ಸಂಸದ ಪ್ರತಾಪ್ ಸಿಂಹ, ಒಂದು ಬಾವುಟ ತೆಗೆದು ಇನ್ನೊಂದನ್ನೇಕೆ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮೈಸೂರಿನ ಕೈಲಾಸಪುರಂನ ಅಂಬೇಡ್ಕರ್ ಪಾರ್ಕ್ ಬಳಿ ಧ್ವಜ ಇರೋದು ಕಾಣುತ್ತಿಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ