ಮಂಡ್ಯ ಬೆಲ್ಲ ಸಂಸ್ಕರಣಾ ಘಟಕಗಳ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ ಸುಮಲತಾ ಅಂಬರೀಶ್

| Updated By: ganapathi bhat

Updated on: Apr 06, 2022 | 6:57 PM

ಲೋಕಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಬೆಲ್ಲ ತಯಾರಿಕೆ ಘಟಕಗಳ ಪರವಾಗಿ ಅಹವಾಲು ಸಲ್ಲಿಸಿದರು. ನಿಜವಾದ ಬೆಲ್ಲ ಹಾಗೂ ಬ್ಲೀಚಿಂಗ್ ಅಥವಾ ರಾಸಾಯನಿಕಗಳನ್ನು ಹಾಕಿ ಮಾಡಿರುವ ಬೆಲ್ಲದ ವ್ಯತ್ಯಾಸಗಳನ್ನು ಕೂಡ ಜನರಿಗೆ ಮನವರಿಕೆ ಮಾಡಬೇಕು ಎಂದು ಕೇಳಿಕೊಂಡರು.

ಮಂಡ್ಯ ಬೆಲ್ಲ ಸಂಸ್ಕರಣಾ ಘಟಕಗಳ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್ (ಸಂಗ್ರಹ ಚಿತ್ರ)
Follow us on

ದೆಹಲಿ: ಮೊದಲು 6,000ದಷ್ಟು ಇದ್ದ ಬೆಲ್ಲ ಸಂಸ್ಕರಣಾ ಘಟಕಗಳು ಈಗ 600ಕ್ಕೆ ಇಳಿಕೆಯಾಗಿದೆ. ಆರ್ಥಿಕ ನಷ್ಟದಿಂದಾಗಿ ಸಾವಯುವ ಬೆಲ್ಲ ಸಂಸ್ಕರಣೆ ಕಡಿಮೆ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಲ್ಲ ಸಂಸ್ಕರಣೆ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಉತ್ತಮ ಗುಣಮಟ್ಟದ ನೈಜ ಬೆಲ್ಲ ತಯಾರಿಕೆಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಸರ್ಕಾರಕ್ಕೆ ಮನವಿ ಮಾಡಿದರು. 

ಲೋಕಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಬೆಲ್ಲ ತಯಾರಿಕೆ ಘಟಕಗಳ ಪರವಾಗಿ ಅಹವಾಲು ಸಲ್ಲಿಸಿದರು. ನಿಜವಾದ ಬೆಲ್ಲ ಹಾಗೂ ಬ್ಲೀಚಿಂಗ್ ಅಥವಾ ರಾಸಾಯನಿಕಗಳನ್ನು ಹಾಕಿ ಮಾಡಿರುವ ಬೆಲ್ಲದ ವ್ಯತ್ಯಾಸಗಳನ್ನು ಕೂಡ ಜನರಿಗೆ ಮನವರಿಕೆ ಮಾಡಬೇಕು ಎಂದು ಕೇಳಿಕೊಂಡರು.

ಕೊರೊನಾ ಕಾಲದಲ್ಲಿ ನಾವೆಲ್ಲರೂ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೆವು. ಆದರೆ, ಆ ಬಳಿಕ ಎಲ್ಲರಿಗೂ ಭರವಸೆ ತುಂಬಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆ. ಅದು ಜನರ ಬದುಕಲ್ಲಿ ವಿಶ್ವಾಸ ನೀಡಿತ್ತು. ಆ ಯೋಜನೆಯ ಅಡಿಯಲ್ಲಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನೂ ಜಾರಿಗೆ ತರಲಾಯಿತು. ಅದರಂತೆ ಮಂಡ್ಯ ಕಬ್ಬು ಆ ಮೂಲಕ ಬೆಲ್ಲಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು ಎಂದು ಸುಮಲತಾ ತಿಳಿಸಿದರು.

ದೇಶ ವಿದೇಶದಲ್ಲಿ ಮಂಡ್ಯ ಜಿಲ್ಲೆ ಶುದ್ಧ ಹಾಗೂ ಸಾವಯುವ ಬೆಲ್ಲಕ್ಕೆ ಹೆಸರಾಗಿದೆ. ಆದರೆ, ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ಮೊದಲು 6,000ದಷ್ಟಿದ್ದ ಬೆಲ್ಲ ಸಂಸ್ಕರಣಾ ಘಟಕಗಳು ಈಗ 600ರಷ್ಟಾಗಿದೆ. ಆರ್ಥಿಕ ಕಷ್ಟದಿಂದ ಈ ಪರಿಸ್ಥಿತಿ ಎದುರಾಗಿದೆ. ಆತ್ಮನಿರ್ಭರ ಭಾರತದ ಅಡಿಯಲ್ಲಿ ತಾಂತ್ರಿಕ, ಆರ್ಥಿಕ ಸಹಾಯ ನೀಡುವುದಾಗಿ ಸರ್ಕಾರದ ಭರವಸೆ ಇದೆ ಎಂದು ಹೇಳಿದರು.

ಅನಾರೋಗ್ಯಕರ, ಕಲಬೆರಕೆ ಮಾಡಿದ ಬೆಲ್ಲವನ್ನು ಜನರು ಬಳಕೆ ಮಾಡುತ್ತಿದ್ದಾರೆ. ಸಾವಯುವ ಬೆಲ್ಲ ಸಾಮಾನ್ಯ ಕಡು ಕಂದು ಬಣ್ಣದಲ್ಲಿರುತ್ತದೆ. ಆದರೆ, ಜನರು ರಾಸಾಯನಿಕಗಳನ್ನು ಬಳಸಿದ ಬಿಳಿ ಬೆಲ್ಲವನ್ನು ಕೊಳ್ಳುವ ಮನಮಾಡುತ್ತಿದ್ದಾರೆ. ಇದರ ವಿರುದ್ಧ ಜನಜಾಗೃತಿ ಉಂಟಾಗಬೇಕು. ಜನರು ಸಾವಯುವ ಬೆಲ್ಲ ಬಳಸುವಂತಾಗಲು ಸರ್ಕಾರವೂ ಸಹಕಾರ ನೀಡಬೇಕು ಎಂದು ಸುಮಲತಾ ಕೇಳಿಕೊಂಡರು.

ಇದನ್ನೂ ಓದಿ: ಮಂಡ್ಯ ಬೆಲ್ಲಕ್ಕೆ ಕೆಮಿಕಲ್ಸ್​ ಮಿಕ್ಸ್​?

ಬೆಲ್ಲ ಬೆಲ್ಲ ಮಂಡ್ಯದ ಬೆಲ್ಲ ಅಂದ್ರೆ ಸಾಕು ಗೃಹಿಣಿಯರು ದೂರ ಓಡಿಹೋಗ್ತಿದ್ದಾರೆ! ಯಾಕೆ ಗೊತ್ತಾ?

Published On - 9:31 pm, Fri, 19 March 21