ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಾಗಿದೆ: ಮಂಡ್ಯದಲ್ಲಿ ಎಚ್ಡಿಕೆ ಸ್ಪರ್ಧೆ ಬಗ್ಗೆ ಸಚಿವ ವ್ಯಂಗ್ಯ
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಅದರಂತೆ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಿಎಸ್ ಪುಟ್ಟರಾಜು ಕಣಕ್ಕಿಳಿಯಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದೀಗ ಕುಮಾರಸ್ವಾಮಿ ಅವರೇ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಈ ಬಗ್ಗೆ ಸಚಿವ ಎನ್ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯ, ಮಾ.26: ಆರಂಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಸಿಎಸ್ ಪುಟ್ಟರಾಜು (CS Puttaraju) ಅವರನ್ನು ಕಣಕ್ಕಿಳಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಸ್ವತಃ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರೇ ಮಂಡ್ಯದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ತಾವೇ ಅಭ್ಯರ್ಥಿ ಆಗುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತಾಗಿದೆ. ಒಳ್ಳೆ ಹುಡುಗಿ ಇದ್ದಾಳೆ ಈ ಬಾರಿ ನಾನೇ ಮದುವೆ ಆಗುತ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಅಲ್ಲದೆ, ಒಂದು ತಿಂಗಳಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ: ಯೋಗೇಶ್ವರ್ಗೆ ಕಾಂಗ್ರೆಸ್ ಗಾಳ
ಬುಟ್ಟಿಯೊಳಗೆ ನಾಗರಹಾವು ಇದೆ, ಬಿಡುತ್ತೇವೆ ಅಂತ ಹೇಳುತ್ತಿರುವ ಕುಮಾರಸ್ವಾಮಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೋದ ಕಡೆಯೆಲ್ಲಾ ನನ್ನ ಕರ್ಮ ಭೂಮಿ ಅಂತಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ. ಚಿಕ್ಕಬಳ್ಳಾಪುರಕ್ಕೂ, ತುಮಕೂರಿಗೂ ಹೋಗಿ ಬಂದಿದ್ದಾರೆ. ಪಾಪ ಆ ಪುಟ್ಟರಾಜು ಕೈಯಲ್ಲಿ ಸಭೆ ಮಾಡಿಸಿದರು. ಆತ ಎಲ್ಲಾ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಕುಮಾರಸ್ವಾಮಿ ಅವರು ಹುಡಿಗಿ ಚೆನ್ನಾಗಿದ್ದಾಳೆ ನಾನೆ ಮದ್ವೆ ಆಗುತ್ತೇನಿ ಅಂತಿದ್ದಾರೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರನ್ನ ನಿಂದಿಸಿದ್ದರು. ಈಗ ಸಹೋದರಿ, ಅಕ್ಕ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಮಾತು ಆಡಿದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ನನ್ನ ಮಗ ಗೆದ್ದರೂ ಒಂದೇ ಅಕ್ಕ ಗೆದ್ದರು ಒಂದೆ ಎನ್ನಬಹುದಿತ್ತು ಎಂದು ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಟಾಂಗ್ ಕೊಟ್ಟರು.
ಇವತ್ತು ನನ್ನ ಬಗ್ಗೆನೂ ಸಹ ಕುಮಾರಸ್ವಾಮಿ ಮಾತನಾಡಿದ್ದಾರೆ. ನಾನು ಯಾವತ್ತು ಅವರನ್ನ ವೈರಿಗಳು ಅಂತ ಕರೆಯಲ್ಲ. ಅವರು ನನಗೆ ಸ್ನೇಹಿತರು, ಯಾವತ್ತು ನನಗೆ ಅವರು ವೈರಿ ಅಲ್ಲ. ಅವರು ನನ್ನನ್ನು ವೈರಿ ಅಂತ ಕರೆದಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ