ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಜೀವನ್ಮರಣ ಹೋರಾಟ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡರು ಸಿಬ್ಬಂದಿಗಳ ಕಿರುಕುಳ ಮಾತ್ರ ತಪ್ಪುತ್ತಿಲ್ಲ. ಹೀಗಾಗಿ ಮಂಡ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು 59 ವರ್ಷದ ಮಹಿಳೆಯೊಬ್ಬರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.

ಮಂಡ್ಯ, ಜನವರಿ 28: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ (Micro finance) ಹಾವಳಿ ಹೆಚ್ಚಾಗುತ್ತಿದೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಸಾಲಗಾರರು ಗ್ರಾಮ ತೊರೆಯುವುದು, ಆತ್ಮಹತ್ಯೆ, ಆತ್ಮಹತ್ಯೆ ಯತ್ನಕ್ಕೆ ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಂಡರು ಮೈಕ್ರೋ ಫೈನಾನ್ಸ್ ಕಿರುಕುಳ ಮಾತ್ರ ತಪ್ಪುತ್ತಿಲ್ಲ. ಅದೇ ರೀತಿ ಸಕ್ಕರಿನಗರಿ ಮಂಡ್ಯದಲ್ಲೂ ಕೂಡ ಬ್ಯಾಂಕ್ವೊಂದರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ(59)ಎಂಬುವವರು 2018 ರಲ್ಲಿ ಮಗಳ ಮದುವೆ ಮಾಡುವ ಸಲುವಾಗಿ ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ ಮನೆಯ ಮೇಲೆ ಆರು ಲಕ್ಷ ರೂ. ಸಾಲ ಪಡೆದಿದ್ದರು. 2024 ರ ನವೆಂಬರ್ವರೆಗೂ ಪ್ರತಿತಿಂಗಳು 10 ಸಾವಿರದಂತೆ ಹಣವನ್ನ ಕಟ್ಟಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್ ಎಂದು ಮಹಿಳೆಗೆ ವಂಚನೆ: ಆರೋಪಿ ಅಂದರ್
ಆದರೆ ಕಳೆದ ಮೂರು ತಿಂಗಳಿಂದ ಪತಿ ಹಾಗೂ ಮಗನ ಅನಾರೋಗ್ಯದ ಹಿನ್ನೆಲೆಯಲ್ಲಿ ಕಂತು ಕಟ್ಟಿಲ್ಲ. ಹೀಗಾಗಿ ವಾರದ ಹಿಂದೆ ಬ್ಯಾಂಕ್ ಸಿಬ್ಬಂದಿ ಮನೆಯನ್ನ ಸೀಜ್ ಮಾಡಿದ್ದಾರೆ. ಅಲ್ಲದೇ ನೋಟಿಸ್ ನೀಡಿ ಮತ್ತೆ ಆರು ಲಕ್ಷ ರೂ. ಕಟ್ಟುವಂತೆ ಹೇಳಿದ್ದಾರೆ. ಕಳೆದ ವಾರದಿಂದ ಸಂಬಂಧಿಕರ ಮನೆಯಲ್ಲಿ ಇದ್ದ ಪ್ರೇಮಾ ಕುಟುಂಬ, ಗ್ರಾಮದಲ್ಲಿ ಈ ರೀತಿ ಮರ್ಯಾದೆ ಹೋಯ್ತು ಅಂತಾ ಮನೆಯ ಮುಂದೇಯೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಂದಹಾಗೆ ಆತ್ಮಹತ್ಯೆಗೆ ಯತ್ನಿಸಿರುವ ಪ್ರೇಮಾ, ಮಳವಳ್ಳಿಯಲ್ಲಿ ಅಂಗನವಾಡಿಗಳಿಗೆ ಕಳುಹಿಸುವ ಫುಡ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದಾರೆ. ಆಕೆಯ ಗಂಡನಿಗೆ ಪಾರ್ಶ್ವವಾಯು ಹೊಡೆದು ಮನೆಯಲ್ಲಿಯೇ ಇದ್ದಾರೆ. ಮಗನಿಗೂ ಕೂಡ ಗ್ಯಾಂಗ್ರಿನ್ ಆಗಿ ಆತ ಕೂಡ ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಕಳೆದ ಮೂರು ತಿಂಗಳಿಂದ ಸಾಲದ ಕಂತನ್ನ ಕಟ್ಟಿಲ್ಲ.
ಇದನ್ನೂ ಓದಿ: ಟಿವಿ9 ಬಿಗ್ ಇಂಪ್ಯಾಕ್ಟ್: ಸೀಜ್ ಮಾಡಿದ್ದ ಬಾಣಂತಿ ಮನೆ ಓಪನ್ ಮಾಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಸಾಲದ ಕಂತು ಕಟ್ಟಲು ಬೇರೆಯವರ ಬಳಿ ಸಾಲ ಕೇಳಿದರೂ ಸಾಲ ಸಿಕ್ಕಿಲ್ಲ. ಹೀಗಾಗಿ ಸಾಕಷ್ಟು ನೊಂದು ಸೀಜ್ ಆಗಿದ್ದ ಮನೆಯ ಮುಂದೆಯೇ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಪ್ರೇಮಾ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪರಿಸ್ಥಿತಿ ಕಂಡು ಪ್ರೇಮಾ ಪುತ್ರಿಯರು ಕಣ್ಣೀರು ಹಾಕಿದ್ದಾರೆ. ಸದ್ಯ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.