ಮಂಡ್ಯ, ಜನವರಿ 30: ಮಂಡ್ಯ (Mandya) ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಲು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮುಂದಾಗಿರುವುದು ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಹೇಳಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವು (ಕುಮಾರಸ್ವಾಮಿ) ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ ಎಂಬುದನ್ನು ಮರೆಯಬೇಡಿ. ಜಿಲ್ಲೆಯ ಜನರ ಜೀವನ ಹಾಳುಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರಾಗಿ ನೀವು ನಮ್ಮನ್ನು (ಸರ್ಕಾರವನ್ನು) ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಕೆಲಸ ಮಾಡಬಾರದು. ಜಿಲ್ಲೆಯ ಜನರೇ ನಿಮಗೆ ಅಧಿಕಾರ ನೀಡಿದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಆಶೀರ್ವದಿಸಿದ್ದಾರೆ. ಮುಂದೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದರೆ ನಮಗೂ ಜನ ಪಾಠ ಕಲಿಸಬಹುದು. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಅದು ಬಿಟ್ಟು ಸಂವಿಧಾ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ ಎಂದು ಕುಮಾರಸ್ವಾಮಿ ಅವರನ್ನುದ್ದೇಶಿಸಿ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೆರಗೋಡು ಗ್ರಾಮದ ಮಧ್ಯಭಾಗದಲ್ಲಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಮಾತ್ರ ಆರೋಹಣ, ಅವರೋಹಣ ಮಾಡುವುದಾಗಿ ಕರಾರು ಪತ್ರ ಬರೆಯಲಾಗಿದೆ. ಇದರಂತೆಯೇ ಅವರು ನಡೆದುಕೊಂಡಿದ್ದರು. ಆದರೆ, ನಂತರ ಅಲ್ಲಿ ಧರ್ಮದ ಧ್ವಜ ಆರೋಹಣ ಮಾಡಲು ಯಾರು ಪ್ರೇರೇಪಣೆ ಕೊಟ್ಟರೋ ತಿಳಿಯದು. ಚುನಾವಣೆ ಸಂದರ್ಭದಲ್ಲಿ ಅದರ ಲಾಭ ಪಡೆಯಲು ಮಾಡಿದ್ದಾರೋ ತಿಳಿಯದು ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ವಜ ವಿವಾದ ವಿಚಾರವಾಗಿ ಬಿಜೆಪಿ ನಾಯಕ ಸಿಟಿ ರವಿ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ ವಿರುದ್ಧವೂ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಿಟಿ ರವಿಯವರೇ, ನೀವು ಹೋರಾಟ ಮಾಡಿ. ಬೇಡ ಎನ್ನುತ್ತಿಲ್ಲ. ಆದರೆ ಪ್ರಜಾಪ್ರಭುತ್ವದ ವಿಚಾರದಲ್ಲಿ ಜನರನ್ನು ಹಾದಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಆರ್ ಅಶೋಕ ಅವರು ಪ್ರತಿಪಕ್ಷ ನಾಯಕರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಘನತೆಯಿಂದ ವರ್ತಿಸಬೇಕಿತ್ತು. ಆದರೆ, ಅವರು ಕ್ಷುಲ್ಲಕ ರಾಜಕಾರಣ ಮಾಡಲು ಮಂಡ್ಯಕ್ಕೆ ಸೋಮವಾರ ಬಂದಿದ್ದರು ಎಂದು ಚಲುವರಾಯಸ್ವಾಮಿ ಟೀಕಿಸಿದರು.
ಮಂಡ್ಯ ಜಿಲ್ಲೆಯ ಜನರು ನಿಮ್ಮ ಗಿಮಿಕ್ ಅನ್ನು ನಂಬುವುದಿಲ್ಲ. ಅದೇ ರೀತಿ ನಿಮ್ಮನ್ನು ಕ್ಷಮಿಸುವುದೂ ಇಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಕೇಸರಿ ಶಾಲು ಹಾಕುವ ಬದಲು ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗಿ. ರೈತರ ಹಸಿರು ಶಾಲು ಬಿಟ್ಟಾಯ್ತು. ಜೆಡಿಎಸ್ನ ಜಾತ್ಯತೀತತೆಯನ್ನೂ ಬಿಟ್ಟಾಯ್ತು. ಇನ್ನು ಬಿಜೆಪಿಗೆ ಸೇರಿಕೊಳ್ಳಿ. ಎಲ್ಲವನ್ನೂ ಜನ ತೀರ್ಮಾನಿಸಲಿ ಎಂದು ಕುಮಾರಸ್ವಾಮಿ ವಿರುದ್ಧ ಸಚಿವರು ಕಿಡಿ ಕಾರಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಹನುಮ ಧ್ವಜ ವಿವಾದ ಶುರುವಾಗಿದ್ಹೇಗೆ? ಯಾಕೆ? ಇಲ್ಲಿದೆ ಘಟನೆ ಹಿನ್ನೆಲೆ
ನಿಮ್ಮನ್ನು ಮಂಡ್ಯದ ಜನ ಈ ಹಿಂದೆ ಆಶೀರ್ವದಿಸಿದ್ದಾರೆ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ನಾವು ಇಲ್ಲಿದ್ದು ಜೀವನ ನಡೆಸುವವರು. ನಿಮ್ಮಂತೆ ಬದಲಾಗುವವರಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಂಡ್ಯದ ಜನ ಯಾವುದೇ ಪ್ರಚೋದನೆಗಳಿಗೆ ಒಳಗಾಗಬಾರದು ಎಂದು ಕರೆ ನೀಡಿದರು.
ಚುನಾವಣೆಗಾಗಿ ಈ ರೀತಿ ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ
ಚುನಾವಣೆ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ. ಇವರು ಸಿಂಗಾಪುರದಲ್ಲಿ ಕುಳಿತುಕೊಂಡು ಹೇಗೆಲ್ಲಾ ಮಾತನಾಡಿದ್ದರು ಎಂಬುದನ್ನು ಗಮನಿಸಿ. ಕುಮಾರಸ್ವಾಮಿಯವರು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರೂ ಟೀಕಿಸಿಲ್ಲ. ಜೆಡಿಎಸ್ನವರು ಟೀಕೆಮಾಡಿದಷ್ಟು ಕಾಂಗ್ರೆಸ್ ಕೂಡ ಮಾಡಿಲ್ಲ. ಇದೀಗ ಅವರಿಬ್ಬರೂ (ಜೆಡಿಎಸ್, ಬಿಜೆಪಿ) ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇವೇಗೌಡರೇ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು ಎಂದು ಚಲುವರಾಯಸ್ವಾಮಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Tue, 30 January 24