ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ‌‌ ಇದೆ, ದುಡ್ಡಿನಿಂದ ಮಂಡ್ಯ ಜನರನ್ನ ಕೊಳ್ಳಲು ಆಗಲ್ಲ: ಸಂಸದೆ ಸುಮಲತಾ

| Updated By: ಆಯೇಷಾ ಬಾನು

Updated on: Mar 06, 2024 | 12:59 PM

ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ‌‌ ಇದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಡಾ.ರವೀಂದ್ರ ವಿರುದ್ಧ ಕಿಡಿಕಾರಿದ್ದಾರೆ. ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್‌ಲೈನ್ ಅಲ್ಲ. ಎಲ್ಲವೂ ಲಿಮಿಟ್​​ನಲ್ಲಿ ಇರಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ‌‌ ಇದೆ, ದುಡ್ಡಿನಿಂದ ಮಂಡ್ಯ ಜನರನ್ನ ಕೊಳ್ಳಲು ಆಗಲ್ಲ: ಸಂಸದೆ ಸುಮಲತಾ
ಸಂಸದೆ ಸುಮಲತಾ
Follow us on

ಮಂಡ್ಯ, ಮಾರ್ಚ್.06: ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ‌‌ ಇದೆ. ಪಕ್ಷಕ್ಕೆ ಕನೆಕ್ಷನ್‌ ಇಲ್ಲದವರನ್ನ ಅಭ್ಯರ್ಥಿ ಮಾಡಿದ್ದಾರೆ. ಬೂದನೂರ ಉತ್ಸವ ಸರ್ಕಾರಿ ಹಣದಲ್ಲಿ ನಡೆದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ (Mandya Lok Sabha Election) ಅಭ್ಯರ್ಥಿ ಎಂದು ಪರಿಚಯ ಮಾಡ್ತಾರೆ. ಸರ್ಕಾರಿ ಹಣ ಬಳಸಿ ನಿಮ್ಮ ಅಭ್ಯರ್ಥಿ ಪರಿಚಯಿಸುತ್ತೀರಾ? ಹಾಗಾದ್ರೆ ನೀವು ಹೇಗೆ ಎಲೆಕ್ಷನ್ ಮಾಡ್ತೀರಾ? ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿರುವವರಿಗೆ ಮಣೆ ಹಾಕುತ್ತಾರೆ. ಮಂಡ್ಯ ಜನ ದಡ್ಡರಲ್ಲ, ಯಾವ ಕಾರಣಕ್ಕೆ ಅಭ್ಯರ್ಥಿ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ದುಡ್ಡಿನಿಂದ ಮಂಡ್ಯ ಜನರನ್ನ ಕೊಂಡುಕೊಳ್ಳಲು ಆಗಲ್ಲ ಎಂದು ಸಂಸದೆ ಸುಮಲತಾ (Sumalatha Ambareesh) ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಲೋಕ ಸಭಾ ಚುನಾವಣೆ ಸಂಬಂಧ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ಸೇರದವರಿಗೆ ಟಿಕೆಟ್ ಯಾಕೆ ಎಂಬ ಕೆಲ ಬಿಜೆಪಿ ನಾಯಕ ಅಪಸ್ವರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಂಸದೆ, ಬಿಜೆಪಿ ಸೇರದಿರುವುದಕ್ಕೆ ಟೆಕ್ನಿಕಲ್ ಕಾರಣ ಇದೆ. ಈ ಅವಧಿ ಮುಗಿದ ಮೇಲೆ ಪಕ್ಷಕ್ಕೆ ಸೇರ್ಪಡೆ ಆಗ್ತೇನೆ. ಈ ವಿಚಾರ ದೊಡ್ಡದು ಮಾಡುವುದರಲ್ಲಿ ಅರ್ಥ ಇಲ್ಲ ಎಂದರು.

ಪದೇ ಪದೇ ಮಂಡ್ಯಗೆ ಭೇಟಿ ನೀಡುತ್ತಿರುವ ಬಗ್ಗೆ ಸುಮಲತಾ ಅವರು ಪ್ರತಿಕ್ರಿಯಿಸಿದ್ದು ಅಗತ್ಯಬಿದ್ದಾಗಲೆಲ್ಲಾ ನಾನು ಮಂಡ್ಯಕ್ಕೆ ಬಂದಿದ್ದೇನೆ. ಪಾರ್ಲಿಮೆಂಟ್ ಇದ್ದಾಗ ಮಂಡ್ಯಕ್ಕೆ ಬಂದಿಲ್ಲ. ಲೋಕಸಭಾ ಅವಧಿ ಮುಗಿತಾ ಬರುತ್ತಿದೆ. ಈಗ ಎಂಪಿ ಫಂಡ್ಸ್ ಬಳಸಿ ಕೆಲಸ ಆರಂಭಿಸಲಿಲ್ಲ ಎಂದರೆ ನೀತಿ ಸಂಹಿತೆ ಬರಲಿದೆ. ಆ ಕಾರಣಕ್ಕಾಗಿ ಹೆಚ್ಚೆಚ್ಚು ಮಂಡ್ಯ ಭೇಟಿ ಮಾಡಿ ಕೆಲಸ ಮಾಡ್ತಿದ್ದೀನಿ ಎಂದರು.

ಇದನ್ನೂ ಓದಿ:ಕಾಂಗ್ರೆಸ್​​ನಲ್ಲಿ ಮತ್ತೆ ದಲಿತ ಸಿಎಂ ಕೂಗು? ಕಿಚ್ಚು ಹಚ್ಚಿದ ಸಚಿವ ಡಾ ಮಹದೇವಪ್ಪ ಹೇಳಿಕೆ

ಮೋದಿಯಂತಹ ನಾಯಕ‌ ಸಿಕ್ಕಿರುವುದು ನಮ್ಮ ದೇಶದ ಸೌಭಾಗ್ಯ

ಬಿಜೆಪಿ ಪಕ್ಷ ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ, ನನ್ನ ವೈಯಕ್ತಿಕ. ಆದರೆ ಪಕ್ಷದಿಂದ ಬರುವುದೇ ಅಧಿಕೃತ ಘೋಷಣೆ. ಸಂಸದೆಯಾಗಿ ಸುಮಲತಾ ಕಾರ್ಯವೈಖರಿ ನೋಡಿ ಬಿಜೆಪಿ ಟಿಕೆಟ್ ನೀಡಲಿದೆ. ಕಳೆದ ಎಂಪಿಗಳು ಹಾಗೂ ನನ್ನ ಕೆಲಸಕ್ಕೂ ವ್ಯತ್ಯಾಸ ಇದೆ. ನರೇಂದ್ರ ಮೋದಿ ಅವರ ವಿಷನ್ ಅವರು ಕೆಲಸ ಮಾಡುವ ರೀತಿ, ಅವರ ಅಭಿವೃದ್ಧಿ ಮಂತ್ರ. ಪ್ರಧಾನ ಸೇವಕ ಎಂದು ಮೋದಿ ಅವರೇ ಹೇಳಿಕೊಳ್ತಾರೆ. ಬಿಜೆಪಿ ಪಕ್ಷದಿಂದ ಎಂಪಿ ಆದರೆ ಮೋದಿ ಅವ್ರ ಕೈ ಬಲಪಡಿಸಿದ ಹಾಗೇ ಆಗುತ್ತದೆ. ಮೋದಿ ಅವ್ರಂತ ನಾಯಕ‌ ಸಿಕ್ಕಿರುವುದು ನಮ್ಮ ದೇಶದ ಸೌಭಾಗ್ಯ ಎಂದರು.

ಡಾ.ರವೀಂದ್ರ ವಿರುದ್ಧ ಸಂಸದೆ ಸುಮಲತಾ ಕಿಡಿ

ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್‌ಲೈನ್ ಅಲ್ಲ. ಎಲ್ಲವೂ ಲಿಮಿಟ್​​ನಲ್ಲಿ ಇರಬೇಕು ಎಂದು ಡಾ.ರವೀಂದ್ರ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ ಗರಂ ಆಗಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆ ಮಾಡಿದ್ರು. ರಾಕ್‌ಲೈನ್‌ಗೆ ನಿರಂತರವಾಗಿ ಕರೆ ಮಾಡಿದ್ದೆಲ್ಲ ಗೊತ್ತಿದೆ. ಅವರ ಯೋಗ್ಯತೆ ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ರವೀಂದ್ರ ವಿರುದ್ಧ ಸಂಸದೆ ಸುಮಲತಾ ಕಿಡಿಕಾರಿದ್ದಾರೆ.

ಅಂಡರ್ ಪಾಸ್‌ಗಾಗಿ ಶಾಸಕ ಗಣಿಗ ರವಿ ಉಪವಾಸ ಸತ್ಯಾಗ್ರಹ ವಿಚಾರ ಸಂಬಂಧ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದರು. ಹನಕೆರೆ ಅಂಡರ್ ಪಾಸ್ ಅಪ್ರೂವಲ್ ಆಗಿದೆ. ಮಿನಿಸ್ಟರಿ ಇಂದ ಸಹಿ ಬಾಕಿ ಇದೆ ಅಷ್ಟೇ. ಮಂಡ್ಯ ಶಾಸಕರು ಬಹಳಷ್ಟು ಉತ್ಸುಕರಾಗಿದ್ದಾರೆ. ಆರಂಭವಾಗುವ ಕಾಮಗಾರಿಗೂ ಕ್ರೆಡಿಟ್ ತಗೋಬೇಕು ಅಂತಿದ್ದಾರೆ. ಹನಕೆರೆ ಅಂಡರ್ ಪಾಸ್ ವಿಚಾರದಲ್ಲಿ ಸಾಕಷ್ಟು ಸಭೆ ಮಾಡಿದ್ದೀನಿ. ಸ್ಲಂ ಬೋರ್ಡ್ ವಿಚಾರದಲ್ಲಿ ನನ್ನ ಶ್ರಮವಿತ್ತು. ಹಕ್ಕು ಪತ್ರ ಕೊಡಿಸುವಲ್ಲಿ ಶ್ರಮಿಸಿದ್ದೆ. ಈಗ ಬಂದೂ ಉದ್ಘಾಟನೆ ಅಂತಾರೆ. ಆಗಿರುವ ಕೆಲಸಗಳನ್ನು ನಾನೆ ಮಾಡಿದ್ದೇನೆ ಎನ್ನಬೇಡಿ. ಹಸಿ ಸುಳ್ಳನ್ನ ಜನರ ಮುಂದಿಡಬೇಡಿ. ನೀವು ಬಂದ 6 ತಿಂಗಳಲ್ಲಿ ಎಲ್ಲಾ‌ ಕೆಲಸ ಮಾಡಿಬಿಟ್ರಾ? ಉಪವಾಸ ಸತ್ಯಾಗ್ರಹ ಕೇವಲ ಕ್ರೆಡಿಟ್‌ಗಾಗಿ ಎಂದು ಸುಮಲತಾ ಅವರು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ