
ಮಂಡ್ಯ, (ಜುಲೈ 31): ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವುದು ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ. ದರ್ಶನ್ ಪುಟ್ಟಣ್ಣಯ್ಯ (melukote MLA Darshan Puttannaiah) ತಮ್ಮ ತಂದೆ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಾದಿಯಲ್ಲಿ ರೈತ ಸಂಘಟನೆ ಮೂಲಕ ರಾಜಕೀಯ ಪ್ರವೇಶ ಪಡೆದ್ದಾರೆ. ದರ್ಶನ್ ಪುಟ್ಟಣ್ಣಯ್ಯ ವಿದೇಶದಲ್ಲಿ ಇದ್ದವರು, ಇವರಿಗೆ ರೈತರ ಕಷ್ಟ ಏನು ಗೊತ್ತು? ಹಳ್ಳಿಗಾಡಿನ ಜನರ ಬೆರೆಯುತ್ತಾರ ಅಂತೆಲ್ಲ ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಆಗಾಗ ವಿದೇಶಕ್ಕೆ ಹೋಗುವ ಮೂಲಕ ಕ್ಷೇತ್ರದ ಜನರ ಟೀಕೆಗಳಿಗೆ ಗುರಿಯಾಗಿದ್ದರು. ಆದ್ರೆ, ದರ್ಶನ್ ಪುಟ್ಟಣ್ಣಯ್ಯ, ದಿನ ಕಳೆದಂತೆ ತಮ್ಮ ಕಾರ್ಯ ವೈಖರಿ ಬದಲಿಸಿಕೊಳುತ್ತಿದ್ದಾರೆ. ನಿತ್ಯವೂ ರೈತರು, ಕ್ಷೇತ್ರದ ಜನರ ಜೊತೆ ಬೆರೆಯುವುದು, ಅವರ ಸಮಸ್ಯೆಗಳಿಗೆ ಧನಿಯಾಗಿ, ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮೇಲುಕೋಟೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರಕ್ಕಾಗಿ ವಿಶೇಷ ಆ್ಯಪ್ ( Application) ಸಿದ್ಧಪಡಿಸಿದ್ದಾರೆ.
ರಾಜ್ಯ ಸರ್ಕಾರ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಎಂಬ ಯೋಜನೆ ಜಾರಿ ಮಾಡಿದೆ. ಆ ಕಾರ್ಯಕ್ರಮವನ್ನ ನಿರಂತರವಾಗಿ ಸದ್ಭಳಕೆ ಮಾಡಿಕೊಳ್ಳುತ್ತಿರುವ ಶಾಸಕರಲ್ಲಿ ದರ್ಶನ್ ಪುಟ್ಟಣ್ಣಯ್ಯ ಮುಂಚೂಣಿಯಲ್ಲಿದ್ದಾರೆ ಅಂದ್ರೆ ತಪ್ಪಲ್ಲ. ಯಾಕಂದ್ರೆ, ಈಗಾಗಲೇ ದರ್ಶನ್ ಪುಟ್ಟಣ್ಣಯ್ಯ ತಮ್ಮ ಕ್ಷೇತ್ರದ ಆರೇಳು ಪಂಚಾಯಿತಿಗಳಲ್ಲಿ ಈ ಯೋಜನೆಯನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ, ಮನೆ ಮನೆಗೆ ಸರ್ಕಾರಿ ಸೇವೆ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರಾಜ್ಯದಲ್ಲೇ ಮೊದಲು ಎಂಬಂತೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದಾರೆ. ಆ ಆಪ್ ಮೂಲಕ ಕ್ಷೇತ್ರದ ಮತದಾರರ ಸಮಸ್ಯೆಗಳನ್ನ ಪಟ್ಟಿ ಮಾಡಿ, ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗುವ ಮೊದಲು ಅಮೆರಿಕಾದಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದಲ್ಲೇ ಸ್ವಂತ ಉದ್ಯಮ ಸ್ಥಾಪಿಸಿದ್ದರು. ಈಗ ಶಾಸಕರು ತಮ್ಮ ಮೂಲ ವೃತ್ತಿ ಮೂಲಕವೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷ ಮೊಬೈಲ್ ಆ್ಯಪ್ ಕ್ರಿಯೇಟ್ ಮಾಡಿರುವ ಶಾಸಕರು, ಆ ಆ್ಯಪ್ ಮೂಲಕ ಜನರ ಸಮಸ್ಯೆಗಳನ್ನ ಪಟ್ಟಿ ಮಾಡುತ್ತಿದ್ದಾರೆ.ಮನೆ ಮನೆಗೆ ತೆರಳಿ ಅವರ ಮತದಾರ ಪಟ್ಟಿ ಅಪ್ಲೋಡ್ ಮಾಡಿ. ಬಳಿಕ ಜನರ ಸಮಸ್ಯೆ, ಬೇಡಿಕೆ ಆಲಿಸಿ, ಪಟ್ಟಿ ಮಾಡಿ ಅದನ್ನ ಆ್ಯಪ್ ಗೆ ಅಪ್ಲೋಡ್ ಮಾಡಲು ವಿಶೇಷ ತಂಡ ರಚನೆ ಮಾಡಲಾಗಿದೆ.
ಜನರ ಸಮಸ್ಯೆಗಳನ್ನ ಆಪ್ ನಲ್ಲಿ ಪಟ್ಟಿ ಮಾಡಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರವಾನೆ ಮಾಡಲಾಗುತ್ತೆ. ಪಟ್ಟಿ ಮಾಡಿದ ಸಮಸ್ಯೆಗಳ ಪರಿಹಾರದ ಫಾಲೋ ಅಪ್ ಅನ್ನು ಶಾಸಕರ ಕಚೇರಿ ಸಿಬ್ಬಂದಿ ಮಾಡಲಿದ್ದಾರೆ. ಮನೆ ಮನೆಗಳಿಗೆ ತೆರಳಿ ಜನರ ಸಮಸ್ಯೆ ಪಟ್ಟಿ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಕಾರ್ಯದರ್ಶಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನ ಒಳಗೊಂಡ ತಂಡ ರಚಿಸಲಾಗಿದೆ. ಈ ಆ್ಯಪ್ ನಿಂದ ಸರ್ಕಾರಿ ಕಚೇರಿಗಳಿಗೆ ಜನ ಅಲೆಯುವುದನ್ನ ತಪ್ಪಿಸುತ್ತಿದೆ ಅಂತಾರೆ ಜನರು.
ಸಾಮಾನ್ಯವಾಗಿ ಸಮಸ್ಯೆಗಳ ಪಟ್ಟಿ ಹಿಡಿದು ಜನ್ರು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಹೋಗೋದು ಸಹಜ. ಆದ್ರೆ, ಮೇಲುಕೋಟೆ ಶಾಸಕರು ಮನೆ ಬಾಗಿಲಿಗೆ ತೆರಳಿ ಮೊಬೈಲ್ ಆಪ್ ಮೂಲಕ ಜನರ ಸಮಸ್ಯೆಗಳ ಪಟ್ಟಿ ಮಾಡುತ್ತಿರುವುದುವಿಶೇಷ. ದರ್ಶನ್ ಪುಟ್ಟಣ್ಣಯ್ಯ ಅವರ ಜನಪರ ಕಾಳಜಿಗೆ ಪ್ರಶಂಸೆ ವ್ಯಕ್ತವಾಗಿದ್ದು, ಇದೇ ಮಾದರಿಯಲ್ಲಿ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನ ಆಲಿಸುವ ಪ್ರಯತ್ನ ಮಾಡಲಿ, ಸರ್ಕಾರ ಈ ಪ್ರಯೋಗವನ್ನ ರಾಜ್ಯಾದ್ಯಂತ ವಿಸ್ತರಿಸಲಿ ಎನ್ನುವುದು ನಮ್ಮ ಆಶಯ.