ಮಂಡ್ಯ, ಜನವರಿ 12: ಕರ್ನಾಟಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ, ರಾಜಕೀಯ ವಾಗ್ಯುದ್ಧಕ್ಕೂ ಕಾರಣವಾಗಿದ್ದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ (Karnataka State Waqf Board) ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಪುರಾತನ ಮಂಟಪಗಳು, ಸ್ಮಾರಕಗಳು ಹಾಗೂ ಪುರಾತತ್ವ ಇಲಾಖೆಯ ಆಸ್ತಿ ಮತ್ತು ರೈತರ ಜಮೀನೂ ಸೇರಿದಂತೆ 70ಕ್ಕೂ ಹೆಚ್ಚು ಭೂಮಿ ಪಹಣಿಯಲ್ಲಿ “ಕರ್ನಾಟಕ ರಾಜ್ಯ ವಕ್ಫ್ ಮಂಡಳಿ” ಎಂದು ನಮೂದು ಆಗಿದೆ.
ಕಿರಂಗೂರ, ಕೆ.ಶೆಟ್ಟಹಳ್ಳಿ, ಬಾಬಾರಾಯನಕೊಪ್ಪಲು, ದರಸಕುಪ್ಪೆ ಗ್ರಾಮಗಳ 50ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಮಂಡಳಿ ಅಂತ ನಮೂದಾಗಿದೆ. ರಾಜ್ಯ ಸರ್ಕಾರದ ಈ ಯಡವಟ್ಟಿಗೆ ಅನ್ನದಾತರು ಕಂಗಾಲಾಗಿದ್ದಾರೆ.
ಪಹಣಿಯಲ್ಲಿನ ಸ್ವಾಧೀನದಾರರ ಕಾಲಂನಲ್ಲಿ ರೈತರ ಹೆಸರಿದ್ದರೂ, ಋಣ ಕಲಂ ಅಂದರೆ ಕಲಂ 11ರಲ್ಲಿ ನಲ್ಲಿ ವಕ್ಫ್ ಮಂಡಳಿ ಹೆಸರು ಇದೆ. ಸಾಮಾನ್ಯವಾಗಿ ಜಮೀನಿನ ಮೇಲೆ ಸಾಲ ತೆಗೆದುಕೊಂಡರೆ ಅಥವಾ ನಂಬಿಕೆ ಕ್ರಯ ಮಾಡಿಸಿದರೆ ಮಾತ್ರ ಋಣ ಕಾಲಂನಲ್ಲಿ ಆ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ನಮೂದಿಸಲಾಗುತ್ತದೆ. ವಕ್ಫ್ ಮಂಡಳಿ ಹೆಸರು ನಮೂದಾಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಎಲ್ಲೂ ಸಾಲ ಸಿಗದೆ, ಜಮೀನು ಮಾರಾಟ ಮತ್ತು ಕೊಂಡುಕೊಳ್ಳಲೂ ಆಗದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಗೆ ಕಾಲಿಟ್ಟ ವಕ್ಫ್: ಮನೆ, ಸರ್ಕಾರಿ ಕಟ್ಟಡಗಳಿಗೆ ನೋಟಿಸ್, ಕಾನೂನು ಹೋರಾಟಕ್ಕೆ ಗ್ರಾಮಸ್ಥರು ಸಿದ್ಧ
ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದುಗೊಂಡಿದ್ದಕ್ಕೆ ಆಕ್ರೋಶ ಗೊಂಡಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹೀಗಾಗಿ, ರೈತರ ಪರವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಜನವರಿ 20ರಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿವೆ. ಅನ್ನದಾತರು ಜಾನುವಾರುಗಳೊಂದಿಗೆ ಬೀದಿಗಿಳಿಯಲಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿನ ಸರ್ಕಾರ ಶಾಲೆಯ ಸರ್ವೆ ನಂ 215ರ 30 ಗುಂಟೆ ಜಮೀನಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿತ್ತು. ವಕ್ಫ್ ಆಸ್ತಿ ಅಂತ 2015ರಲ್ಲೇ ಆಗಿದ್ದು, ಪಹಣಿ ಪರಿಶೀಲಿಸಿದಾಗ ತಿಳಿದುಬಂದಿತ್ತು. ವಕ್ಫ್ ಮಂಡಳಿ ಶಾಲೆ ಜಾಗ ಕಬಳಿಕೆಗೆ ಮುಂದಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು. ವಕ್ಫ ಆಸ್ತಿ ಅಂತ ನಮೂದು ಆಗಿದ್ದನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Sun, 12 January 25