ಜಾಹೀರಾತು ಜಟಾಪಟಿಗೆ ತಿರುಗಿದ ನರೇಗಾ ಯುದ್ಧ: ಅಧಿವೇಶನದಲ್ಲೂ ‘ಗಾಂಧಿ Vs ಸಂಘಪ್ಪ’ ಸಮರ!
ಕಾಂಗ್ರೆಸ್ ಸರ್ಕಾರ ಮಹಾತ್ಮ ಗಾಂಧೀಜಿ ಹಾಗೂ ‘ಸಂಘಪ್ಪ’ ಎಂಬ ವ್ಯಕ್ತಿಯ ಚಿತ್ರದೊಂದಿಗೆ ನರೇಗಾ ಜಾಹೀರಾತು ನೀಡಿರುವ ವಿಚಾರವಾಗಿ ವಿಧಾನಸಭೆಯಲ್ಲಿ ಭಾರಿ ವಾಕ್ಸಮರ ನಡೆದಿದೆ. ಬಿಜೆಪಿ ನಿಯಮ ಉಲ್ಲಂಘನೆ ಆರೋಪಿಸಿದರೆ, ಕಾಂಗ್ರೆಸ್ ತೀವ್ರ ತಿರುಗೇಟು ನೀಡಿದೆ. ಜಾಹೀರಾತು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಜನವರಿ 30: ಖಾಕಿ ಪ್ಯಾಂಟ್ ಅಥವಾ ಖಾಕಿ ಚಡ್ಡಿ ಮತ್ತು ಬಿಳಿ ಅಂಗಿ ಹಾಕಿದ ವ್ಯಕ್ತಿ ಮಹಾತ್ಮ ಗಾಂಧೀಜಿ (Mahatma Gandhi) ಜೊತೆಗೆ ಸಂಭಾಷಣೆ ಮಾಡುತ್ತಿದ್ದಾರೆ. ಗಾಂಧಿ ಎದುರಿಗಿರುವ ವ್ಯಕ್ತಿಯನ್ನು ಸಂಘಪ್ಪ ಎಂದು ಕರೆಯಲಾಗಿದೆ. ಇಡೀ ಜಾಹಿರಾತಿನಲ್ಲಿ ಮನ್ರೇಗಾ (MNAREGA) ಯೋಜನೆಯನ್ನ ಗಾಂಧೀಜಿ ಸಮರ್ಥಿಸಿಕೊಂಡಂತೆ ಹಾಗೂ ಎದುರಿಗಿರುವ ವ್ಯಕ್ತಿ ಜಿ ರಾಮ್ ಜಿ ಪರವಾಗಿ ಮಾತನಾಡಿದಂತೆ ತೋರಿಸಲಾಗಿದೆ. ಇದೇ ಜಾಹೀರಾತು ಈಗ ಬಿಜೆಪಿ ನಾಯಕರನ್ನು ಕೆರಳಿಸಿದೆ. ವಿಧಾನಸಭೆಯೊಳಗೆ (Assembly Session) ಇದೇ ವಿಚಾರಕ್ಕೆ ಭಾರಿ ಮಾತಿನ ಯುದ್ಧವೇ ನಡೆದಿದೆ.
ಶಾಸಕ ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿದರೆ, ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ, ‘ಯಾವ ನಿಯಮ ಉಲ್ಲಂಘನೆ ಆಗಿದೆ ಹೇಳಿ’ ಎಂದು ಸವಾಲು ಹಾಕಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಸುಪ್ರೀಂಕೋರ್ಟ್ ಆದೇಶವನ್ನ ಓದಿ, ನಿಯಮ ಉಲ್ಲಂಘನೆ ಆಗಿದೆ ಎಂದಿದ್ದಾರೆ. ಆದರೆ, ಜಾಹೀರಾತಿನಲ್ಲಿ ತೋರಿಸಿರುವ ವ್ಯಕ್ತಿ ಯಾರು ಎಂಬ ಬಗ್ಗೆಯೂ ಭಾರಿ ವಾಕ್ಸಮರ ನಡೆದಿದೆ.
ರಾಜ್ಯ ಸರ್ಕಾರದ ಕಡೆಯಿಂದ ಜಾಹೀರಾತು ನೀಡಿರುವುದಕ್ಕೂ ಬಿಜೆಪಿ ಆಕ್ಷೇಪ ಎತ್ತಿದೆ. ಪಕ್ಷದಿಂದ ಬೇಕಿದ್ದರೆ ಜಾಹಿರಾತು ಕೊಡಿ, ಸರ್ಕಾರದಿಂದ ಕೊಡಬೇಡಿ ಎಂದು ಶಾಸಕ ಸುನಿಲ್ ಕುಮಾರ್ ಗರಂ ಆದರು. ಸುನೀಲ್ ಕುಮಾರ್ ಮಾತಿಗೆ ಖಡಕ್ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ, ಈ ಹಿಂದಿನ ಬಿಜೆಪಿ ಸರ್ಕಾರಗಳ ಜಾಹೀರಾತು ನೆನಪಿಸಿದರು.
ಜಾಹೀರಾತು ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮದೇ ಆದ ರೀತಿಯಲ್ಲಿ ನಾವು ಜಾಹೀರಾತು ನೀಡಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ನರೇಗಾ ಮಹಾಯುದ್ಧ ಈಗ ಜಾಹೀರಾತು ಜಟಾಪಟಿಯತ್ತ ತಿರುಗಿದೆ. ಈ ಮಧ್ಯೆ ವಿಶೇಷ ಅಧಿವೇಶನವನ್ನು ಫೆಬ್ರವರಿ ನಾಲ್ಕರವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಆಡಳಿತ ವಿಪಕ್ಷಗಳ ಸಂಘರ್ಷ ಮತ್ತಷ್ಟು ತಾರಕಕ್ಕೆ ಏರುವುದರಲ್ಲಿ ಅನುಮಾನವಿಲ್ಲ.