ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತಿಬ್ಬರು ಬಲಿ: ಓರ್ವ ಮಹಿಳೆ ಜೀವನ್ಮರಣ ಹೋರಾಟ!
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಮನೆ, ಊರು ಖಾಲಿ ಮಾಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೈನಾನ್ಸ್ ಕಿರುಕುಳಕ್ಕೆ ನಿನ್ನೆ ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಇಂದು ಮೃತಪಟ್ಟಿದ್ದಾರೆ. ಹಾಸನದಲ್ಲೂ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರಿನಲ್ಲಿ ಓರ್ವ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
![ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತಿಬ್ಬರು ಬಲಿ: ಓರ್ವ ಮಹಿಳೆ ಜೀವನ್ಮರಣ ಹೋರಾಟ!](https://images.tv9kannada.com/wp-content/uploads/2025/01/financeladydeath.jpg?w=1280)
ಮಂಡ್ಯ, ಜನವರಿ 29: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ (Micro finance) ಕಿರುಕುಳಕ್ಕೆ ಮತ್ತೊಂದು ಬಲಿ ಆಗಿದೆ. ನಿನ್ನೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಮಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವಂತಹ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರದಲ್ಲಿ ನಡೆದಿದೆ. ಪ್ರೇಮಾ(59) ಮೃತ ಮಹಿಳೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. 3 ತಿಂಗಳ ಕಂತು ಕಟ್ಟದ ಹಿನ್ನೆಲೆ 1 ವಾರದ ಹಿಂದೆಯಷ್ಟೇ ಪ್ರೇಮಾ ಮನೆ ಸೀಜ್ ಮಾಡಲಾಗಿತ್ತು. ಹೀಗಾಗಿ ಮನನೊಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಇಂದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಪ್ರೇಮಾ ಮೃತಪಟ್ಟಿದ್ದಾರೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹ ಶವಗಾರಕ್ಕೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಜೀವನ್ಮರಣ ಹೋರಾಟ
ಮಿಮ್ಸ್ ಆಸ್ಪತ್ರೆ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗಿದೆ. ಫೈನಾನ್ಸ್ ಕಂಪನಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದು, ಆಸ್ಪತ್ರೆ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಅವರೇ ಕಾರಣ: ಮೃತ ಪ್ರೇಮಾ ಮಗಳು
ಮೃತ ಪ್ರೇಮಾ ಮಗಳು ಮಾಣಿಕ್ಯ ಮಾತನಾಡಿದ್ದು, ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಅವರೇ ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂಪಾಯಿ ಹಣವನ್ನು ನಮ್ಮ ತಾಯಿ ಕಟ್ಟಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡಿದ್ದಾರೆ. ಈಗ ಇನ್ನೂ 6 ಲಕ್ಷ ರೂ. ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಮನೆ ಹತ್ತಿರ ಬಂದು ಗಲಾಟೆ ಮಾಡಿ ಮನೆ ಸೀಜ್ ಮಾಡಿದ್ದಾರೆ. ಇದಕ್ಕೆ ಮನನೊಂದು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದಾರೆ. ಈಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ. ಈಗ ನಮಗೆ ಯಾರು ದಿಕ್ಕು ಎಂದು ಅಳಲು ತೊಡಿಕೊಂಡಿದ್ದಾರೆ.
ಡಿಸಿ ಡಾ.ಕುಮಾರ್ ಹೇಳಿದ್ದಿಷ್ಟು
ಡಿಸಿ ಡಾ.ಕುಮಾರ್ ಹೇಳಿಕೆ ನೀಡಿದ್ದು, ಮೃತ ಪ್ರೇಮಾ ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಮಗಳ ಮದುವೆಗೆ ಸಾಲ ಮಾಡಿದ್ದರು. ಸಾಲ ತೆಗೆದುಕೊಂಡು ಆಗಾಗ ಕಂತು ಕಟ್ಟಿಕೊಂಡು ಬಂದಿದ್ದಾರೆ. ಕಳೆದ ಮೂರು ತಿಂಗಳು ಅವರು ಕಂತು ಕಟ್ಟಿಲ್ಲ. ಹೀಗಾಗಿ ಉಜ್ಜೀವನ್ ಬ್ಯಾಂಕ್ ಅವರು ಕೋರ್ಟ್‌ನಿಂದ ಮನೆ ಜಪ್ತಿ ಮಾಡಲು ಆರ್ಡರ್ ತಂದು ಮನೆ ಜಪ್ತಿ ಮಾಡಿದ್ದಾರೆ ಎಂದರು.
ಇದಕ್ಕೆ ಮನನೊಂದು ಪ್ರೇಮ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಕೋರ್ಟ್ ಆರ್ಡರ್ ಇರುವುದರಿಂದ ನಾವು ಇತಿ ಮಿತಿಯಲ್ಲಿ ಕೆಲಸ ಮಾಡಬೇಕು. ಜಪ್ತಿ ಮಾಡಿರುವ ಮನೆಯನ್ನು ವಾಪಸ್ಸು ನೀಡಲು ಬ್ಯಾಂಕ್ ಅವರಿಗೆ ಹೇಳಿದ್ದೇನೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ. ಈಗ ಇವರ ಸಾಲ ಎಷ್ಟಿದೆ ಎಂದು ಬ್ಯಾಂಕ್‌ನವರಿಂದ ಮಾಹಿತಿ ಕೇಳಿದ್ದೇವೆ. ಅವರು ಬಂದು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಾಸನದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ: ರೈತ ಆತ್ಮಹತ್ಯೆ
ಹಾಸನ ಜಿಲ್ಲೆ ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ ಹಿನ್ನಲ್ಲೆ ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ರೈತ ಹೇಮಂತ್(52) ಮೃತ ವ್ಯಕ್ತಿ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್ ಎಂದು ಮಹಿಳೆಗೆ ವಂಚನೆ: ಆರೋಪಿ ಅಂದರ್
ವಿವಿಧ ಸಂಘಗಳಲ್ಲಿ ಪತ್ನಿ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿದ್ದಾರೆ. ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಇನ್ನು ತುಮಕೂರಿನಲ್ಲಿ ಕೂಡ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲುತ್ತಿಲ್ಲ. ಸಿಬ್ಬಂದಿ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿಮ ಅಲ್ಲಾಳಸಂದ್ರ ಹನುಮಂತಪುರದಲ್ಲಿ ನಡೆದಿದೆ. ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮರ್ಯಾದೆಗೆ ಅಂಜಿ ಮಾತ್ರೆ ನುಂಗಿ ಮಂಗಳಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.