KSRTC ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ: ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೆಎಸ್ಆರ್ಟಿಸಿ ಬಸ್ ಚಾಲಕರ ಸಮಯ ಪ್ರಜ್ಞೆಯನ್ನು ಮೆಚ್ಚಲೇಬೇಕು. ಸಂಭವಿಸಬಹುದಾದ ಅದೆಷ್ಟೋ ಅಪಘಾತಗಳನ್ನು ತಮ್ಮ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ. ಈ ಘಟನೆಯಲ್ಲೂ ಕೂಡ ಕೆಎಸ್ಆರ್ಟಿಸಿ ಬಸ್ ಚಾಲಕನ ತತಕ್ಷಣದ ಜಾಗರೂಕತೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಏನದು ಇಲ್ಲಿದೆ ಓದಿ...
ಮಂಡ್ಯ ಡಿ.04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ರವಿವಾರ ಮಧ್ಯಾಹ್ನ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಮೇಲೆ ವೇಗವಾಗಿ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ಇದೇ ವೇಳೆ ಹೆದ್ದಾರಿಯ ಅಂಡರ್ ಪಾಸ್ ಮೂಲಕ ಟಿಪ್ಪರ್ ವಾಹನ, ಬಸ್ಗೆ ಅಡ್ಡ ಬಂದಿದೆ.
ಕೂಡಲೆ ಚಾಲಕ ಬಸ್ ಅನ್ನು ಎಡ ತಿರುವು ತೆಗೆದುಕೊಂಡಿದ್ದಾರೆ. ಇದರಿಂದ ಭಾರಿ ಅಪಘಾತ ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಎದೆ ಝಲ್ ಎನಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಡರ್ ಪಾಸ್ಗಳ ಸಮೀಪ ರಸ್ತೆ ಉಬ್ಬು ಇಲ್ಲದಿರುವುದೇ ಘಟನೆ ಕಾರಣವಾಗಿದೆ. ಕೂಡಲೇ ರಸ್ತೆ ಉಬ್ಬು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೊಬ್ಬರಿ ಎಣ್ಣೆಯೊಂದಿಗೆ KSRTC ಬಸ್ ಹತ್ತಿದ ಮಹಿಳೆ; ಏನಿದು ಎಂದು ಕೇಳಿದ ಚಾಲಕ, ಬಾಂಬ್ ಎಂದು ಗದರಿದ ಮಹಿಳೆ
ಕೆಎಸ್ಆರ್ಟಿಸಿ ಬಸ್ ಚಾಲಕನ ಜಾಣ್ಮೆಗೆ ಗ್ರಾಮಸ್ಥರಿಂದ ಸನ್ಮಾನ
ಹುಬ್ಬಳ್ಳಿ: ಕೆಎಸ್ಆರ್ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಗೆ ಗ್ರಾಮಸ್ಥರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಎಸ್ಆರ್ಟಿಸಿ ಬಸ್ವೊಂದು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶಿರಟ್ಟಿಯಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಬಸ್ನಲ್ಲಿ ಮಲ್ಲಿಗವಾಡ, ಮುಳಗುಂದ ಚಿಂಚಲಿ, ಕೋಳವಾಡದಿಂದ ನೂರಾರು ಪ್ರಯಾಣಿಕರು ಬರುತ್ತಿದ್ದರು.
ಬಸ್ನಲ್ಲಿ ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಬಸ್ ಎಕ್ಸೆಲ್ ಕಟ್ ಆಗಿದೆ. ಇದನ್ನು ಅರಿತ ಚಾಲಕ ಕೂಡಲೆ ಬಸ್ ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಬಹುದಾದ ಅಪಘಾತ ತಪ್ಪಿಸಿದ್ದಾರೆ. ಹೀಗಾಗಿ ಚಾಲಕನಿಗೆ ಕೋಳಿವಾಡ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Mon, 4 December 23