ಮಂಡ್ಯ: ಮತ್ತೆ ಹನುಮ ಧ್ವಜ ಹಾರಿಸಲು ಮುಂದಾಗಲಿದ್ದಾರೆ ಕೆರೆಗೋಡು ಗ್ರಾಮಸ್ಥರು
Keragodu Hanuman Dhwaja Controversy: ಮಂಡ್ಯದ ಕೆರೆಗೋಡುವಿನಲ್ಲಿ ಮತ್ತೆ ಹನುಮಧ್ವಜ ವಿವಾದ ಸದ್ದು ಮಾಡುವ ಎಲ್ಲ ಲಕ್ಷಣಗಳು ಇದೀಗ ಗೋಚರಿಸುತ್ತಿವೆ. ಕೆರಗೋಡು ಅರ್ಜುನ ಸ್ತಂಭದಲ್ಲಿದ್ದ ಹಳೆಯ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜ ಹಾರಿಸಲಾಗಿದ್ದು, ಇದರ ಬೆನ್ನಲ್ಲೇ ಸ್ಥಳೀಯರು ಜೂನ್ 4ರ ನಂತರ ಹನುಮ ಧ್ವಜಕ್ಕಾಗಿ ಮತ್ತೆ ಹೋರಾಟ ನಡೆಸುವ ಸುಳಿವು ನೀಡಿದ್ದಾರೆ.
ಮಂಡ್ಯ, ಮೇ 22: ಮಂಡ್ಯ (Mandya) ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ (Keragodu Hanuman Dhwaja) ವಿವಾದ ಮತ್ತೆ ಭುಗಿಲೇಳಲಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಕೆರಗೋಡು ಅರ್ಜುನ ಸ್ತಂಭದಲ್ಲಿದ್ದ ಹಳೆಯ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜ ಹಾರಿಸಲಾಗಿದ್ದು, ಇದರ ಬೆನ್ನಲ್ಲೇ ಇದೀಗ ಗ್ರಾಮಸ್ಥರು ಮತ್ತೆ ಹನುಮ ಧ್ವಜ ಹಾರಿಸಲು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಹನುಮ ಧ್ವಜ ಹಾರಿಸುವುದಕ್ಕಾಗಿ ಕೆರಗೋಡಿನಲ್ಲಿ 2ನೇ ಹಂತದ ಹೋರಾಟಕ್ಕೆ ಸಿದ್ಧತೆ ಮಾಡಲಾಗುತ್ತಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಗ್ರಾಮಸ್ಥರು ಮುಂದಾಗಿದ್ದಾರೆ.
ಸದ್ಯ ಲೋಕಸಭೆ ಚುನಾವಣೆಯ ಕಾರಣ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಟಸ್ಥವಾಗಿರಲು ಗ್ರಾಮಸ್ಥರು ನಿರ್ಧಾರಿಸಿದ್ದಾರೆ. ಆದರೆ, ಜೂನ್ 4ರ ಬಳಿಕ ಧರಣಿ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ. ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಹೋರಾಟಕ್ಕೆ ತಯಾರಿ ನಡೆಸಲಾಗುತ್ತಿದೆ.
ಕೆರಗೋಡು ಅರ್ಜುನ ಸ್ತಂಭದಲ್ಲಿದ್ದ ಹನುಮ ಧ್ವಜ ತೆರವುಗೊಳಿಸಿದ ವಿಚಾರ ಕಳೆದ ಜನವರಿಯಲ್ಲಿ ಭಾರಿ ಸಂಘರ್ಷಕ್ಕೆ ಕಾರಣವಾಗಿತ್ತು. ನಂತರ ಪ್ರಕರಣ ರಾಜಕೀಯ ತಿರುವನ್ನೂ ಪಡೆದುಕೊಂಡಿತ್ತು.
ಹೋರಾಟ ಇಲ್ಲಿಗೆ ನಿಲ್ಲಲ್ಲ ಎಂದ ಗ್ರಾಮಸ್ಥರು
ಹಳೆ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜ ಹಾರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸ್ಥಳೀಯರು, ಇಷ್ಟು ದೊಡ್ಡ ಧ್ವಜ ಸ್ತಂಭಕ್ಕೆ ಚಿಕ್ಕ ರಾಷ್ಟ್ರ ಧ್ವಜ ಸಲ್ಲದು. ಜಿಲ್ಲಾಡಳಿತ ಹಾರಿಸಿದ ರಾಷ್ಟ್ರ ಧ್ವಜ ಅಸಮಾಧಾನ ತಂದಿದೆ. ದೊಡ್ಡ ರಾಷ್ಟ್ರ ಧ್ವಜ ಹಾರಿಸುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಅತುರದಲ್ಲಿ ಹೊಸ ಧ್ವಜ ಹಾರಿಸಿದ್ದಾರೆ. ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲಲ್ಲ. ಜೂನ್ 4ರ ನಂತರ ಹನುಮ ಧ್ವಜ ಹೋರಾಟ ತೀವ್ರವಾಗಲಿದೆ ಎಂದಿದ್ದರು. ಜತೆಗೆ, ರಾಷ್ಟ್ರೀಯ ಹಬ್ಬದ ಸಂಧರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಟಕ್ಕೆ ಅಭ್ಯಂತರವಿಲ್ಲ. ಆದರೆ ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು ಎಂದು ಹೇಳಿದ್ದರು.
ಹನುಮ ಧ್ವಜ ವಿವಾದದ ಹಿನ್ನೆಲೆ
ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಕೆರೆಗೋಡುವಿನಲ್ಲಿ 108 ಅಡಿ ಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿತ್ತು. ಅದನ್ನು ತೆರವು ಮಾಡಲು ಎಸಿ ಮತ್ತು ತಹಶೀಲ್ದಾರ್ ಸೇರಿ ಹಲವು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ಅಧಿಕಾರಿಗಳ ಜೊತೆ ಜಟಾಪಟಿ ನಡೆಸಿದ್ದರು.
ಇದನ್ನೂ ಓದಿ: ಮಂಡ್ಯದ ಕೆರಗೋಡು ಅರ್ಜುನ ಸ್ತಂಭದಲ್ಲಿ ಹೊಸ ತ್ರಿವರ್ಣ ಧ್ವಜ ಹಾರಾಟ
ಸ್ಥಳೀಯ ಮಹಿಳೆಯರು, ಯುವಕರು ಸ್ಥಳದಲ್ಲಿ ಜಮಾಯಿಸಿ ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿದ್ದರು. ವಿರೋಧದ ನಡುವೆಯೂ ನಂತರ ಜಿಲ್ಲಾಡಳಿತ ಧ್ವಜ ತೆರವು ಮಾಡಿ, ಬಳಿಕ ತ್ರಿವರ್ಣ ಧ್ವಜ ಹಾರಿಸಿತ್ತು. ನಂತರ ವಿವಾದ ರಾಜಕೀಯ ಆಯಾಮ ಪಡೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Wed, 22 May 24