ಮಂಡ್ಯದಲ್ಲಿ ಡಿಸಿ, ಎಸ್ಪಿ ಮುಂದೆಯೇ ರೌಡಿಶೀಟರ್ಗೆ ಸನ್ಮಾನ ಮಾಡಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಂಡ್ಯ ಜಿಲ್ಲಾಧಿಕಾರಿ, ಎಸ್ಪಿ ಎದುರೇ ರೌಡಿಶೀಟರ್ಗೆ ಸನ್ಮಾನ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡುವ ಪೊಲೀಸರ ಎದುರೇ ಒಬ್ಬ ರೌಡಿಶೀಟರ್ಗೆ ಸನ್ಮಾನ ಮಾಡುತ್ತಾರೆ ಎಂದರೆ ಏನರ್ಥ? ಸಮಾಜಕ್ಕೆ ಈ ಶಾಸಕರು ನೀಡುತ್ತಿರುವ ಸಂದೇಶವಾದರೂ ಏನು? ಎಂಬ ಪ್ರಶ್ನೆ ಎದ್ದಿದೆ.
ಮಂಡ್ಯ, ಅ.19: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ (Ramesha Bandisiddegowda) ಅವರು ಮಂಡ್ಯ ಜಿಲ್ಲಾಧಿಕಾರಿ, ಎಸ್ಪಿ ಎದುರೇ ಅಧಿಕಾರಿಗಳ ಕೈಯಿಂದ ರೌಡಿಶೀಟರ್ಗೆ ಸನ್ಮಾನ ಮಾಡಿಸಿದ್ದಾರೆ. ಸನ್ಮಾನ ಸ್ವೀಕರಿಸಿದ ನಂತರ ರೌಡಿಶೀಟರ್, ಶಾಸಕರ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ಶಾಸಕ ರಮೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N.Chaluvarayaswamy) ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ.
ಕೆಆರ್ಎಸ್ನಲ್ಲಿ ನೃತ್ಯಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯನೂ ಆಗಿರುವ ರೌಡಿ ಶೀಟರ್ ದೇವರಾಜು ಅಲಿಯಾಸ್ ಬುಲ್ಲಿ ಎಂಬಾತನಿಗೆ ಶಾಸಕ ರಮೇಶ್ ಅವರು ಅಧಿಕಾರಿಗಳ ಕೈಯಿಂದ ಸನ್ಮಾನಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.
ಹಲವಾರು ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ದೇವರಾಜು, ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ವೇದಿಕೆಗೆ ಕರೆದು ಗೌರವ ಸಮರ್ಪಣೆ ಮಾಡಲಾಗಿದೆ. ಶಾಸಕರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದಿಂದ ಗೌರವ ಸಮರ್ಪಣೆ ಮಾಡಲಾಗಿದೆ.
ಇದನ್ನೂ ಓದಿ: ಒಕ್ಕಲಿಗರ ಬಗ್ಗೆ ಸಾಹಿತಿ ಪ್ರೊ. ಭಗವಾನ್ ಅವಹೇಳನಕಾರಿ ಹೇಳಿಕೆ: ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಎಸ್ಪಿಗೆ ದೂರು
ರೌಡಿ ಶೀಟರ್ಗೆ ಸನ್ಮಾನಿಸಿದ ವೇದಿಕೆಯಲ್ಲಿ ಮಾತನಾಡುತ್ತಾ ತಮ್ಮನ್ನೇ ಉದಾಹರಣೆಯನ್ನಾಗಿಕೊಂಡು ಸಮರ್ಥನೆ ಮಾಡಿಕೊಂಡ ಶಾಸಕ ರಮೇಶ್ ಬಂಡಿಸಿದ್ದೇಗೌಡ, ತನ್ನ ಮೇಲೂ ಸಿಬಿಐ ಕೇಸ್ ಇದೆ. ಹಾಗಾದರೆ ನಾನೂ ಕಾರ್ಯಕ್ರಮಕ್ಕೆ ಹೋಗಬಾರದು. ಆಪಾದನೆ ಇದ್ದ ಮಾತ್ರಕ್ಕೆ ಅಪರಾಧಿ ಅಲ್ಲ ಎಂದು ಹೇಳಿ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.
ಐದು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ರೌಡಿಶೀಟರ್ಗಳು ರಾಜಕೀಯಕ್ಕೆ ಎಂಟ್ರಿಕೊಡಲು ಆರಂಭಿಸಿದ್ದರು. ರೌಡಿಶೀಟರ್ಗಳಾದ ಸೈಲೆಂಟ್ ಸುನಿಲ, ಬೆತ್ತನಗೆರೆ ಶಂಕರ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಅನೇಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ರೌಡಿಶೀಟರ್ ಫೈಟರ್ ರವಿ ಸ್ವಾಗತಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಅಷ್ಟೇ ಅಲ್ಲದೆ, ಮಂಡ್ಯದಲ್ಲಿ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರು ಚುನಾವಣೆ ಸಂದರ್ಭದಲ್ಲಿ ವರುಣ್ ಗೌಡ ಅಲಿಯಾಸ್ 202 ಹಾಗೂ ಪ್ರಶಾಂತ್ ಅಲಿಯಾಸ್ ಕುಳ್ಳಿ ಸೇರಿದಂತೆ ರೌಡಿಶೀಟರ್ಗಳ ಗ್ಯಾಂಗ್ ಅನ್ನೇ ರೆಡ್ ಕಾರ್ಪೆಟ್ ಹಾಕಿ ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 am, Thu, 19 October 23