ಭಕ್ತಿಯ ಪರಮಾವಧಿ.. ಬಾಯಿಗೆ ಬೀಗ ಹಾಕಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸುವ ಚುಂಚನಹಳ್ಳಿ ಗ್ರಾಮಸ್ಥರು
ಬಾಯಿ-ಕಿವಿಗೆ ಸರಳು ಚುಚ್ಚಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸುವ ಮೈಸೂರಿನ ಚುಂಚನಹಳ್ಳಿ ಮಾರಿಹಬ್ಬ ಜಾತ್ರೋತ್ಸವವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸಿದ್ದಾರೆ.
ಮೈಸೂರು: ಹಬ್ಬ ಎಂದರೆ ಸಾಕು ಎಲ್ಲೆಲ್ಲೂ ಸಂಭ್ರಮ. ಹಬ್ಬಗಳಲ್ಲಿಯೂ ವಿವಿಧ ತೆರೆನಾದ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತೇವೆ. ಆಯಾ ಪ್ರದೇಶಕ್ಕೆ ಸೀಮಿತವಾಗಿ, ಅಲ್ಲಿನ ಜನರ ಸಂಸ್ಕೃತಿ ಆಚಾರ ವಿಚಾರಕ್ಕೆ ಸಂಬಂಧಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದುಂಟು. ಅದೇ ರೀತಿ ಮೈಸೂರು ಜಿಲ್ಲೆಯ ಚುಂಚನಹಳ್ಳಿ ಮಾರಿಹಬ್ಬವೂ ಪ್ರತೀತಿ ಪಡೆದಿದೆ. ಹಾಗೆಯೇ ಸಾಂಪ್ರದಾಯಿಕವಾಗಿ ವಿಶೇಷ ಆಚರಣೆಯಿಂದ ಈ ಮಾರಿಹಬ್ಬವನ್ನು ಆಚರಿಸಲಾಗುತ್ತದೆ. ವಿಶೇಷವೆಂದರೆ ಬಾಯಿಗೆ ಬೀಗ ಹಾಕಿ ಆಚರಿಸುವ ಹಬ್ಬವಿದು. ಇದೆನಪ್ಪಾ? ಹಬ್ಬ ಅಂದಾಕ್ಷಣ ಎಲ್ಲೆಲ್ಲೂ ಮಾತನಾಡುತ್ತಾ, ನಗುತ್ತಾ ಸಂಭ್ರಮಿಸುವ ಬದಲಾಗಿ ಬಾಯಿಗೆ ಬೀಗ ಹಾಕಿಕೊಂಡು ಹೇಗೆ ಹಬ್ಬ ಆಚರಿಸುತ್ತಾರೆ ಎಂದೆಲ್ಲಾ ಆಶ್ಚರ್ಯ ಮೂಡುತ್ತದೆ.
ಚುಂಚನಹಳ್ಳಿ ಗ್ರಾಮದಲ್ಲಿ ಮಾರಿಹಬ್ಬದ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಜಾತ್ರೆಯ ವೇಳೆ ಹಲವಾರು ಕಟ್ಟುಪಾಡುಗಳಿವೆ. ಅವುಗಳನ್ನು ಪಾಲಿಸುತ್ತಾ, ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತದೆ. ವಿಶೇಷ ಏನೆಂದರೆ, ಜಾತ್ರೆಯಲ್ಲಿ ಬಾಯಿ, ಕಿವಿ, ಕತ್ತಿಗೆ ಸರಳು ಚುಚ್ಚಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸುತ್ತಾರೆ.
ಈ ಬಾರಿಯ ಹಬ್ಬದಲ್ಲಿ ಪುನೀತ್ ಎಂಬಾತ 12 ಸರಳುಗಳನ್ನ ಚುಚ್ಚಿಕೊಂಡು ಹಬ್ಬ ಆಚರಣೆ ಮಾಡಿದ್ದಾರೆ. ಪುನೀತ್ ಕುಟುಂಬ ವಂಶಪಾರಂಪರ್ಯವಾಗಿ ಕೆಲವು ವರ್ಷಗಳಿಂದ ಬಾಯಿಗೆ ಬೀಗ ಹಾಕಿಕೊಂಡು ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನಡೆದ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.
ವಿಶೇಷವಾಗಿ ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಜಾತ್ರೆ ವೇಳೆ ಹಲವು ಕಟ್ಟುಪಾಡುಗಳಿವೆ. ಬಟ್ಟೆ ಒಗೆಯುವಂತಿಲ್ಲ, ಬೇರೆ ಗ್ರಾಮಗಳಿಗೆ ತೆರಳುವಂತಿಲ್ಲ, ಪೊರಕೆಯಲ್ಲಿ ಕಸ ಗುಡಿಸುವಂತಿಲ್ಲ, ಒಗ್ಗರಣೆ ಹಾಕುವಂತಿಲ್ಲ ಹೀಗೆ ಕಟ್ಟುಪಾಡುಗಳನ್ನು ಆಚರಿಸುತ್ತಾ ಭಕ್ತರು ಹರಕೆ ನೆರವೇರಿಸುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಒಲೆ ಹಚ್ಚಿ ಮಡ ಸೇವೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ಅರಮನೆ ನಗರಿಯಲ್ಲಿ ಇಂದು ದಸರಾಗೆ ಚಾಲನೆ, ಸಿಂಪಲ್ ನಾಡಹಬ್ಬಕ್ಕೆ ತಯಾರಾದ ಮೈಸೂರು
ಇದನ್ನೂ ಓದಿ: ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್