ಜಮೀನಿನಲ್ಲಿ ಸಿಕ್ಕ ಚಿರತೆ ಮರಿಗಳನ್ನ ಮನೆಗೆ ಹೊತ್ತೊಯ್ದು ಸಾಕಿದ ಮಕ್ಕಳು: ಚಿರತೆ ಮರಿಗಳನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು
ಜಮೀನಿನಲ್ಲಿ ಸಿಕ್ಕ 2 ಚಿರತೆ ಮರಿಗಳನ್ನು ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ನಡೆದಿದೆ.
ಮಂಡ್ಯ: ಜಮೀನಿನಲ್ಲಿ ಸಿಕ್ಕ 2 ಚಿರತೆ ಮರಿಗಳನ್ನು (leopard cubs) ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ನಡೆದಿದೆ. ಕೀರ್ತಿಕುಮಾರ್ ಎನ್ನುವವರ ಜಮೀನಿನಲ್ಲಿ 8 ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಚಿರತೆ ಬೇಟೆಗೆ ಹೋದಾಗ ಮರಿಗಳು ಏಕಾಂಗಿಯಾಗಿ ಜಮೀನಿನಲ್ಲಿ ತಿರುಗುತ್ತಿದ್ದವು. ಆಗ ಅದರಲ್ಲಿ ಎರಡು ಚಿರತೆ ಮರಿಗಳನ್ನು ಮಕ್ಕಳು ಮನೆಗೆ ತೆಗೆದುಕೊಂಡು ಬಂದು ಕೋಳಿ ಗೂಡಿನಲ್ಲಿ 2 ಚಿರತೆ ಮರಿಗಳನ್ನು ಕೂಡಿ ಹಾಕಿದ ಮಕ್ಕಳು ಪೋಷಿಸಿದ್ದಾರೆ. ಚಿರತೆ ಮರಿಗಳನ್ನು ನೋಡಲು ಕೂಳಗೆರೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ತಂಡ ಚಿರತೆ ಮರಿಗಳನ್ನ ರಕ್ಷಿಸಿದ ಅರಣ್ಯಾಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಮತ್ತೆ ಮುಂದುವರೆದಿವೆ. ಇತ್ತೀಚೆಗೆ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಳವಳ್ಳಿ ತಾಲೂಕಿನ ಬ್ಲಫ್ ಬಳಿ ನಡೆದಿತ್ತು. ಪ್ರೀತಿಯಿಂದ ಸಾಕಿದ ಹಸುವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಹಾಕಿದ್ದರು. ತಾಲೂಕಿನಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಸಹಜವಾಗಿ ಜನರಲ್ಲಿನ ಆತಂಕವನ್ನು ಹೆಚ್ಚಿಸಿದೆ. ಮಳವಳ್ಳಿ ತಾಲೂಕಿನ ಬ್ಲಫ್ ಬಳಿಯ ನಂಜಪ್ಪ ಎಂಬುವವರು ಸಾಕಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ: ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು
ಅಪರಿಚಿತ ವಾಹನ ಡಿಕ್ಕಿ: ಚಿರತೆ ಸಾವು
ದಾವಣಗೆರೆ: ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ತಾಲೂಕಿನ ಹಾಲವರ್ತಿ ಗ್ರಾಮದ ಬಳಿ ನಡೆದಿದೆ. ತಡರಾತ್ರಿ ಚಿರತೆಯೊಂದು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಈ ಅವಘಡ ಸಂಭವಿಸಿದೆ. ಆನಗೋಡು ಸುತ್ತಾಮುತ್ತ ಚಿರತೆ ಓಡಾಡುತ್ತಿತ್ತು ಎನ್ನಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.
ರಾಮತುಂಗಾ ಗ್ರಾಮದಲ್ಲಿ ಬೋನ್ಗೆ ಬಿದ್ದ 2 ವರ್ಷದ ಗಂಡು ಚಿರತೆ
ಮೈಸೂರು: ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಇದೀಗ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾಮತುಂಗಾ ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ. ರೈತ ನಾಗೇಶ್ಗೆ ಸೇರಿದ 2 ಮೇಕೆಗಳನ್ನು ಈ ಚಿರತೆ ಕೊಂದು ತಿಂದಿತ್ತು. ಈ ಕಾರಣಕ್ಕೆ ಚಿರತೆ ದಾಳಿ ಮಾಡಿದ್ದ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯು ಬೋನ್ ಇರಿಸಿದ್ದು, ಇದೀಗ 2 ವರ್ಷದ ಗಂಡು ಚಿರತೆ ಬೋನ್ಗೆ ಬಿದ್ದಿದೆ. ಸೆರೆ ಸಿಕ್ಕ ಗಂಡು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಚಿಪ್ ಅಳವಡಿಕೆ ಮಾಡಲಾಗಿದೆ. ನಂತರ ದೇವಮಾಚಿ ಅರಣ್ಯಕ್ಕೆ ಚಿರತೆಯನ್ನ ಬಿಡಲಾಗಿದೆ.
ಇದನ್ನೂ ಓದಿ: ಮಂಡ್ಯ: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ; ಖಾಸಗಿ ಆಸ್ಪತ್ರೆಗೆ ದಾಖಲು
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಕರು ಬಲಿ
ಚಾಮರಾಜನಗರ: ಚಿರತೆ ದಾಳಿಗೆ ಕರು ಬಲಿಯಾದ ಘಟನೆ ತಾಲೂಕಿನ ಬಂಡೀಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಕಿಲಗೆರೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಪ್ರಜ್ವಲ್ ಎಂಬವರಿಗೆ ಸೇರಿದ ಕರುವಿನ ಮೇಲೆ ಹುತ್ತೂರು ಕಿಲಗೆರೆ ಗೇಟ್ ಹಾಗೂ ಮಾದಲವಾಡಿ ಗ್ರಾಮದ ಮಾರ್ಗಮಧ್ಯೆ ಇರುವ ಜಮೀನಿನಲ್ಲಿ ತಡರಾತ್ರಿ ದಾಳಿ ನಡೆಸಿ ಕೊಂದು ಹಾಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.