
ಮಂಡ್ಯ, ಜನವರಿ 31: ಸಾರ್ವಜನಿಕರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಣೆ ನೀಡಿರುವುದಾಗಿ ಆರೋಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಡ್ಯ ಜಿಲ್ಲಾ ಬಿಜೆಪಿ ದೂರು ನೀಡಿದೆ. ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಜಾಹೀರಾತುಗಳು ರಾಜಕೀಯ ಪ್ರೇರಿತವಾಗಿರಬಾರದು ಎಂದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ರಾಜಕೀಯ ಪಕ್ಷಪಾತದಿಂದ ಕೂಡಿದೆ. ತೆರಿಗೆದಾರರ ಹಣವನ್ನು ಕೇಂದ್ರದ ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡಲು ಬಳಸುವುದು ಸಾರ್ವಜನಿಕ ಹಣದ ದುರುಪಯೋಗ ಎಂದು ಬಿಜೆಪಿ ಆರೋಪಿಸಿದೆ.
ಅಲ್ಲದೆ, ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರ ವ್ಯಂಗ್ಯಚಿತ್ರವನ್ನು ಬಳಸಿ ಕೇಂದ್ರದ ಯೋಜನೆಯನ್ನು ಟೀಕಿಸಿರುವುದು ಗಾಂಧೀಜಿಯವರಿಗೆ ಮಾಡಿದ ಅವಮಾನ. ಜಾಹೀರಾತು ಕೇವಲ ರಾಜಕೀಯ ಟೀಕೆಯಾಗಿದ್ದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರಬಹುದು, ಆದರೆ ಸಾರ್ವಜನಿಕ ಹಣ ಬಳಸಿರುವುದರಿಂದ ಅದು ಸುಪ್ರೀಂಕೋರ್ಟ್‌ನ 2015ರ ಮಾರ್ಗಸೂಚಿಗಳ ಗಂಭೀರ ಉಲ್ಲಂಘನೆಯಾಗಿದೆ. ಸರ್ಕಾರಿ ಜಾಹೀರಾತುಗಳು ಕೇವಲ ಮಾಹಿತಿಯುಕ್ತವಾಗಿರಬೇಕು. ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿ ಉತ್ತೇಜಿಸಲು ಅಥವಾ ವಿರೋಧ ಪಕ್ಷದ ವಿರುದ್ಧ ನಕಾರಾತ್ಮಕ ಚಿತ್ರಣ ನೀಡಲು ಸಾರ್ವಜನಿಕ ಹಣ ಬಳಸುವಂತಿಲ್ಲ.ರಾಜಕೀಯ ಟೀಕೆಗಳಿಗಾಗಿ ಸರ್ಕಾರಿ ಇಲಾಖೆಯ ಹೆಸರಿನಲ್ಲಿ ಜಾಹೀರಾತು ನೀಡುವುದು ಸಂವಿಧಾನದ 14ನೇ ವಿಧಿ ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ಕೋರ್ಟ್ ತಿಳಿಸಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆ ಮಾಡಲು ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಆದರೆ, ಸರ್ಕಾರಿ ಯಂತ್ರವನ್ನು ಬಳಸಿ ಜನರ ದಾರಿ ತಪ್ಪಿಸುವಂತಹ ಅಥವಾ ಸುಳ್ಳು ಮಾಹಿತಿ ನೀಡುವಂತಹ ಅಪಪ್ರಚಾರ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ಬಿಜೆಪಿ ದೂರಿದೆ.
ಇದನ್ನೂ ಓದಿ: ಜಾಹೀರಾತು ಜಟಾಪಟಿಗೆ ತಿರುಗಿದ ನರೇಗಾ ಯುದ್ಧ; ಅಧಿವೇಶನದಲ್ಲೂ ‘ಗಾಂಧಿ Vs ಸಂಘಪ್ಪ’ ಸಮರ!
ಕೇಂದ್ರದ ಕಾನೂನಿನ ಬಗ್ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಬಹುದು ಅಥವಾ ಕೋರ್ಟ್‌ನಲ್ಲಿ ಸವಾಲು ಹಾಕಬಹುದು. ಆದರೆ, ಅಧಿಕೃತವಾಗಿ ಆ ಕಾನೂನನ್ನು ಜಾರಿಗೆ ತರುವಲ್ಲಿ ಅಡ್ಡಿಪಡಿಸುವುದು ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವುದು ಸಾಂವಿಧಾನಿಕವಾಗಿ ತಪ್ಪು. ಹಾಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಜಾಹೀರಾತು ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆ ಮುಖ್ಯಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.