AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯಕ್ಕೆ ಮೋದಿ ಭೇಟಿ, ಮದುವೆ ಸಮಾರಂಭಕ್ಕೆ ತಟ್ಟಿದ ಬಿಸಿ; ಟಿವಿ9 ಮುಂದೆ ಅಳಲು ತೋಡಿಕೊಂಡ ವರನ ತಂದೆ

ಮೋದಿ ಆಗಮನದ ಬಿಸಿ ಮದುವೆ ಸಮಾರಂಭಕ್ಕೂ ತಟ್ಟಿದೆ. ಮೋದಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿರುವ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದ್ದು ಪೊಲೀಸರ ಕೆಲ ನಿರ್ಬಂಧಗಳು ಮತ್ತು ರಸ್ತೆ ಬದಲಾವಣೆಯಿಂದಾಗಿ ಮದುವೆ ಸಮಾರಂಭಕ್ಕೆ ಸಮಸ್ಯೆ ಎದುರಾಗಲಿದೆ.

ಆಯೇಷಾ ಬಾನು
|

Updated on:Mar 12, 2023 | 8:33 AM

Share

ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ಇಂದು(ಮಾರ್ಚ್ 12) ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಮಿಸಲಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಖಾಕಿ‌ ಕಟ್ಟೆಚ್ಚರ ವಹಿಸಿದೆ. ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆದ್ರೆ ಮೋದಿ ಆಗಮನದ ಬಿಸಿ ಮದುವೆ ಸಮಾರಂಭಕ್ಕೂ ತಟ್ಟಿದೆ. ಮೋದಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿರುವ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದ್ದು ಪೊಲೀಸರ ಕೆಲ ನಿರ್ಬಂಧಗಳು ಮತ್ತು ರಸ್ತೆ ಬದಲಾವಣೆಯಿಂದಾಗಿ ಮದುವೆ ಸಮಾರಂಭಕ್ಕೆ ಸಮಸ್ಯೆ ಎದುರಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲು ಸಾಧ್ಯವಾಗದೆ ಮಾಡಿರುವ ಎಲ್ಲಾ ತಯಾರಿ ವೇಸ್ಟ್ ಆಗಲಿದೆ.

ಮಾರ್ಚ್ 12ರಂದು ಚಿಕ್ಕೇಗೌಡನ ಬಡಾವಣೆಯಲ್ಲಿರುವ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಸಮುದಾಯ ಭವನದಲ್ಲಿ ಮೇಘನ ಎಂ ಗೌಡ ಹಾಗೂ ಸುನೀಲ್ ಎಂ ಗೌಡ ಎಂಬುವವರ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ವಧು, ಮಂಡ್ಯ ನಗರದ ಸ್ವರ್ಣಸಂದ್ರದ ವರನಿಗೆ 6 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಈ ಸಮುದಾಯ ಭವನವನ್ನು ಬುಕ್ ಮಾಡಲಾಗಿದೆ. ಮೂರು ಸಾವಿರ ಜನರಿಗೆ ಆಹ್ವಾನ‌ ನೀಡಲಾಗಿದೆ. ಆದ್ರೆ ಮೋದಿ ಮಂಡ್ಯಕ್ಕೆ ಆಗಮಿಸುವ ಹಿನ್ನೆಲೆ ರಸ್ತೆ ಬಂದ್ ಮಾಡಲಾಗಿದ್ದು ಕೆಲವು ನಿರ್ಬಂಧನೆಗಳನ್ನು ಹೇರಲಾಗಿದೆ. ಹೀಗಾಗಿ ಈಗ 500 ಜನ ಬರುವುದು ಕಷ್ಟವಾಗಿದೆ ಎಂದು ಟಿವಿ9 ಬಳಿ ವಧುವಿನ ತಂದೆ ನಾಗೇಶ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ ಮೋದಿ ಮೇನಿಯಾ: ಇಲ್ಲಿದೆ ಪ್ರಧಾನಿಯ ಪ್ರವಾಸದ ಸಂಪೂರ್ಣ ಮಾಹಿತಿ

ನಿಜವಾಗಿಯೂ ತುಂಬಾ ತೊಂದರೆಯಾಗಿದೆ. ಮೈಸೂರು ಬೆಂಗಳೂರು ಮಂಡ್ಯದ ವಿವಿಧ ಭಾಗಗಳಿಂದ ಜನ ಬರಬೇಕಾಗಿತ್ತು. ಆದರೆ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಮದುವೆ ಸಮಾರಂಭಗಳಿಗೆ ಬರುವವರಿಗೆ ಅವಕಾಶ ಮಾಡಿ‌ಕೊಡಬೇಕಾಗಿತ್ತು. ಕಲ್ಯಾಣ ಮಂಟಪದವರು ಸಹಾ ನಾವು ಏನು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಲ್ಯಾಣಮಂಟಪವನ್ನಂತು ಬದಲಿಸಲು ಸಾಧ್ಯವಿಲ್ಲ. ಇದರಿಂದ ತುಂಬಾ ಬೇಜಾರಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ಎಲ್ಲೆಲ್ಲೂ ಹದ್ದಿನಕಣ್ಣು, ರಾಷ್ಟ್ರೀಯ ಹೆದ್ದಾರಿ ಬಂದ್‌

ಮಂಡ್ಯಕ್ಕೆ ಪ್ರಧಾನಿ ಬರುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಹದ್ದಿನಕಣ್ಣಿಡಲಾಗಿದೆ. ಇನ್ನು ಬೆಳಗ್ಗೆ 7 ಗಂಟೆಯಿಂದಲೇ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರ ಬಂದ್‌ ಆಗಲಿದ್ದು, ಸಮಾವೇಶಕ್ಕೆ ಬರೋ ವಾಹನಗಳಿಗೆ ಮಾತ್ರ ಬೆಳಗ್ಗೆ 9.30 ರವರೆಗೆ ಪ್ರವೇಶ ಇರಲಿದೆ.

ಮೈಸೂರು-ಬೆಂಗಳೂರು ಮಾರ್ಗದ ವಾಹನಗಳಿಗೆ ಬದಲಿ ಮಾರ್ಗ ಮಾಡಲಾಗಿದೆ. ಮೈಸೂರಿನಿಂದ ಸಂಚರಿಸುವ ವಾಹನಗಳು ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕನಕಪುರ ಮೂಲಕ ಬೆಂಗಳೂರಿಗೆ ಎಂಟ್ರಿ ಕೊಡಬೇಕಿದೆ. ಮೈಸೂರಿನಿಂದ ಮಂಡ್ಯ ಮೂಲಕ ತುಮಕೂರಿಗೆ ಹೋಗುವ ವಾಹನಗಳು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಹೋಗಲು ಅವಕಾಶವಿದೆ. ಬೆಂಗಳೂರು ನಗರದಿಂದ ಮೈಸೂರಿಗೆ ತೆರಳುವ ವಾಹನಗಳು ಬೆಂಗಳೂರಿನಿಂದ ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕಿರುಗಾವಲು, ಬನ್ನೂರು ಮೂಲಕ ಮೈಸೂರಿಗೆ ತೆರಳಬಹುದು. ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು, ಬೆಂಗಳೂರಿನಿಂದ ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬಹುದು.

ಮೋದಿ ಸಂಚರಿಸುವ ಮಾರ್ಗದಲ್ಲಿ ಡ್ರೋನ್​​ ಹಾರಾಟ ನಿಷೇಧ

ಹೈವೇ ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಮೋದಿ ಸಂಚರಿಸುವ ಮಾರ್ಗದಲ್ಲಿ ಡ್ರೋನ್​​ ಹಾರಾಟ ನಿಷೇಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಮೋದಿ ಸಂಚರಿಸುವ ಮಾರ್ಗದ ಸುತ್ತ 15 ಕಿ.ಮೀ.ವ್ಯಾಪ್ತಿಯಲ್ಲಿ ಮಾನವರಹಿತ ಎಲೆಕ್ಟ್ರಾನಿಕ್ಸ್​ ವಸ್ತು, ಡ್ರೋನ್​​​, ಹೆಲಿಕ್ಯಾಮ್​​ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:33 am, Sun, 12 March 23